ಬೆಂಗಳೂರು: ನಶೆ ಏರಿಸಿಕೊಂಡ ಸ್ನೇಹಿತರಿಬ್ಬರ ಗಲಾಟೆಯು (Assault Case) ಇದೀಗ ಠಾಣೆ ಮೆಟ್ಟಿಲೇರಿದೆ. ರಮೇಶ್ ಹಾಗೂ ಕೆಂಪೇಗೌಡ ಎಂಬುವವರು ಬಾರ್‌ವೊಂದರಲ್ಲಿ ಕಂಠಪೂರ್ತಿ ಕುಡಿದು ಹೊರಬಂದಿದ್ದರು. ಅಂಗಡಿ ಮುಂದೆ ಬಂದು ನಿಂತಾಗ ಕುಡಿದ ಮತ್ತಿನಲ್ಲಿ ನಿನ್ನ ಹೆಂಡತಿ ನಂಬರ್ ಕೊಡು ಎಂದು ರಮೇಶ್ ಕೇಳಿದ್ದ. ರೌಡಿಶೀಟರ್ ಆಗಿರುವ ಕೆಂಪೇಗೌಡ ಅಲಿಯಾಸ್ ಕೆಂಪ ಸಿಟ್ಟಿಗೆದ್ದು ರಮೇಶ್‌ಗೆ ರಸ್ತೆಯಲ್ಲಿಯೇ ಹಿಗ್ಗಾ ಮುಗ್ಗಾ ಥಳಿಸಿ, ಕಪಾಳಕ್ಕೆ ಹೊಡೆದಿದ್ದ.
ಗಲಾಟೆ ಬಳಿಕ ರೌಡಿಶೀಟರ್ ಕೆಂಪೇಗೌಡ ಹೊಯ್ಸಳ ನಗರದಲ್ಲಿರುವ ತನ್ನ ಮನೆಗೆ ತೆರಳಿದ್ದ. ಇತ್ತ ಹಲ್ಲೆ ಮಾಡಿರುವ ವಿಚಾರ ತಿಳಿದ ರಮೇಶ್ ಸಂಬಂಧಿಕರು ಹಾಗೂ ಸ್ನೇಹಿತರು ರಾತ್ರಿ 11 ಗಂಟೆಗೆ ಸುಮಾರಿಗೆ ಕೆಂಪೇಗೌಡನನ್ನು ಪ್ರಶ್ನೆ ಮಾಡಲು ತೆರಳಿದ್ದರು.
ರಮೇಶ್‌ನ ಸಂಬಂಧಿಕರಾದ ಮಂಜುನಾಥ್, ಜವರೇಗೌಡ, ಕೃಷ್ಣಮೂರ್ತಿ ಸೇರಿ ಸುಮಾರು 10ಕ್ಕೂ ಹೆಚ್ಚು ಮಂದಿ ಕೆಂಪೇಗೌಡನ ಮನೆ ಮುಂದೆ ಹೋಗಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಎರಡು ಕಡೆಯವರು ಕಿತ್ತಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಮಂಜುನಾಥ್, ಜವರೇಗೌಡ, ಕೃಷ್ಣಮೂರ್ತಿಗೆ ಕೆಂಪೇಗೌಡ ಚಾಕುವಿನಿಂದ ಇರಿದಿದ್ದಾನೆ.
ನಂತರ ರೊಚ್ಚಿಗೆದ್ದ ಗುಂಪು ಕೆಂಪೇಗೌಡ ಮನೆ ಮೇಲೆ ಕಲ್ಲು ಎಸೆದು, ಕಿಟಕಿ ಗಾಜುಗಳನ್ನು ಹೊಡೆದು ಹಾಕಿದ್ದಾರೆ. ಬಾಗಿಲು ಮುರಿದು ಹಾಕಿದ್ದಾರೆ. ಇತ್ತ ಘಟನೆ ಸಂಬಂಧ ತಿಳಿಯುತ್ತಿದ್ದಂತೆ ಚಂದ್ರಲೇಔಟ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಾಕು ಇರಿದ ಕಾರಣಕ್ಕೆ ರೌಡಿಶೀಟರ್ ಕೆಂಪೇಗೌಡನನ್ನು ಬಂಧಿಸಿ, ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ