ಧಾರವಾಡ: ತಾಳ್ಮೆ ಕಳೆದುಕೊಂಡ ಬಸ್ ಕಂಡಕ್ಟರ್ವೊಬ್ಬ ವಿದ್ಯಾರ್ಥಿನಿಯ ಕಪಾಳಕ್ಕೆ ಭಾರಿಸಿರುವ (Assault Case) ಘಟನೆ ಧಾರವಾಡದ ಕೆಲಗೇರಿ ಬಡಾವಣೆ ಬಳಿ ನಡೆದಿದೆ. ಕೆಲಗೇರಿ ನಿವಾಸಿಯಾದ ಪ್ರಕೃತಿ ಎಂಬಾಕೆಗೆ ಕಂಡಕ್ಟರ್ ಕಪಾಳಮೋಕ್ಷ ಮಾಡಿದ್ದಾರೆ. ಸಾಧನಕೆರೆಯಲ್ಲಿ ಶಾಲೆಯಿಂದ ಮರಳಿ ಮನೆಗೆ ವಾಪಸ್ ಬರುವಾಗ ಈ ಘಟನೆ ನಡೆದಿದೆ.
ಧಾರವಾಡದಿಂದ ಮುಗದ ಗ್ರಾಮಕ್ಕೆ ಬಸ್ವೊಂದು ತೆರಳುತಿತ್ತು. ರಶ್ ಇದ್ದ ಬಸ್ಸಿನಲ್ಲಿ ಕಂಡಕ್ಟರ್ ಹಣವನ್ನು ಎಣಿಸಲು ಮುಂದಾಗಿದ್ದರು. ಈ ವೇಳೆ ಅಚಾನಕ್ ಆಗಿ ವಿದ್ಯಾರ್ಥಿನಿ ಪ್ರಕೃತಿಯ ಬ್ಯಾಗ್ ಕಂಡಕ್ಟರ್ಗೆ ಟಚ್ ಆಗಿದೆ. ಆಗ ಕಂಡಕ್ಟರ್ ಕೈಯಲ್ಲಿದ್ದ ಟಿಕೆಟ್ ಹಣವು ಕೆಳಗೆ ಬಿದ್ದಿತ್ತು. ಇದರಿಂದ ಕೆರಳಿ ಕೆಂಡವಾದ ಕಂಡಕ್ಟರ್ ಸಿಟ್ಟಿನಲ್ಲಿ ವಿದ್ಯಾರ್ಥಿನಿಯ ಕಪಾಳಕ್ಕೆ ಹೊಡೆದಿದ್ದಾರೆ. ಕಂಡಕ್ಟರ್ ಹೊಡೆತಕ್ಕೆ ಕೆನ್ನೆ ಮೇಲೆ ಬರೆ ಬಿದ್ದಿತ್ತು. ನೋವಿನಿಂದ ಬಸ್ ಇಳಿದ ಬಾಲಕಿ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.
ಪಾಲಕರ ಪ್ರತಿಭಟನೆ
ಬಾಲಕಿಗೆ ಕಂಡಕ್ಟರ್ ಕಪಾಳ ಮೋಕ್ಷ ಮಾಡಿದ್ದಕ್ಕೆ ಆಕ್ರೋಶಗೊಂಡ ಪಾಲಕರು ಹಾಗೂ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ನಡೆಸಿದರು. ಕಂಡಕ್ಟರ್ ವರ್ತನೆಗೆ ಕಿಡಿಕಾರಿ ಬಸ್ ತಡೆದು ಪ್ರತಿಭಟನೆ ನಡೆಸಿದರು. ಕಂಡಕ್ಟರ್ ಇಲ್ಲಿಗೆ ಬಂದು ಕ್ಷಮೆ ಕೇಳುವಂತೆ ಪಟ್ಟು ಹಿಡಿದರು. ಬಳಿಕ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಗ್ರಾಮಸ್ಥರ ಮನವೊಲಿಸಲು ಮುಂದಾದರು. ಕೊನೆಗೆ ಪ್ರತಿಭಟನಾ ಸ್ಥಳಕ್ಕೆ ಬಂದ ಕಂಡಕ್ಟರ್ ಪಾಲಕರ ಬಳಿ ಕ್ಷಮೆ ಕೇಳಿದ್ದರಿಂದ ಪ್ರಕರಣವು ಸುಖಾಂತ್ಯ ಕಂಡಿದೆ.
ಇದು ಫ್ರೀ ಬಸ್ ಎಫೆಕ್ಟಾ?
ಕರ್ನಾಟಕದಲ್ಲಿ ಸರ್ಕಾರಿ ಬಸ್ಗಳಲ್ಲಿ (Government bus) ಮಹಿಳೆಯರ ಉಚಿತ ಪ್ರಯಾಣಕ್ಕೆ (Free bus service) ಅವಕಾಶವಿರುವ ಶಕ್ತಿ ಯೋಜನೆ (Shakti scheme) ಜಾರಿಗೆ ಬಂದ ಬಳಿಕ ಬಸ್ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವಿನ ಸಂಬಂಧವೇ ಹದಗೆಟ್ಟು ಹೋಗಿದೆ. ಜನದಟ್ಟಣೆ, ಒತ್ತಡಗಳಿಂದ ಕಂಗೆಟ್ಟು ಹೋಗಿರುವ ಬಸ್ ಸಿಬ್ಬಂದಿ (KSRTC bus staff) ತಾಳ್ಮೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಕೇವಲ ಅವರಷ್ಟೇ ಅಲ್ಲ, ಬಸ್ನಲ್ಲಿ ಸೀಟ್ಗಾಗಿ ಪ್ರಯಾಣಿಕರು ಪರಸ್ಪರ ಕಿತ್ತಾಡಿಕೊಂಡು, ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದು ಇದೆ.
ಬೈಕ್ಗೆ ಗೂಡ್ಸ್ ವಾಹನ ಡಿಕ್ಕಿ; ಮಸಣ ಸೇರಿದ ಸರ್ಕಾರಿ ಶಾಲಾ ಶಿಕ್ಷಕ
ಚಿಕ್ಕೋಡಿ: ಅಥಣಿ- ಮದಭಾವಿ ರಸ್ತೆಯಲ್ಲಿ ಗೂಡ್ಸ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಸವಾರ ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಬೆಳಗಾವಿಯ ಅಥಣಿ ಪಟ್ಟಣ ಹೊರವಲಯದ ಗುಡ್ಡದ ಲಕ್ಷ್ಮಿ ದೇವಸ್ಥಾನ ಬಳಿ ಅಪಘಾತ (Road Accident) ಸಂಭವಿಸಿದೆ.
ರಾವಸಾಬ ರಾಮಪ್ಪ ಹಿಪ್ಪರಗಿ (57) ಮೃತ ದುರ್ದೈವಿ. ರಾವಸಾಬ ಮಸರಗುಪ್ಪಿ ಗ್ರಾಮದ ಕಲಕಟ್ಟಿ ಹಳ್ಳದ ತೋಟದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಶನಿವಾರ ಮುಂಜಾನೆ ಶಾಲೆಗೆಂದು ಬೈಕ್ನಲ್ಲಿ ತೆರಳುವಾಗ ಗೂಡ್ಸ್ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ