ಕೋಲಾರ: ಇಲ್ಲಿನ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ಹುಡುಗನೊಬ್ಬ ಹುಡುಗಿಗೆ ಹೋಳಿ ಬಣ್ಣ ಎರಚಿದ ಕಾರಣಕ್ಕೆ ಸಿಟ್ಟಿಗೆದ್ದ ಗುಂಪು ಆತನನ್ನು ಕಿಡ್ನ್ಯಾಪ್ (Assault Case) ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಮಧು ಎಂಬುವವನು ಹಲ್ಲೆಗೊಳಗಾದ ವಿದ್ಯಾರ್ಥಿಯಾಗಿದ್ದಾನೆ. ಹುಡುಗಿಯ ಸೂಚನೆ ಮೇರೆಗೆ ದಾನಹಳ್ಳಿ ಗ್ರಾಮದ ಡಿಎನ್‌ಡಿ ಮಧು ಎಂಬಾತ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಮಧು ಪೋಷಕರು ಈ ಸಂಬಂಧ ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಹಲ್ಲೆಗೊಳಗಾದ ಮಧು ಸರ್ಕಾರಿ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಅನುಪ್ರಿಯಾ ಎಂಬಾಕೆ ಕೋಲಾರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇವರಿಬ್ಬರು ಒಂದೇ ಗ್ರಾಮದವರಾಗಿದ್ದ ಕಾರಣ ನಿತ್ಯ ಒಂದೇ ಬಸ್‌ನಲ್ಲಿ ಸಂಚರಿಸುತ್ತಿದ್ದರು. ಹೋಳಿ ಹಬ್ಬ ಹಿನ್ನೆಲೆಯಲ್ಲಿ ಮಧು, ಅನುಪ್ರಿಯಾಗೆ ಬಣ್ಣವನ್ನು ಎರಚಿದ್ದಾನೆ.
ಈ ಘಟನೆ ನಡೆದು ಎರಡು ದಿನಗಳ ನಂತರ ಡಿಎನ್‌ಡಿ ಮಧು ಗ್ಯಾಂಗ್ ಸೇರಿ ಬಣ್ಣ ಎರಚಿತ ಮಧುವನ್ನು ಅಪಹರಣ ಮಾಡಿದ್ದಾರೆ. ಬಳಿಕ ಬಯಲು ನರಸಾಪುರ ಗಿಡಾನ್‌ನಲ್ಲಿ ಮಧುವನ್ನು ತಲೆ ಕೆಳಗಾಗಿ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಮಧುವಿಗೂ ದಾನಗಳ್ಳಿ ಗ್ರಾಮದ ಡಿಎನ್‌ಡಿ ಮಧುವಿಗೂ ಯಾವುದೇ ಸಂಬಂಧವಿಲ್ಲ. ಆದರೆ, ಅನುಪ್ರಿಯಾ ಸೂಚನೆಯಂತೆ ಹಲ್ಲೆ ಮಾಡಿದ್ದಾರೆ. ಬಳಿಕ ಗಾಯಾಳು ಮಧುವನ್ನು ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಪರಾರಿ ಆಗಿದ್ದಾರೆ.
ರಾಯಚೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಸ್ನೇಹಿತರ ನಡುವೆ ಕಾದಾಟ; ಶಾಲೆ ಮುಂಭಾಗವೇ ಚೂರಿ ಇರಿದ ಗೆಳೆಯ
ಇಲ್ಲಿನ ಜಯರಾಭಾದ್ ಶಾಲೆ ಮುಂಭಾಗ ತಡರಾತ್ರಿ ಬಾಲಕರಿಬ್ಬರು ಗಲಾಟೆ (Raichur News) ಮಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಬಾಲಕನೊಬ್ಬ ಮತ್ತೊಬ್ಬನಿಗೆ ಚೂರಿಯಿಂದ ಇರಿದಿದ್ದಾನೆ.
ಕ್ಷುಲ್ಲಕ ಕಾರಣಕ್ಕೆ ಬಾಲಕರಿಬ್ಬರ ನಡುವೆ ತಡರಾತ್ರಿ ಗಲಾಟೆ ನಡೆದಿದೆ. ಈ ವೇಳೆ ಬಾಲಕ ಚೂರಿ ಇರಿದು ಕ್ರೌರ್ಯ ಮೆರೆದಿದ್ದಾನೆ. ಗಾಯಗೊಳಗಾದ ಬಾಲಕ ಹಾಗೂ ಚೂರಿ ಇರಿದ ಬಾಲಕರಿಬ್ಬರೂ ಗೆಳೆಯರು ಎಂದು ತಿಳಿದು ಬಂದಿದೆ. ಗೆಳೆಯರಿಬ್ಬರು ಶಾಲೆ ಬಿಟ್ಟು ಓಡಾಡಿಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Theft Case: ಬೆಂಗಳೂರಲ್ಲಿ ಹೆಚ್ಚಾಯ್ತು ಚಪ್ಪಲಿ, ಶೂ ಕಳ್ಳರ ಹಾವಳಿ; ಅಪಾರ್ಟ್ಮೆಂಟ್‌ಗಳೇ ಟಾರ್ಗೆಟ್
ಗಾಯಾಳು ಬಾಲಕರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬಾಲಕನ ಕಿವಿಯ ಭಾಗಕ್ಕೆ ಚೂರಿ ಇರಿಯಲಾಗಿದೆ. ಆ ಚೂರಿಯನ್ನು ತೆಗೆಯಲು ವೈದ್ಯರು ಹರಸಾಹಸ ಪಡಬೇಕಾಯಿತು. ಹೀಗಾಗಿ ರಿಮ್ಸ್‌ನಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ