ದೊಡ್ಡಬಳ್ಳಾಪುರ: ಸೀಟ್ ಮನೆ ಮೇಲೆ ನಿಂತೂ ಪ್ಲಾಸ್ಟಿಂಗ್ ಮಾಡಬೇಡಿ ಎಂದು ಹೇಳಿದಕ್ಕೆ ಪಕ್ಕದ ಮನೆಯವರು ಬೆರಳು ಕಚ್ಚಿ ತುಂಡು (Assault Case ) ಮಾಡಿರುವ ಘಟನೆ ನಡೆದಿದೆ. ಅಂಬರೀಷ್ (35) ಎಂಬಾತ ಹಲ್ಲೆಗೊಳಗಾದ ವ್ಯಕ್ತಿ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮರಳೇನಹಳ್ಳಿ ಗ್ರಾಮದಲ್ಲಿ ಮನೆ ಕಟ್ಟುವ ವಿಚಾರವಾಗಿ ಅಕ್ಕ ಪಕ್ಕದ ಮನೆಯವರ ನಡುವೆ ಗಲಾಟೆ ನಡೆದಿದೆ. ತಿಮ್ಮರಾಜು ಎಂಬುವವರು ಮನೆ ಕಟ್ಟಿಸುತ್ತಿದ್ದು, ಪ್ಲಾಸ್ಟಿಂಗ್ ಮಾಡಲು ಅಂಬರೀಷ್ ಅವರ ಕಟ್ಟಡ ಏರಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಂಬರೀಷ್ ಕುಟುಂಬಸ್ಥರು ಮನೆ ಮೇಲೆ ನಿಂತೂ ಪ್ಲಾಸ್ಟಿಂಗ್ ಮಾಡಬೇಡಿ ನಮಗೆ ಸಮಸ್ಯೆ ಆಗುತ್ತದೆ ಎಂದಿದ್ದಾರೆ.
ಈ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ಶುರುವಾಗಿದೆ. ಒಬ್ಬರಿಗೊಬ್ಬರು ಅವಾಚ್ಯ ಶಬ್ಧಗಳಿಂದ ನಿಂದಿಸಿಕೊಂಡಿದ್ದಾರೆ. ಗಲಾಟೆ ವಿಕೋಪಕ್ಕೆ ತೆರಳಿ ಎರಡು ಕುಟುಂಬಗಳು ಬಡಿದಾಡಿಕೊಂಡಿದ್ದಾರೆ. ಈ ಗಲಾಟೆಯಲ್ಲಿ ತಿಮ್ಮರಾಜು ಕುಟುಂಬಸ್ಥರು ಅಂಬರೀಷ್ ಅವರ ಬೆರಳು ಕಚ್ಚಿ ತುಂಡರಿಸಿದ್ದಾರೆ.
ಹಲ್ಲೆಗೊಳಗಾದ ಅಂಬರೀಷ್ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ತಿಮ್ಮರಾಜು, ಶಶಿಕಲಾ, ರಘು, ಮುನಿರಾಮಯ್ಯ ಹಾಗೂ ಅರವಿಂದ್, ಹರ್ಷವರ್ಧನ್, ಸಿಂಧು ಎಂಬುವವರ ಮೇಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಲ್ಲೆ ಮಾಡಿದ ರಘು ಮತ್ತು ಅರವಿಂದ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಉಳಿದ ಐವರು ಆರೋಪಿಗಳು ನಾಪತ್ತೆ ಆಗಿದ್ದು, ಅವರಿಗೆ ಹುಡುಕಾಟ ನಡೆಸಿದ್ದಾರೆ. ಕಿತ್ತಾಡಿಕೊಂಡಿರುವವರು ಸಂಬಂಧಿಕರೇ ಆಗಿದ್ದು, ಹಿಂದೊಮ್ಮೆ ಈ ಎರಡು ಕುಟುಂಬಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿತ್ತು ಎನ್ನಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ