Site icon Vistara News

Assault Case: ಆಸ್ಪತ್ರೆಯಲ್ಲಿ ಯುವಕರ ದಾಂಧಲೆ; ತಮಗಿಂತ ಮೊದಲು ಹೋಗಿದ್ದಕ್ಕೆ ದಂಪತಿ ಮೇಲೆ ಹಲ್ಲೆ

#image_title

ಬೆಂಗಳೂರು: ಇಲ್ಲಿನ ಯಲಹಂಕದ ಅಟ್ಟೂರು ಬಡಾವಣೆಯಲ್ಲಿರುವ ಮೀರಜ್ ಆಸ್ಪತ್ರೆಯಲ್ಲಿ (Miraj Hospital) ಪುಂಡ ಯುವಕರು ದಾಂಧಲೆ ಮಾಡಿದ್ದಾರೆ. ಮಗುವಿನೊಂದಿಗೆ ಬಂದಿದ್ದ ದಂಪತಿ ಮೇಲೆ ಏಕಾಏಕಿ ಎರಗಿ ಹಲ್ಲೆ (Assault Case) ಮಾಡಿರುವ ಘಟನೆ ನಡೆದಿದೆ.

ಅಶ್ವಿನ್ ಮತ್ತು ದಿಲೀಪ್ ಎಂಬ ಪುಂಡ ಯುವಕರು ಯಲಹಂಕದ ನಿವಾಸಿಯಾದ ರಾಘವೇಂದ್ರ ಮತ್ತು ಸುಧಾ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ. ರಾಘವೇಂದ್ರ ಮತ್ತು ಸುಧಾ ದಂಪತಿ ಮೀರಜ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ಮಗು ಜತೆ ಬಂದಿದ್ದರು. ಈ ವೇಳೆ ಅಶ್ವಿನ್ ಮತ್ತು ದಿಲೀಪ್ ಕೂಡ ಆಸ್ಬತ್ರೆಗೆ ಬಂದಿದ್ದರು.

ಈ ವೇಳೆ ಡಾಕ್ಟರ್ ಬಳಿ ತೆರಳುವ ವಿಚಾರಕ್ಕೆ ಕ್ಯಾತೆ ಶುರುವಾಗಿದ್ದು, ಕ್ಯೂನಲ್ಲಿದ್ದವರು ತಮಗಿಂತ ಮುಂಚೆ ಹೋಗಲು ಮುಂದಾಗಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಇವೆಲ್ಲವೂ ಆಸ್ಪತ್ರೆಯಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆಸ್ಪತ್ರೆಯಲ್ಲಿ ದಾಂಧಲೆ ಮಾಡಿದ ಯುವಕರು

ನಗರದಿಂದ 45 ರೌಡಿಗಳ ಗಡಿಪಾರು, ಇವರು ಸಿಟಿಯೊಳಗೆ ಕಂಡಲ್ಲಿ ಪೊಲೀಸರಿಗೆ ತಿಳಿಸಿ!

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಹಲವು ಪ್ರಮುಖ ರೌಡಿಗಳನ್ನು (Rowdy Sheeters) ಗಡಿಪಾರು (deportation) ಮಾಡಲಾಗುತ್ತಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ರೌಡಿಗಳನ್ನು ಪೊಲೀಸರು ಗಡಿಪಾರು ಮಾಡಲಿದ್ದಾರೆ. ನಗರದ ಸುಮಾರು 45 ಪ್ರಮುಖ ರೌಡಿಗಳನ್ನು ಗಡಿಪಾರು ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ 12 ರೌಡಿಗಳನ್ನು ಗಡಿಪಾರು ಮಾಡಿ ಆಯಾ ವಿಭಾಗದ ಡಿಸಿಪಿಗಳು ಆದೇಶ ಹೊರಡಿಸಿದ್ದಾರೆ. ಉಳಿದ 33 ರೌಡಿಗಳನ್ನು ಒಂದು ವಾರದ ಒಳಗೆ ಗಡಿಪಾರು ಮಾಡಲಿದ್ದಾರೆ.

ಇವರು ಸುಲಿಗೆ, ಬ್ಲ್ಯಾಕ್‌ಮೇಲ್‌, ಬೆದರಿಕೆ, ಕೊಲೆ ಬೆದರಿಕೆ, ಕೊಲೆ ಯತ್ನ, ರಾಬರಿ, ಹಲ್ಲೆ, ಅಪಹರಣ ಮುಂತಾದ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದವರಾಗಿದ್ದಾರೆ. ಕೆಲವರು ಜಾಮೀನು ಮೇಲೆ ಹೊರಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ, ಅಭ್ಯರ್ಥಿಗಳಿಗೆ ಆತಂಕ ಸೃಷ್ಟಿಸಬಹುದಾದ ಹಿನ್ನೆಲೆಯಲ್ಲಿ ಇಂಥವರನ್ನು ಗಡಿಪಾರು ಮಾಡಲಾಗುತ್ತದೆ.

ಸದ್ಯ ಗಡಿಪಾರು ಆಗಿರೋ ಪ್ರಮುಖ ರೌಡಿಗಳು ಇವರು:

ವಿಲ್ಸನ್ ಗಾರ್ಡನ್ ನಾಗ- ಮಾಗಡಿ ರೋಡ್ ರೌಡಿಶೀಟರ್. ನಾಗನ ಮೇಲೆ ಒಟ್ಟು 22 ಕೇಸ್‌ಗಳು ಇವೆ. ಏಳು ಕೊಲೆ ಪ್ರಕರಣಗಳಲ್ಲಿ ವಿಲ್ಸನ್ ಗಾರ್ಡನ್ ನಾಗ ಎ1 ಆರೋಪಿ.

ಕಾಡುಬೀಸನಹಳ್ಳಿ ರೋಹಿತ್- ಮಾರತ್ ಹಳ್ಳಿ ರೌಡಿಶೀಟರ್. ಕಾಡುಬೀಸನಹಳ್ಳಿ ರೋಹಿತ್ ಮೇಲೆ 14 ಕೇಸ್‌ಗಳು ಇವೆ. ಸುಮಾರು 6ಕ್ಕೂ ಹೆಚ್ಚು ಕೊಲೆ ಯತ್ನ ಕೇಸ್‌ಗಳು ಹಾಗೂ 5 ರಾಬರಿ, ಸುಲಿಗೆ ಕೇಸ್‌ಗಳು ಇವೆ.

ಕ್ಯಾಟ್ ಮಂಜ- ಸಂಪಿಗೆಹಳ್ಳಿ ರೌಡಿಶೀಟರ್. ಕ್ಯಾಟ್ ಮಂಜನ ಮೇಲೆ 16ಕ್ಕೂ ಹೆಚ್ಚು ಕೇಸ್‌ಗಳು ಇವೆ. ಕೊಲೆ, ಕೊಲೆ ಯತ್ನ, ದರೋಡೆ ಕೇಸುಗಳೇ ಅತಿ ಹೆಚ್ಚು.

ಮುನಿಕೃಷ್ಣ- ಅಮೃತಹಳ್ಳಿ ರೌಡಿಶೀಟರ್. ಮುನಿಕೃಷ್ಣ ಮೇಲೆ 3 ಕೊಲೆ ಹಾಗೂ 4 ಕೊಲೆ ಯತ್ನ ಕೇಸ್‌ಗಳು ದಾಖಲಾಗಿವೆ. ಸದ್ಯ ಗಡಿಪಾರು ಆದೇಶದ ಹಿನ್ನಲೆ ನಗರ ಬಿಟ್ಟಿದ್ದಾನೆ.

ಮಂಜುನಾಥ್ ಅಲಿಯಾಸ್ ಮೊಲ- ಅಮೃತಹಳ್ಳಿ ಠಾಣೆಯ ರೌಡಿಶೀಟರ್. 2 ಕೊಲೆ ಹಾಗೂ 5 ಕೊಲೆಯತ್ನ ಕೇಸ್ ಸೇರಿ 15 ಕೇಸ್‌ಗಳು ಇವೆ. ಕಳೆದ ಮೇ ತಿಂಗಳಲ್ಲಿ ಗಡಿಪಾರು ಮಾಡಲಾಗಿತ್ತು. ಆದರೆ ಗಡಿಪಾರು ಆದೇಶ ಉಲ್ಲಂಘನೆ ಮಾಡಿ ಮತ್ತೆ ಕ್ರೈಂನಲ್ಲಿ ಭಾಗಿಯಾಗಿದ್ದು, ಹೀಗಾಗಿ ಗೂಂಡಾ ಆಕ್ಟ್ ಹಾಕಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಇನ್ನೂ ಉಳಿದಂತೆ 33 ರೌಡಿಗಳ ಗಡಿಪಾರಿಗೆ ಸಿದ್ಧತೆ ನಡೆಯುತ್ತಿದ್ದು, ಕೌನ್ಸೆಲಿಂಗ್ ಮುಂದುವರೆದಿದೆ. ಈಗಾಗಲೇ ನೋಟಿಸ್‌ ಕೊಟ್ಟು ಡಿಸಿಪಿಗಳು ವಿಚಾರಣೆ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಗಡಿಪಾರು ಆದೇಶ ಹೊರಡಿಸಬಹುದು.

ಇದನ್ನೂ ಓದಿ: Karnataka Elections : ಕಳೆದ ಬಾರಿ ಸೋಲಿಸಿದ್ದೀರಿ, ಈ ಬಾರಿಯಾದರೂ ಗೆಲ್ಲಿಸಿ, ಇದು ನನ್ನ ಕೊನೆ ಚುನಾವಣೆ ಎಂದ ಟಿ.ಬಿ ಜಯಚಂದ್ರ

ಯಾವ ಯಾವ ಡಿವಿಷನ್‌ನಲ್ಲಿ ಎಷ್ಟೆಷ್ಟು ರೌಡಿಗಳ ಗಡಿಪಾರು?

ಪೂರ್ವ ವಿಭಾಗ – 12 ರೌಡಿಗಳು
ಪಶ್ಚಿಮ ವಿಭಾಗ – 6 ರೌಡಿಗಳು
ಆಗ್ನೇಯ ವಿಭಾಗ – 5 ರೌಡಿಗಳು
ಕೇಂದ್ರ ವಿಭಾಗ – 4 ರೌಡಿಗಳು
ಈಶಾನ್ಯ ವಿಭಾಗ – 4 ರೌಡಿಗಳು
ವೈಟ್ ಫೀಲ್ಡ್ ವಿಭಾಗ – 5 ರೌಡಿಗಳು
ಉತ್ತರ ವಿಭಾಗ – 5 ರೌಡಿಗಳು
ದಕ್ಷಿಣ ವಿಭಾಗ – 4 ರೌಡಿಗಳು

Exit mobile version