ಹಾಸನ: ಹಾಸನದಲ್ಲಿ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಹಾಗೂ ಜೆಡಿಎಸ್ ನಡುವಿನ ಶೀಥಲ ಸಮರ ತಾರಕಕ್ಕೇರಿದೆ. ಇತ್ತೀಚೆಗೆ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಪ್ರಚಾರ ನಡೆಸಿದ ಬೆನ್ನಲ್ಲೇ ಬಿಜೆಪಿ ಮುಖಂಡನ ಮೇಲೆ ದಾಳಿ (Assault Case) ನಡೆದಿದೆ. ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿದ್ದಕ್ಕೆ ಬಿಜೆಪಿ ಮುಖಂಡನ ಮೇಲೆಯೇ ಪ್ರೀತಂಗೌಡ ಬೆಂಬಲಿಗರು ಎಂದು ಹೇಳಲಾದ 30ಕ್ಕೂ ಹೆಚ್ಚು ಯುವಕರ ಗುಂಪು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆ ವೇಳೆ ಬಿಜೆಪಿ ಮುಖಂಡನ ಸೈಬರ್ ಸೆಂಟರ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಪೀಠೋಪಕರಣ ಜಖಂಗೊಳಿಸಿದ್ದಾರೆ.
ಬಿಜೆಪಿಯ ಮಾಧ್ಯಮ ವಕ್ತಾರ ಐನೆಟ್ ವಿಜಯ್ ಕುಮಾರ್ ಹಲ್ಲೆಗೊಳಗಾದವರು. ನಗರದ ಎಂ.ಜಿ. ರಸ್ತೆಯಲ್ಲಿರುವ ವಿಜಯ್ ಕುಮಾರ್ ಅವರ ಐ ನೆಟ್ ಸೈಬರ್ ಸೆಂಟರ್ ಮೇಲೆ 30ಕ್ಕೂ ಹೆಚ್ಚು ಯುವಕರ ಗುಂಪು ಏಕಾಏಕಿ ದಾಳಿ ನಡೆಸಿದ್ದಾರೆ. ಹಲ್ಲೆ ವೇಳೆ ಪ್ರೀತಂಗೌಡ ವಿಚಾರಕ್ಕೆ ಯಾಕೋ ಬರುತ್ತೀಯಾ ಎಂದು ಬಿಜೆಪಿ ಮುಖಂಡನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಗಾಯಾಳುವನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂಗಡಿ ಮೇಲೆ ಕಲ್ಲು ತೂರಿ ಗಾಜು ಒಡೆದಿರುವ ಕಿಡಿಗೇಡಿಗಳು, ವಿಜಯ್ ಕುಮಾರ್ ಅವರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆಯ ವಿಡಿಯೊ ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಬಿಜೆಪಿ ಮುಖಂಡ ನಾನೇನೂ ಮಾಡಿಲ್ಲ ಎಂದರೂ ಬಿಡದೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಿಂದ ಪ್ರೀತಂಗೌಡ ತಂಡದ ಜತೆ ವಿಜಯ್ ಕುಮಾರ್ ಅಂತರ ಕಾಯ್ದುಕೊಂಡಿದ್ದರು ಎನ್ನಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಆಗಿರುವುದರಿಂದ ಪ್ರಜ್ವಲ್ ಜೊತೆ ಸೇರಿ ವಿಜಯ್ ಕುಮಾರ್ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ವಿಜಯ್ ಅವರ ಶಾಪ್‌ಗೆ ಪ್ರಜ್ವಲ್ ರೇವಣ್ಣ ಖುದ್ದು ಭೇಟಿಯಾಗಿ ಅಭಿನಂದಿಸಿದ್ದರು. ಇದೀಗ ಬಿಜೆಪಿ ಮುಖಂಡನ ಮೇಲೆಯೇ ದಾಳಿ ನಡೆದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಆಸ್ಪತ್ರೆಗೆ ಶಾಸಕ ಸ್ವರೂಪ್ ಪ್ರಕಾಶ್, ಭವಾನಿ ರೇವಣ್ಣ ಭೇಟಿ
ಇದನ್ನೂ ಓದಿ | Lok Sabha Election 2024: 47 ಮಂದಿಯ ಫೋನ್ ಕದ್ದಾಲಿಕೆ ಮಾಡಿರುವ ಎಚ್.ಡಿ. ಕುಮಾರಸ್ವಾಮಿ; ಮಾಗಡಿ ಬಾಲಕೃಷ್ಣ ಆರೋಪ
ಹಿಮ್ಸ್ ಆಸ್ಪತ್ರೆಗೆ ಜೆಡಿಎಸ್ ಶಾಸಕ ಸ್ವರೂಪ್ ಪ್ರಕಾಶ್, ಭವಾನಿ ರೇವಣ್ಣ ಭೇಟಿ ಮಾಡಿ ಬಿಜೆಪಿ ಮುಖಂಡ ಐನೆಟ್ ವಿಜಯ್‌ಕುಮಾರ್ ಅವರ ಆರೋಗ್ಯ ವಿಚಾರಿಸಿದರು. ಇನ್ನು ಘಟನೆ ಸಂಬಂಧ ಹಾಸನ ಡಿಸಿ, ಎಸ್‌ಪಿ ಅವರನ್ನು ಶಾಸಕ ಸ್ವರೂಪ್, ಬೇಲೂರು ಬಿಜೆಪಿ ಶಾಸಕ ಎಚ್.ಕೆ ಸುರೇಶ್ ಭೇಟಿಯಾಗಿ, ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವುದಾಗಿ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಭರವಸೆ ನೀಡಿದ್ದಾರೆ.