Site icon Vistara News

Assembly Session: ನಾಳೆಯಿಂದ ಮುಂಗಾರು ಅಧಿವೇಶನ: ಚರ್ಚೆಗೆ ಸಮರ್ಪಕ ಉತ್ತರ ನೀಡಲು ಅಧಿಕಾರಿಗಳಿಗೆ ಸಿಎಂ ಸೂಚನೆ

Assembly Session

ಬೆಂಗಳೂರು: ನಾಳೆ ಪ್ರಾರಂಭವಾಗುವ ವಿಧಾನ ಮಂಡಲ ಅಧಿವೇಶನದಲ್ಲಿ (Assembly Session) ಚರ್ಚೆಯಾಗುವ ವಿಷಯಗಳಿಗೆ ಸಮರ್ಪಕ ಉತ್ತರ ನೀಡಲು ಸಿದ್ಧರಾಗಿರುವಂತೆ ಹಾಗೂ ಅಧಿವೇಶನದಲ್ಲಿ ಖುದ್ದು ಹಾಜರಿದ್ದು, ಸಚಿವರಿಗೆ ತಮ್ಮ ಇಲಾಖೆಗಳ ವಿಷಯಗಳ ಕುರಿತ ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಮಂಡಲ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

ಈ ಬಾರಿ ಸಂಪೂರ್ಣ ಬಜೆಟ್‌ಗೆ ಮಾರ್ಚ್‌ನಲ್ಲಿಯೇ ಅನುಮೋದನೆ ದೊರೆತಿರುವ ಕಾರಣ ಇದು ಬಜೆಟ್‌ ಬಗ್ಗೆ ಚರ್ಚಿಸುವ ಅಧಿವೇಶನ ಅಲ್ಲ. ಯಾವಗಲೂ ಮಾರ್ಚ್‌ನಲ್ಲಿ ಲೇಖಾನುದಾನ ಪಡೆದು, ಮಳೆಗಾಲದ ಅಧಿವೇಶನದಲ್ಲಿ ಪೂರ್ಣ ಬಜೆಟ್‌ಗೆ ಅನುಮೋದನೆ ಪಡೆಯಲಾಗುತ್ತಿತ್ತು. ಈ ಬಾರಿ ಪೂರ್ಣ ಬಜೆಟ್‌ ಅನುಮೋದನೆ ಆಗಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷದವರು ಈ ಬಾರಿಯ ಸಂಪೂರ್ಣ ಅಧಿವೇಶನವನ್ನು ವಿವಿಧ ಆರೋಪ ಮಾಡುವ ಕುರಿತು ಬಳಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಸೂಕ್ತ ಉತ್ತರ ನೀಡಲು ಅಧಿಕಾರಿಗಳು ಸಿದ್ಧರಾಗಿರಬೇಕು ಎಂದು ಸೂಚಿಸಿದರು.

ಇದನ್ನೂ ಓದಿ | Recruitment Delay: ನೇಮಕಾತಿ ವಿಳಂಬ; ದಯಾಮರಣ ಕೋರಿ ರಾಜ್ಯಪಾಲರಿಗೆ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳ ಪತ್ರ!

ವಿವಿಧ ಇಲಾಖೆಗಳಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇರುವ ವಿಷಯಗಳ ಕುರಿತು ಇಲಾಖಾ ಕಾರ್ಯದರ್ಶಿಗಳಿಂದ ಮುಖ್ಯಮಂತ್ರಿಗಳು ಸವಿಸ್ತಾರವಾಗಿ ಮಾಹಿತಿ ಪಡೆದರು. ಚರ್ಚೆಯ ಸಾಧ್ಯತೆ ಇರುವ ವಿಷಯಗಳ ಕುರಿತು ದತ್ತಾಂಶಗಳನ್ನು ಸಂಗ್ರಹಿಸಲು ಸಹ ಸೂಚನೆ ನೀಡಿದರು.

ಎಲ್ಲ ಕಾರ್ಯದರ್ಶಿಗಳೂ, ಇಲಾಖಾ ಮುಖ್ಯಸ್ಥರು ಅಧಿವೇಶನದಲ್ಲಿ ಹಾಜರಿರಬೇಕು. ಸಚಿವರಿಗೆ ಸಮರ್ಪಕವಾಗಿ ಮಾಹಿತಿ ನೀಡಬೇಕು. ಆಯಾ ಇಲಾಖಾ ಸಚಿವರು ಚರ್ಚೆಯ ವಿಷಯಗಳಿಗೆ ಉತ್ತರಿಸಬೇಕು. ಅಗತ್ಯವಿದ್ದರೆ ನಾನು ಮಧ್ಯಪ್ರವೇಶಿಸುತ್ತೇನೆ ಎಂದು ತಿಳಿಸಿದರು.

ನಿಮ್ಮ ಇಲಾಖೆಯ ವಿಷಯ ಇದ್ದಾಗ ಕಾರ್ಯದರ್ಶಿಗಳು ಖುದ್ದು ಹಾಜರಿದ್ದು, ಸಚಿವರಿಗೆ ಸಹಕಾರ ನೀಡಬೇಕು. ಕೇವಲ ಅಧೀನ ಅಧಿಕಾರಿಗಳನ್ನು ಕಳುಹಿಸಿ ಗೈರು ಹಾಜರಾಗುವಂತಿಲ್ಲ ಎಂದು ಸೂಚನೆ ನೀಡಿದರು.

ಇದನ್ನೂ ಓದಿ | LKG UKG in Anganwadis: ಜು.22ಕ್ಕೆ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ; ಕಾರ್ಯಕರ್ತೆಯರಿಗೆ ಜೀವ ವಿಮೆ

ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯೆಲ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌ ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Exit mobile version