ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಗೋಟಗೋಡಿನಕೊಪ್ಪ ಗ್ರಾಮದಲ್ಲಿ ಪತಿಯೊಬ್ಬ ಪತ್ನಿ, ಅತ್ತೆ ಮೇಲೆಯೇ ಮಾರಣಾಂತಿಕವಾಗಿ ಹಲ್ಲೆ (Attempt to murder) ನಡೆಸಿದ್ದಾನೆ. ನಾಗರಾಜ ವಡಲಣ್ಣನವರ ಎಂಬಾತ ಪತ್ನಿ ಅನ್ನಪೂರ್ಣ ವಡಲಣ್ಣನವರ, ಅತ್ತೆ ಹೊನ್ನವ್ವ ಚಿನ್ನಳ್ಳಿ ಮೇಲೆ ಕುಡುಗೋಲಿನಿಂದ ಹಲ್ಲೆ (Assault case) ನಡೆಸಿದ್ದಾನೆ.
ಕಳೆದ ಹತ್ತು ವರ್ಷಗಳ ಹಿಂದೆ ನಾಗರಾಜ್ ಅನ್ನಪೂರ್ಣಳನ್ನು ಪ್ರೀತಿಸಿ ಮದುವೆ ಆಗಿದ್ದ. ಆದರೆ ಪ್ರತಿ ದಿನ ಕುಡಿದು ಕಿರುಕುಳ ನೀಡುತ್ತಿದ್ದ. ಈತನ ಕಿರುಕುಳ ತಾಳಲಾರದೇ ಒಂದು ತಿಂಗಳ ಹಿಂದೆ ಅನ್ನಪೂರ್ಣ ತವರು ಮನೆ ಸೇರಿದ್ದರು. ಗುರುವಾರ (ಜು.27) ಬೆಳಗ್ಗೆ ಅನ್ನಪೂರ್ಣ ಹಾಗೂ ಹೊನ್ನವ್ವ ಜಮೀನಿಗೆ ತೆರಳುತ್ತಿದ್ದಾಗ, ಏಕಾಏಕಿ ಇಬ್ಬರ ಮೇಲೂ ಕುಡುಗೋಲಿನಿಂದ ದಾಳಿ ನಡೆಸಿದ್ದಾನೆ.
ಅನ್ನಪೂರ್ಣ ತಲೆಗೆ, ಕೈಗೆ ಗಂಭೀರ ಗಾಯವಾಗಿದ್ದು, ಹೊನ್ನವ್ವರ ಕುತ್ತಿಗೆ ಭಾಗಕ್ಕೆ ಕತ್ತಿ ಬೀಸಿದ್ದು ಗಂಭೀರ ಗಾಯಗೊಂಡಿದ್ದಾರೆ. ಇತ್ತ ಇಬ್ಬರ ಮೇಲೂ ದಾಳಿ ಮಾಡಿ ನಾಗರಾಜ್ ಪರಾರಿ ಆಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ-ಮಗಳನ್ನು ಗ್ರಾಮಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನಾಗರಾಜ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪತ್ನಿಯನ್ನು ಕೊಲೆ ಮಾಡಿ ಅತ್ತೆಗೆ ಫೋನ್ ಮಾಡಿ ಹೇಳಿದ ಅಳಿಯ!
ಬೆಂಗಳೂರು: ಪತ್ನಿಯ ಅಕ್ರಮ ಸಂಬಂಧದಿಂದ (Illicit relationship) ರೋಸಿದ ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ (Murder case) , ನಾನು ನಿಮ್ಮ ಮಗಳನ್ನ ಕೊಲೆ ಮಾಡಿರುವುದಾಗಿ ಅತ್ತೆಗೆ ಫೋನ್ ಕಡೆ ಮಾಡಿ ಹೇಳಿದ್ದಾನೆ! ಈ ಘಟನೆ ಮೂಡಲಪಾಳ್ಯದ ಶಿವಾನಂದ ನಗರದಲ್ಲಿ ನಡೆದಿದೆ.
ಇದನ್ನೂ ಓದಿ: Physical Abuse : ವಿದ್ಯಾರ್ಥಿ ಜತೆ ಅಸ್ವಾಭಾವಿಕ ಲೈಂಗಿಕ ಸಂಪರ್ಕ: ಉಪನ್ಯಾಸಕನಿಗೆ ಜೀವಾವಧಿ ಶಿಕ್ಷೆ
ಗೀತಾ (33) ಕೊಲೆಯಾದವಳು. ಪತಿ ಶಂಕರ್ (43) ಆರೋಪಿ ಆಗಿದ್ದಾನೆ. 13 ವರ್ಷಗಳ ಹಿಂದೆ ಗೀತಾಳನ್ನು ಶಂಕರ್ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರೂ, ಗೀತಾ ಪರಪುರುಷನೊಂದಿಗೆ ಸಂಬಂಧ ಹೊಂದಿದ್ದರು. ಆ ವಿಷಯ ತಿಳಿದ ಶಂಕರ್ ಗೀತಾಗೆ ಬುದ್ಧಿ ಹೇಳಿದ್ದರು. ಆದರೂ ಗೀತಾ ಅನೈತಿಕ ಸಂಬಂಧ ಮುಂದುವರಿಸಿದ್ದರು. ಅಷ್ಟೇ ಅಲ್ಲದೇ ತಮ್ಮ ಪ್ರಿಯಕರನೊಂದಿಗೆ ಸೇರಿ ಪತಿಗೆ ಕೊಲೆ ಬೆದರಿಕೆ ಒಡ್ಡಿದ್ದರು. ಕಳೆದ ಹದಿನೈದು ದಿನಗಳಿಂದ ದಂಪತಿ ಜಗಳ ವಿಕೋಪಕ್ಕೆ ತಿರುಗಿತ್ತು.
ನಿನ್ನೆ ರಾತ್ರಿ ಅದೇ ರೀತಿ ಜಗಳ ನಡೆದಿದೆ. ಆ ವೇಳೆ ಆಕ್ರೋಶಕ್ಕೊಳಗಾದ ಶಂಕರ್ ಹರಿತವಾದ ಆಯುಧದಿಂದ ಗೀತಾಳ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಹೆಂಡತಿಯನ್ನು ಕೊಂದು ಶವವನ್ನು ಸೋಫಾ ಸೆಟ್ ಮೇಲೆ ತಂದಿಟ್ಟು, ಬಳಿಕ ಅತ್ತೆಗೆ ಕರೆ ಮಾಡಿ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಬಳಿಕ ಸಂಬಂಧಿಕರಿಗೆ, ಸ್ನೇಹಿತರಿಗೆ ವಿಷಯ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಚಂದ್ರಾಲೇಔಟ್ ಪೊಲೀಸರು ಕೇಸ್ ದಾಖಲಿಸಿಕೊಂಡು ಶಂಕರ್‌ನನ್ನು ಬಂಧಿಸಿದ್ದಾರೆ.
ʼʼಅವರ ಮನೆಯಲ್ಲಿ ಸಣ್ಣಪುಟ್ಟ ಗಲಾಟೆ ಆಗ್ತಿತ್ತು. ಒಂದು ತಿಂಗಳಿನಿಂದ ಮನೆಯಲ್ಲಿ ಗಲಾಟೆ ಜಾಸ್ತಿಯಾಗಿತ್ತು. ಗೀತಾ ಹಾಗೂ ಪತಿ ಎಲ್ಲರ ಜೊತೆ ಚೆನ್ನಾಗಿ ಮಾತಾಡುತ್ತಿದ್ದರು. ಪತ್ನಿ ಬೇರೆಯವರ ಸಹವಾಸ ಮಾಡಿದ್ದಾಳೆ. ಮನೆಗೆ ಯಾರೋ ಬಂದು ಹೋಗ್ತಾ ಇರುತ್ತಾರೆ ಎಂದು ಹೇಳುತ್ತಿದ್ದ. ಅವರ ಮನೆಯಲ್ಲಿ ಯಾವಾಗಲೂ ತಡರಾತ್ರಿವರೆಗೂ ಟಿವಿ ಆನ್ ಆಗಿರುತ್ತದೆ. ನಿನ್ನೆ ಟಿವಿ ಧ್ವನಿ ಜಾಸ್ತಿ ಇಟ್ಟಿದ್ದರು. ಹೀಗಾಗಿ ಜಗಳ ಆಡಿರುವುದು ನಮಗೆ ಗೊತ್ತಾಗಿಲ್ಲ. ಮರ್ಯಾದೆಗೆ ಅಂಜಿ ಕೊಲೆ ಮಾಡಿದೆ ಅಂದಿದ್ದಾರೆ. ಬೇರೆ ಸಂಬಂಧದ ಬಗ್ಗೆ ನಮಗೆ ಏನೂ ಗೊತ್ತಿಲ್ಲʼʼ ಎಂದು ಮೃತಳ ಸಂಬಂಧಿ ರಾಜೇಶ್ವರಿ ಹೇಳಿಕೆ ನೀಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ