ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಪುಂಡರ ಹಾವಳಿ (Assault Case) ಹೆಚ್ಚಾಗಿದೆ. ನಗರದ ಲಿಂಗರಾಜಪುರದಲ್ಲಿರುವ ಬೇಕರಿಗೆ ಬಂದ ಮೂವರು ಕ್ಷುಲ್ಲಕ ಕಾರಣಕ್ಕೆ ಕ್ಯಾತೆ ತೆಗೆದಿದ್ದಾರೆ. ಬಳಿಕ ಕೈಗೆ ಸಿಕ್ಕ ತಿನಿಸುಗಳನ್ನು ಚೆಲ್ಲಾಪಿಲ್ಲಿ ಮಾಡಿರುವ ಘಟನೆ ಸೋಮವಾರ ನಡೆದಿದೆ.
ಲಿಂಗರಾಜಪುರ ಸಮೀಪ ಭಾರತಿ ಎಂಬುವವರು ಬೇಕರಿಯನ್ನು ನಡೆಸುತ್ತಿದ್ದು, ಈ ಬೇಕರಿ ಬಳಿ ಬಂದಿದ್ದ ಮೂವರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದಾರೆ. ನೋಡ ನೋಡುತ್ತಿದ್ದಂತೆ ಬೇಕರಿಯಲ್ಲಿದ್ದ ತಿನಿಸುಗಳನ್ನು ರಸ್ತೆಗೆ ಬಿಸಾಡಿ ದಾಂಧಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಲಿಂಗರಾಜಪುರದಲ್ಲಿ ಗ್ಯಾಸ್ ಸಿಲಿಂಡರ್ ಸಪ್ಲೈ ಮಾಡುವ ಕುಮಾರ್ ಎಂಬಾತ ಬೇಕರಿಯಲ್ಲಿ ವಾಟರ್ ಬಾಟೆಲ್‌ವೊಂದನ್ನು ಖರೀದಿಸಿದ್ದರು. ವಾಟರ್ ಬಾಟೆಲ್‌ಗೆ 12 ರೂಪಾಯಿ ಕೊಡುವಂತೆ ಭಾರತಿ ಕೇಳಿದ್ದಾರೆ. ಬಾಟೆಲ್ ಮೇಲೆ ಎಂಆರ್‌ಪಿ ರೇಟು 10 ರೂಪಾಯಿ ಇರುವಾಗ, ಎರಡು ರೂಪಾಯಿ ಯಾಕೆ ಜಾಸ್ತಿ ಕೊಡಬೇಕೆಂದು ಕುಮಾರ್ ಜಗಳ ತೆಗೆದಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಕೋಪಗೊಂಡ ಕುಮಾರ್ ಮತ್ತು ಅವರ ಸ್ನೇಹಿತರು ಬೇಕರಿಯಲ್ಲಿದ್ದ ವಸ್ತುಗಳನ್ನು ಬಿಸಾಡಿ ದಾಂಧಲೆ ನಡೆಸಿದ್ದಾರೆ. ಘಟನೆ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದ್ದು, ಎರಡೂ ಕಡೆಯಿಂದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.