Site icon Vistara News

Assembly Session: ವಾಲ್ಮೀಕಿ ನಿಗಮ ಅಕ್ರಮ ದಲಿತರಿಗೆ ಮಾಡಿರೋ ಅನ್ಯಾಯ: ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

Assembly Session

ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದ ಅಕ್ರಮದಿಂದ ಚಂದ್ರಶೇಖರನ್ ಎಂಬ ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದರಲ್ಲಿ ಸಚಿವರು, ಶಾಸಕರ (Assembly Session) ಪಾತ್ರ ಇಲ್ಲ ಎಂದು ಸಿಎಂ ಹೇಳಿಕೆ ನೀಡಿದ್ದರು. ಡಿಸಿಎಂ ಅವರು ಸದನದಲ್ಲೂ ಹೇಳಿದ್ದಾರೆ. ಈ ಮೂಲಕ ನಾಗೇಂದ್ರ ಅವರಿಗೆ ಕ್ಲೀನ್ ಚಿಟ್ ಕೊಡುವ ಕೆಲಸ ಮಾಡಿದರು. ಆದರೆ, ಇದು ರಾಜ್ಯ ಸರ್ಕಾರದಿಂದ ದಲಿತರಿಗೆ ಮಾಡಿರುವ ಅನ್ಯಾಯ ಎಂದು ಶಾಸಕ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ವಿಧಾನಸಭೆ ಕಲಾಪದಲ್ಲಿ ನಿಯಮ 69ರಡಿ ಚರ್ಚೆ ಆರಂಭಿಸಿದ ವಿಜಯೇಂದ್ರ ಅವರು, ಹೊಸ ಸರ್ಕಾರ ಬಂದ ಬಳಿಕ 187 ಕೋಟಿ ಹಣ ಹೊರ ರಾಜ್ಯಕ್ಕೆ ಕಳುಹಿಸಿದ್ದಾರೆ, ಇದು ಅಕ್ಷಮ್ಯ ಅಪರಾಧ. ಹಗರಣದ ಬಗ್ಗೆ ಮಾಧ್ಯಮದರು ನಿರಂತರವಾಗಿ ವರದಿ ಪ್ರಸಾರ ಮಾಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸುವೆ. ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 187 ಕೋಟಿ ದುರುಪಯೋಗ ಬಗ್ಗೆ ಡೆತ್ ನೋಟ್ ಬರೆಯದಿದ್ದರೆ ಪ್ರಕರಣ ಹೊರಗೆ ಬರುತ್ತಿರಲಿಲ್ಲ. ಆದರೆ, ದಲಿತರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ | CM Siddaramaiah: ಆಸ್ತಿ ಬಗ್ಗೆ ತಪ್ಪು ಮಾಹಿತಿ; ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ಮತ್ತೆರಡು ದೂರು

ಸಚಿವರ ಮೌಖಿಕ ಸೂಚನೆ ಮೇರೆಗೆ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಹಣ ವರ್ಗಾವಣೆ ಮಾಡಿದ್ದಾರೆ. ಹಂತ ಹಂತವಾಗಿ ಕೋಟಿಗಟ್ಟಲೆ ಹಣ ವರ್ಗಾವಣೆ ಮಾಡಿದ್ದಾರೆ. ರಾಜ್ಯ ಖಜಾನೆಯಿಂದಲೂ ಹಣ ವರ್ಗಾವಣೆ ಆಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೂರಾರು ಕೋಟಿ ಹಣ ಹೊರರಾಜ್ಯಕ್ಕೆ ವರ್ಗಾವಣೆ ಮಾಡಲಾಗಿದೆ. ಚಂದ್ರಶೇಖರ್ ಅವರಿಗೆ ಹಣ ವರ್ಗಾವಣೆ ಬಗ್ಗೆ ಮಾಹಿತಿ ಸಿಕ್ಕಿ, ಅನುಮಾನ ಬರುತ್ತದೆ. ಆಗ ಇದರ ಬಗ್ಗೆ ಮಾಹಿತಿ ಹೊರ ತರಲು ಮುಂದಾಗುತ್ತಾರೆ. ಹೊರಗೆ ಮಾಹಿತಿ ತಂದರೆ ಚಂದ್ರಶೇಖರ್ ಅವರನ್ನೂ ಸಿಲುಕಿಸೋ ಷಡ್ಯಂತ್ರ ಮಾಡಿದ್ದರು. ಕೊನೆಗೆ ಚಂದ್ರಶೇಖರ್ ತಲೆಗೆ ಕಟ್ಟುತ್ತಾರೆ. ಇದರಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಬಿಡುಗಡೆಯಾದ ಅನುದಾನವೂ ಖರ್ಚಾಗಲ್ಲ

ಹಗರಣದ ಬಗ್ಗೆ ವಿಪಕ್ಷ ನಾಯಕರು ಈಗಾಗಲೇ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ದಲಿತರು, ಹಿಂದುಳಿದ ವರ್ಗಗಳ ಪರವಾಗಿ ಅಧಿಕಾರ ನಡೆಸುತ್ತಾರೆ ಎಂದು ಜನ ನಿರೀಕ್ಷೆ ಇಟ್ಟಿದ್ದರು. ಆದರೆ ಶೋಷಿತರ ದನಿಯಾಗಿ ಇವರು ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿಗೆ ಹಣ ಇಲ್ಲ. ಸಂಪೂರ್ಣ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿವೆ. ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ 190 ಕೋಟಿ ಅನುದಾನ ಇಟ್ಟಿದ್ದರು, 44 ಕೋಟಿ ವೆಚ್ಚವೇ ಆಗಿಲ್ಲ. ಮರಾಠ ಅಭಿವೃದ್ಧಿಗೆ 100 ಕೋಟಿ‌ ಘೋಷಣೆ ಆಗಿ, 70 ಕೋಟಿ ಅನುದಾನ ನೀಡಿದ್ದಾರೆ. ಇದರಲ್ಲಿ ಕೇವಲ‌ 30 ಕೋಟಿ‌ ವೆಚ್ಚ ಮಾಡಿದ್ದಾರೆ.ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ 25 ಕೋಟಿ‌ಯಲ್ಲಿ 9 ಕೋಟಿ ಮಾತ್ರ ಬಳಕೆಯಾಗಿದೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ‌ 100 ಕೋಟಿ ನೀಡಿದ್ದು, ಇದರಲ್ಲಿ 25 ಕೋಟಿ ಮಾತ್ರ ಖರ್ಚಾಗಿದೆ. ಹಲವು ಅಭಿವೃದ್ಧಿ ನಿಗಮ ಇದೇ ರೀತಿ ಆಗಿದೆ. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ನೀಡಿದ 13 ಕೋಟಿ ಪೈಕಿ 6.5 ಕೋಟಿ ಮಾತ್ರ ವೆಚ್ಚವಾಗಿದೆ ಎಂದು ಹೇಳಿದರು.

ದಲಿತರ ಹೆಸರೇಳಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ, ಎಸ್‌ಸಿ, ಎಸ್‌ಟಿಗಳ ಅಭಿವೃದ್ಧಿಗೆ ಈ ಹಿಂದೆ ಇದ್ದ ಹಣಕ್ಕಿಂತ ಈ ಬಾರಿ ಕಡಿಮೆ ಇಟ್ಟಿದ್ದಾರೆ. ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಹೋರಾಟ ಕೂಡ ಮಾಡಿದ್ದೇವೆ‌. ನಿಗಮದ ಭ್ರಷ್ಟಾಚಾರದಲ್ಲಿ ಅನೇಕ ಅಧಿಕಾರಿಗಳ ಹೆಸರು ಕೆಳಿಬಂದಿದೆ. ಅನೇಕ ಸಚಿವರು, ಶಾಸಕರ ಹೆಸರೂ ಇದೆ. ಇನ್ನು ಇಷ್ಟೊಂದು ಬಜೆಟ್ ಮಂಡನೆ ಮಾಡಿರುವ ಸಿಎಂ ಸಿದ್ದರಾಮಯ್ಯಗೆ ಯಾವುದೇ ವಿಚಾರ ಗೊತ್ತೇ ಇಲ್ಲ ಅನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿದ್ದೆವು, ತಡವಾಗಿಯಾದರೂ ಸಿಎಂ ನಾಗೇಂದ್ರ ರಾಜೀನಾಮೆ ಪಡೆದುಕೊಂಡರು ಎಂದು ಹೇಳಿದರು.

ಸಿಬಿಐ, ಇಡಿ ತನಿಖೆ ಬೇಡವೆಂದು ನಾವೇನೂ ಹೇಳುತ್ತಿಲ್ಲ: ಗೃಹ ಸಚಿವ

ವಿಜಯೇಂದ್ರ ಪ್ರಸ್ತಾಪದ ವೇಳೆ ಮಧ್ಯಪ್ರವೇಶ ಮಾಡಿದ ಗೃಹಸಚಿವ ಪರಮೇಶ್ವರ್ ಅವರು, ಇನ್ವೆಸ್ಟಿಗೇಷನ್ ಮುಂದೆ ವಿಚಾರ ಇದ್ದಾಗ ಏನೂ ಹೇಳಲು ಆಗಲ್ಲ. ಸಚಿವರು, ಅಧಿಕಾರಿಗಳು ದುಡ್ಡು ತೆಗೆದುಕೊಂಡಿದ್ದಾರೆ ಅಂತ ನಿರ್ದಿಷ್ಟವಾಗಿ ಹೇಳಲು ಬರುವುದಿಲ್ಲ. ಈಗ ಮೂರು ಸಂಸ್ಥೆಗಳು ತನಿಖೆ ಮಾಡುತ್ತಿದ್ದಾರೆ. ಸಿಬಿಐಗೆ ನಾವೇನೂ ಹೇಳಿರಲಿಲ್ಲ. ಆದರೂ ಅವರು ತನಿಖೆ ಮಾಡುತ್ತಿದ್ದಾರೆ. ಇಡಿ ಕೂಡ ತನಿಖೆ ಮಾಡುತ್ತಿದ್ದಾರೆ, ನಾವೇನು ಬೇಡ ಅಂತ‌ ಹೇಳಿಲ್ಲ. ಎಸ್‌ಐಟಿ ಕೂಡ ತನಿಖೆ ಮಾಡುತ್ತಿದ್ದು, ಅವರಿಗೂ ಹೇಳಲು ಆಗಲ್ಲ. ಯಾರಿಗೆ ನಾವು ಹೇಳಬೇಕು ಅಂತ ಗೊತ್ತಿಲ್ಲ ಎಂದರು.

ಇದನ್ನೂ ಓದಿ | Pooja Khedkar: ಐಎಎಸ್‌ಗಾಗಿ ನಕಲಿ ಜಾತಿ, ಕಡಿಮೆ ವಯಸ್ಸು, ದರ್ಪ; ಪೂಜಾ ಖೇಡ್ಕರ್‌ ಕಳ್ಳಾಟ ಒಂದೆರಡಲ್ಲ!

ಸುನೀಲ್‌ ಕುಮಾರ್‌ ಮೇಲೆ ಮುಗಿಬಿದ್ದ ಕೈ ಶಾಸಕರು

ಗೃಹಸಚಿವರು ಮಾತನಾಡುವಾಗ ಶಾಸಕ ಸುನೀಲ್ ಕುಮಾರ್ ಮಧ್ಯಪ್ರವೇಶ ಮಾಡಿ, ನಮ್ಮ ಶಾಸಕರು, ಸಚಿವರು ಯಾರೂ ಭಾಗಿಯೇ ಆಗಿಲ್ಲ ಎನ್ನುತ್ತೀರಿ. ಹಣವನ್ನು ಬಳ್ಳಾರಿ, ಅಮೇಥಿ ಯಾವ ಚುನಾವಣೆಗೆ ಬಳಸಿದೆವು ಅಂತ ಸ್ಪಷ್ಟವಾಗಿ ಹೇಳಿಬಿಡಿ ಎಂದರು. ಇದರಿಂದ ಕಾಂಗ್ರೆಸ್ ಶಾಸಕರು, ಸಚಿವರು ಕೆರಳಿದರು. ಈ ವೇಳೆ ಸದನದಲ್ಲಿ ಎರಡೂ ಪಕ್ಷದ ಶಾಸಕರ ನಡುವೆ ವಾಗ್ವಾದ ನಡೆಯಿತು.

Exit mobile version