ತುಮಕೂರು: ಶಿರಾದ ಜ್ಯೋತಿ ನಗರದಲ್ಲಿ ಕಾಂಗ್ರೆಸ್‌ಗೆ ಮತ ಹಾಕಲ್ಲ ಎಂದಿದ್ದಕ್ಕೆ ವ್ಯಕ್ತಿಯೊಬ್ಬನಿಗೆ (Assault Case) ತೀವ್ರವಾಗಿ ಥಳಿಸಲಾಗಿದೆ. ಜೀತೇಂದ್ರ ಎಂಬುವವರು ಹಲ್ಲೆಗೊಳಗಾದವರು. ಕಾಂಗ್ರೆಸ್ ಮುಖಂಡ ಹಾಗೂ ನಗರಸಭೆ ಸದಸ್ಯನಾಗಿರುವ ಗೋಣಿಹಳ್ಳಿ ದೇವರಾಜು ಎಂಬುವವರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬುಧವಾರ (ಏ.26) ರಾತ್ರಿ 8.30ರ ಸುಮಾರಿಗೆ ದೇವರಾಜು ತಂಡದವರು ಮತಯಾಚನೆಗಾಗಿ ಕಾಂಗ್ರೆಸ್ ಪರವಾಗಿ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ಜೀತೇಂದ್ರ ಮನೆ ಬಳಿ ಬಂದಾಗ ಕಾಂಗ್ರೆಸ್‌ಗೆ ಮತ ಹಾಕುವಂತೆ ಹೇಳಿದ್ದಾರೆ. ತಾನು ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲ ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ದೇವರಾಜು, ಮೂವರು ಸಹಚರರು ಸೇರಿ ಏಕಾಏಕಿ ಜಿತೇಂದ್ರ ಮೇಲೆ ಎರಗಿ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: Karnataka election 2023: ಸಂಡೂರಿನಲ್ಲಿ ರೋಡ್ ಶೋ ಮಾಡದ ಸುದೀಪ್, ಜನರಿಗೆ ನಿರಾಸೆ
ಈ ವಾರ್ಡಿನ ನಗರಸಭೆ ಸದಸ್ಯ, ʻʻನನಗೆ ಎದುರು ಮಾತನಾಡುತ್ತೀಯಾ ನಾನು ಹೇಳಿದಕ್ಕೆ ನೀನು ಮತ ನೀಡಬೇಕು. ಇಲ್ಲವೆಂದರೆ ನೀನು ಇಲ್ಲಿ ಬದುಕುವುದು ಕಷ್ಟ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ನೀನು ಕಾಂಗ್ರೆಸ್‌ಗೆ ಮತ ಹಾಕದೆ ಇದ್ದರೆ ಬದುಕಿ ಉಳಿಯುವುದಿಲ್ಲ. ನಿನ್ನನ್ನು ಸಾಯಿಸಿಬಿಡುತ್ತೇವೆ ಎಂದು ಬೆದರಿಸಿದ್ದಾರೆʼʼ ಎಂದು ಜಿತೇಂದ್ರ ತಿಳಿಸಿದ್ದಾರೆ.
ಬಳಿಕ ಮನೆಯೊಳಗೆ ನುಗ್ಗಿ ಜಿತೇಂದ್ರಗೆ ಹಲ್ಲು ಮುರಿಯುವಂತೆ ಹೊಡೆದು, ಕೆಳಕ್ಕೆ ಹಾಕಿ ತುಳಿದು ಥಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.. ಸದ್ಯ ತೀವ್ರ ಗಾಯಗೊಂಡಿರುವ ಜೀತೇಂದ್ರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.