ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಇತ್ತೀಚೆಗೆ ನಿಯಮ ಉಲ್ಲಂಘನೆ ಹಾಗೂ ಲೈಂಗಿಕ ಕಿರುಕುಳದೊಂದಿಗೆ ಗಲಾಟೆ ಪ್ರಕರಣಗಳು (Assault case) ಹೆಚ್ಚು ಕಂಡು ಬರುತ್ತಿದೆ. ಸದ್ಯ ಕುಡಿದು ಮೆಟ್ರೋ ಪ್ರವೇಶಿಸಲು ಮುಂದಾದ ವ್ಯಕ್ತಿಯನ್ನು ತಡೆದಿದ್ದಕ್ಕೆ ಮೆಟ್ರೋ ಸಿಬ್ಬಂದಿಗೆ ಹೊಡೆದು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಂದ್ರಶೇಖರ್ ಎಂಬಾತ ಮೆಟ್ರೋ ಸಿಬ್ಬಂದಿಗೆ ಹಲ್ಲೆ ನಡೆಸಿದವನು. ಡಿ.16ರ ರಾತ್ರಿ ದಾಸರಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದಾನೆ. ಈ ವೇಳೆ ತಪಾಸಣೆ ಮಾಡುವಾಗ ಕುಡಿದಿರುವುದು ತಿಳಿದು ಬಂದಿದೆ. ಈ ವೇಳೆ ಕುಡಿದು ಬಂದವರಿಗೆ ನಿಲ್ದಾಣದೊಳಗೆ ಅವಕಾಶವಿಲ್ಲ ಎಂದು ತಡೆದಿದ್ದಾರೆ. ಆಗ ತಾನು ರಕ್ಷಣಾ ವೇದಿಕೆಯವನು ಎಂದು ಹೇಳಿಕೊಂಡು ಬಲವಂತವಾಗಿ ಒಳ ನುಗ್ಗಲು ಮುಂದಾಗಿದ್ದಾನೆ.
ಈ ವೇಳೆ ತಡೆಯಲು ಬಂದ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾನೆ. ಸ್ಥಳದಲ್ಲಿದ್ದವರು ಗಲಾಟೆಯನ್ನು ಬಿಡಿಸಿ ಕಳಿಸಿದ್ದಾರೆ. ಸದ್ಯ ಈತನ ವಿರುದ್ಧ ಮೆಟ್ರೋ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ್ದಾರೆ ಎಂದು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ. ಹಲ್ಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Namma Metro : ಮೆಟ್ರೋದಲ್ಲಿ ಟೆಕ್ಕಿ ಯುವತಿ ಮೈ ಸವರಿದ ಕಾಮುಕ; ಎಸ್ಕೇಪ್ ಆಗುವಾಗ ಅರೆಸ್ಟ್
ಫುಟ್‌ಪಾತ್ ಮೇಲೆ ಹೋಗು ಎಂದಿದ್ದಕ್ಕೆ ಕಿರಿಕ್
ಮೆಟ್ರೋ ಗಲಾಟೆ ಒಂದು ಕಡೆಯಾದರೆ ಮತ್ತೊಂದು ಕಡೆ ಟ್ರಾಫಿಕ್ ಕಾನ್ಸ್‌ಟೇಬಲ್ ಜತೆಗೆ ಪಾದಚಾರಿಯೊಬ್ಬ ಕಿರಿಕ್ ಮಾಡಿಕೊಂಡಿದ್ದಾನೆ. ಫುಟ್ ಪಾತ್ ಮೇಲೆ ಹೋಗು ಎಂದಿದ್ದಕ್ಕೆ ಟ್ರಾಫಿಕ್ ಕಾನ್ಸ್‌ಟೇಬಲ್ ಜತೆಗೆ ಗಲಾಟೆ ಮಾಡಿದ್ದಾನೆ.
ಕರ್ತವ್ಯಕ್ಕೆ ಅಡ್ಡಿಪಡಿಸಿ ಜಗಳ ಮಾಡಿದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಉತ್ತರಹಳ್ಳಿ ಸಮೀಪದ ಹರೇಹಳ್ಳಿ ಬಳಿ ರಸ್ತೆ ಮೇಲೆ ರಾಜು ಎಂಬಾತ ನಡೆದುಕೊಂಡು ಹೋಗುತ್ತಿದ್ದ. ಅಲ್ಲೆ ಕರ್ತವ್ಯದಲ್ಲಿದ್ದ ಕೆ.ಎಸ್ .ಲೇಔಟ್ ಸಂಚಾರಿ ಠಾಣೆಯ ಕಾನ್ಸ್‌ಸ್ಟೇಬಲ್ ಕರಿಬಸವಯ್ಯ ಫುಟ್‌ಪಾತ್ ಮೇಲೆ ಹೋಗು ಎಂದಿದ್ದಾರೆ. ಇಷ್ಟಕ್ಕೆ ಸಿಟ್ಟಾದ ರಾಜು ಕಾನ್ಸ್ ಟೇಬಲ್ ಕರಿಬಸವಯ್ಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿ, ಓಡಿ ಹೋಗಿದ್ದ.
ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿದ ಕಾರಣಕ್ಕೆ ಕರಿಬಸವಯ್ಯ ಸುಬ್ರಮಣ್ಯಪುರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ರಾಜುನನ್ನು ಹಿಡಿದು ಬಂಧಿಸಿದ್ದಾರೆ.
ಇದನ್ನೂ ಓದಿ: New Born Baby: ಹಸುಗೂಸನ್ನು ತಿಂದು ಹಾಕಿದ ಬೀದಿ ನಾಯಿಗಳು; ಅನೈತಿಕ ಸಂಬಂಧದ ಶಿಶುವೇ!
ಪಾದಚಾರಿಗೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್
ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೆಜೆಸ್ಟಿಕ್ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣದ ಟ್ರಮಿನಲ್ 1ರಲ್ಲಿ ಅಪಘಾತ ಸಂಭವಿಸಿದ್ದು, ಯುವಕನ ಗುರುತು ಪತ್ತೆಯಾಗಿಲ್ಲ. ಬೆಳಗಿನ ಜಾವ 3.30 ರ ಸುಮಾರಿಗೆ ಈ ಅಪಘಾತ ನಡೆದಿದ್ದು, ಉಪ್ಪಾರಪೇಟೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಜತೆಗೆ ಮೃತನ ಬಗ್ಗೆ ಮಾಹಿತಿಯನ್ನು ಉಪ್ಪಾರಪೇಟೆ ಸಂಚಾರಿ ಪೊಲೀಸರು ಕಲೆ ಹಾಕುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.