ಬೆಂಗಳೂರು : ಇಲ್ಲಿನ ಬೆಂಗಳೂರು ಉತ್ತರ ತಾಲೂಕಿನ ಬೃಂದಾವನ ನಗರದಲ್ಲಿ ಪುಂಡರ ಹಾವಳಿ (Assault Case) ಮಿತಿಮೀರಿದೆ. ಡ್ಯೂಟಿ ಮುಗಿಸಿ ಮನೆಗೆ ಬರುತ್ತಿದ್ದ ಮಹಿಳಾ ಟೆಕ್ಕಿಯನ್ನು ಅಡ್ಡಗಟ್ಟಿ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ಟೈಮ್ ಪಾಸ್ ಆಗುತ್ತಿಲ್ಲ, ನಿಮ್ಮ ಫೋನ್ ನಂಬರ್ ಕೊಡಿ ಮಾತನಾಡಬೇಕೆಂದು ಮಹಿಳಾ ಟೆಕ್ಕಿಗೆ ಪುಂಡರು ಟಾರ್ಚರ್ ನೀಡಿದ್ದಾರೆ. ಸಿಟ್ಟೆಗೆದ್ದ ಟೆಕ್ಕಿ ನಂಬರ್ ಯಾಕೆ ಕೊಡಬೇಕು ಎಂದು ಬೈದು ಮನೆಗೆ ತೆರಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಪುಂಡರು ಟೆಕ್ಕಿ ಮಹಿಳೆಯನ್ನು ಮನೆಯವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾರೆ.
ಮೊದಲು ಪುಂಡರಿಬ್ಬರು ತಾವು ಧರಿಸಿದ್ದ ಟೀ ಶರ್ಟ್‌ನಲ್ಲಿ ಮುಖ ಮುಚ್ಚಿಕೊಂಡು ಬಂದು ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್‌ಗೆ ಕಲ್ಲು ಎಸೆದು ಪರಾರಿ ಆಗಿದ್ದಾರೆ. ಮತ್ತೆ ಕೆಲವೇ ನಿಮಿಷಗಳಲ್ಲಿ ಮತ್ತೊಮ್ಮೆ ಬೈಕ್‌ನಲ್ಲಿ ಬಂದು ಬ್ರೀಜಾ ಕಾರಿನ ಮುಂಭಾಗದ ಗ್ಲಾಸ್ ಮೇಲೆ ಬೃಹತ್ ಕಲ್ಲೆಸೆದು ಹಾನಿ ಮಾಡಿ ಪರಾರಿಯಾಗಿದ್ದಾರೆ.
ಇದೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಒರ್ವ ಸ್ಥಳೀಯ ವೆಂಕಟೇಶ್ ಎಂದು ಟೆಕ್ಕಿ ಗುರುತಿಸಿದ್ದಾರೆ. ಟೆಕ್ಕಿ ಕೊಟ್ಟಿರುವ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ.
ಹೆಂಡತಿಗೆ ನಂಬರ್ ಕೊಟ್ಟು ಕರೆ ಮಾಡಲು ಪೀಡಿಸುತ್ತಿದ್ದ ಬಶೀರ್, ಅಟ್ಟಾಡಿಸಿ ಹೊಡೆದ ಗಂಡ
ನನ್ನ ಹೆಂಡತಿಗೆ ನಂಬರ್ ಕೊಡ್ತೀಯಾ? ಕರೆ ಮಾಡು ಅಂತ ಪೀಡಿಸ್ತೀಯಾ (Harrassment case) ಎಂದು ಕೇಳಿ ಕೇಳಿ ಅಟ್ಟಾಡಿಸಿ ಹೊಡೆದಿದ್ದಾನೆ ಒಬ್ಬ ಗಂಡ. ಈ ಘಟನೆ ನಡೆದಿರುವುದು ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಟ್ಟೆಮನೆಯಲ್ಲಿ.
ಕಟ್ಟೆಮನೆಯಲ್ಲಿ ಟಿವಿ ಡಿಶ್ ರಿಪೇರಿ (TV Dish repair) ಮತ್ತಿತರ ಕೆಲಸ ಮಾಡುವ ಬಶೀರ್ ಎಂಬಾತನೇ ಧರ್ಮದೇಟು (Physically thrashing) ತಿಂದವನು. ತನ್ನ ಪತ್ನಿಗೆ ಬಶೀರ್ ಪ್ರತಿ ದಿನ ಕಿರಿಕಿರಿ ಮಾಡುತ್ತಿರುವುದನ್ನು ಸಹಿಸದೆ ಅಟ್ಟಾಡಿಸಿ ಹೊಡೆದವನು ರಮೇಶ್.
ಕಟ್ಟೆಮನೆ ಗ್ರಾಮದ ರಮೇಶ್ ಎಂಬವರ ಮನೆಯಲ್ಲಿ ಇತ್ತೀಚೆಗೆ ಟೀವಿ ಚಾನೆಲ್‌ಗಳು ಸರಿಯಾಗಿ ಬರುತ್ತಿರಲಿಲ್ಲ. ಇದನ್ನು ರಿಪೇರಿ ಮಾಡಲೆಂದು ಮನೆಗೆ ಎಂಟ್ರಿ ಕೊಟ್ಟವನು ಅದೇ ಊರಿನ ಬಶೀರ್. ಹಾಗೆ ಬಂದವನು ಡಿಶ್ ರಿಪೇರಿಯ ಕೆಲಸಗಳನ್ನು ಮಾಡಿಕೊಟ್ಟಿದ್ದ. ಮನೆಗೆ ಬಂದವನು ರಮೇಶ್ ಅವರ ಪತ್ನಿಯ ಜತೆಗೆ ಉತ್ತಮವಾಗಿ ವ್ಯವಹರಿಸಿದ್ದ.
ಕೊನೆಗೆ ಕೆಲಸ ಮುಗಿಸಿ ಹೋಗುವಾಗ ಅವನು ರಮೇಶ್ ಅವರ ಪತ್ನಿಗೆ ತನ್ನ ಮೊಬೈಲ್ ನಂಬರ್ ನೀಡಿದ್ದ. ಏನೇ ಸಮಸ್ಯೆಯಾದರೂ ಕರೆ ಮಾಡಿ ಎಂದು ಹೇಳಿದ್ದ. ಇದೆಲ್ಲವೂ ಒಳ್ಳೆಯತನ, ವ್ಯವಹಾರ ಚತುರತೆ ಎಂದು ತಿಳಿದ ರಮೇಶ್ ಅವರ ಪತ್ನಿ ತಿಳಿದಿದ್ದರು.
ಇದನ್ನೂ ಓದಿ: ಸಮುದ್ರ ತೀರದಲ್ಲಿ ಗಂಡನ ಜತೆ ಫೋಟೊ ತೆಗೆಸಿಕೊಳ್ಳುವ ವೇಳೆ ಕೊಚ್ಚಿಹೋದ ಮಹಿಳೆ; ದುರಂತದ ವಿಡಿಯೊ ಭೀಕರ
ಈ ನಡುವೆ, ಬಶೀರ್ ಆಗಾಗ ಮಹಿಳೆಗೆ ಮೆಸೇಜ್ ಮಾಡಿ ಕರೆ ಮಾಡುವಂತೆ ಒತ್ತಾಯ ಮಾಡಲು ಆರಂಭಿಸಿದ. ಸಿಕ್ಕಿದಾಗ ಕರೆ ಮಾಡುವಂತೆ ಸನ್ನೆ ಮಾಡುತ್ತಿದ್ದ. ಇದು ಕೆಲವು ದಿನಗಳ ಬಳಿಕ ರಮೇಶ್ ಅವರಿಗೆ ತಿಳಿಯಿತು. ಇದರಿಂದ ಸಿಟ್ಟಿಗೆದ್ದ ರಮೇಶ್ ಬಶೀರ್‌ನನ್ನು ಹುಡುಕಿಕೊಂಡು ಹೋಗಿ ಅಟ್ಟಾಡಿಸಿ ಹೊಡೆದಿದ್ದಾನೆ. ಹೀಗೆ ಧರ್ಮದೇಟು ನೀಡುವ ವಿಡಿಯೊ ವೈರಲ್ ಆಗಿದೆ. ಜಯಪುರದಲ್ಲಿ ಡಿಶ್ ರಿಪೇರಿ ಅಂಗಡಿ ಹೊಂದಿರುವ ಬಶೀರ್ ಇನ್ನೂ ಹಲವು ಮಹಿಳೆಯರಿಗೆ ನಂಬರ್ ಕೊಟ್ಟು ಕರೆ ಮಾಡುವಂತೆ ಪೀಡಿಸುತ್ತಿದ್ದ ಎಂದು ಹೇಳಲಾಗಿದೆ. ಈಗ ಹಲವರು ಈ ವಿಚಾರವನ್ನು ಬಾಯಿ ಬಿಡುತ್ತಿದ್ದಾರೆ.
ಆರಂಭದಲ್ಲಿ ಸಹಾಯಕ್ಕೆ ಬರುವವರಂತೆ ವರ್ತಿಸುವ ಕೆಲವು ಯುವಕರು ಬಳಿಕ ತಮ್ಮ ಚಾಳಿಯನ್ನು ಹೆಡೆ ಎತ್ತಿಸಿ ಮಹಿಳೆಯರಿಗೆ ಕಿರುಕುಳ ನೀಡುವ ವಿದ್ಯಮಾನಗಳು ನಡೆಯುತ್ತಿವೆ. ಹೆಣ್ಮಕ್ಕಳ, ಮಹಿಳೆಯರ ಮೊಬೈಲ್ ನಂಬರನ್ನು ಉಪಾಯವಾಗಿ ಪಡೆದುಕೊಂಡು ಅವರ ವಿಶ್ವಾಸ ಸಂಪಾದಿಸಿ ಬಳಿಕ ಕೆಟ್ಟ ದಾರಿಗೆ ಎಳೆಯುವ ಪ್ರಯತ್ನಗಳು ಕೂಡಾ ಅಲ್ಲಲ್ಲಿ ನಡೆಯುತ್ತವೆ. ಹೀಗೆ ಜಯಪುರದಲ್ಲಿ ನಡೆದ ಘಟನೆಯೂ ಒಂದು ಎಚ್ಚರಿಕೆ ಗಂಟೆ ಎಂದು ಹೇಳಲಾಗಿದೆ. ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸದಂತೆ, ಕೆಟ್ಟ ಚಾಳಿಗೆ ಕೈ ಹಾಕದಂತೆ ಎಚ್ಚರಿಕೆ ನೀಡುವ ಘಟನೆ ಇದೆನ್ನಲಾಗಿದೆ.
ಆದರೆ, ಈ ಪ್ರಕರಣದಲ್ಲಿ ಬಶೀರ್ ಮಾತ್ರ ತಾನು ತಪ್ಪಾಗಿ ಈ ರೀತಿ ಮಾಡಿದ್ದಾಗಿಯೂ, ಉದ್ದೇಶಪೂರ್ವಕ ಅಲ್ಲವೆಂದು ಹೇಳಿದ್ದಾನೆ. ಬೇರೆ ಯಾರಿಗೋ ಮಾಡಿದ ಕರೆ ತಪ್ಪಿ ಬಂದಿದೆ ಎನ್ನುವುದು ಅವನ ವಿವರಣೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದ ಕಟ್ಟೆಮನೆಯಲ್ಲಿ ನಡೆದ ಈ ಘಟನೆಯ ಬಗ್ಗೆ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ