Site icon Vistara News

Assembly Session: ಅಧಿಕಾರಿಗಳು ಮಾಡಿದ ಅಕ್ರಮಕ್ಕೆ ಸಚಿವರ ವಿರುದ್ಧ ಆರೋಪಿಸುವುದು ಸರಿಯಲ್ಲ ಎಂದ ಡಿಕೆಶಿ!

Assembly Session

ಬೆಂಗಳೂರು: “ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಹಗರಣದಲ್ಲಿ (Assembly Session) ರಾಷ್ಟ್ರೀಯ ಬ್ಯಾಂಕುಗಳು ಭಾಗಿಯಾಗಿದ್ದರೆ, ಅದಕ್ಕೆ ದೆಹಲಿಯ ಕೇಂದ್ರ ಸಚಿವರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲು ಸಾಧ್ಯವೇ?, ಅಧಿಕಾರಿಗಳು ಮಾಡುವ ಅಕ್ರಮಕ್ಕೆ ಸಚಿವರನ್ನು ತಪ್ಪಿತಸ್ಥರನ್ನಾಗಿ ಮಾಡಲು ಸಾಧ್ಯವೇ?” ಎಂದು ಎಂಎಲ್‌ಸಿ ಸಿ.ಟಿ. ರವಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ವಿಧಾನ ಪರಿಷತ್‌ನಲ್ಲಿ ಮಂಗಳವಾರ ನಡೆದ ಕಲಾಪದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ವಿಚಾರವಾಗಿ ಸಿ.ಟಿ.ರವಿ ಅವರು, “ವಾಲ್ಮೀಕಿ ನಿಗಮದ ಹಗರಣ ಪೂರ್ವನಿಯೋಜಿತವಾಗಿದ್ದು, ಮೊದಲೇ ಇ ಸ್ಟಾಂಪ್ ಪೇಪರ್ ಖರೀದಿ ಮಾಡಿ, ಒಂದೇ ದಿನದಲ್ಲಿ ಸಾಲಕ್ಕೆ ಅರ್ಜಿ ಹಾಕಿ, ಸೆಕ್ಯುರಿಟಿ ಓವರ್ ಡ್ರಾಫ್ಟ್ ತೆಗೆದುಕೊಂಡು ಹಣ ಪಡೆಯಲಾಗಿದೆ” ಎಂಬ ವಿಚಾರ ಪ್ರಸ್ತಾಪಿಸಿದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ಸಿ.ಟಿ ರವಿ ಅವರು ಅಕ್ರಮದ ಬಗ್ಗೆ ಮಾತನಾಡುತ್ತಾ ಅಕ್ರಮ ಮಾಡಿದವರ ಒಂದು ಕೂಟ ಇದೆ ಎಂದೆಲ್ಲಾ ಪ್ರಸ್ತಾಪ ಮಾಡಿದ್ದಾರೆ. ಬ್ಯಾಂಕಿನಲ್ಲಿ ಆಗಿರುವ ಅಕ್ರಮದ ವಿಚಾರ ಪ್ರಸ್ತಾಪಿಸಿದ್ದಾರೆ. ಅಕ್ರಮವಾಗಿ ಬ್ಯಾಂಕಿಗೆ ವರ್ಗಾವಣೆಯಾದ ಹಣದ ಮೇಲೆ ಒಂದೇ ದಿನದಲ್ಲಿ ಸಾಲಕ್ಕೆ ಅರ್ಜಿ ಹಾಕಿದರು, ಓವರ್ ಡ್ರಾಫ್ಟ್ ತೆಗೆದುಕೊಂಡು ಹಣ ಬಿಡಿಸಿಕೊಂಡರು ಎಂದೆಲ್ಲ ವಿವರಿಸಿದ್ದಾರೆ. ಬ್ಯಾಂಕಿನಲ್ಲಿ ಒಂದೇ ದಿನದಲ್ಲಿ ಇಷ್ಟೆಲ್ಲಾ ಆಗಿದೆ ಎಂದರೆ ಇಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಸಹ ಭಾಗಿಯಾಗಿದೆ ಎಂದು ಅರ್ಥವಲ್ಲವೇ? ಹೀಗಾಗಿ ನಾನು ಇದರಲ್ಲಿ ದೆಹಲಿಯ ಸನ್ಮಾನ್ಯ ಕೇಂದ್ರ ಸಚಿವರು ಭಾಗಿಯಾಗಿದ್ದಾರೆ ಎಂದು ಹೇಳಲು ಆಗುತ್ತದೆಯೇ?” ಎಂದು ಪ್ರಶ್ನೆಸಿದರು.

ಇದನ್ನೂ ಓದಿ | Uttara Kannada News: ರಾಷ್ಟ್ರೀಯ ಹೆದ್ದಾರಿಯಲ್ಲಿ ಕೃತಕ ನೆರೆ ತಡೆಗೆ ಶಾಶ್ವತ ಪರಿಹಾರ; ಕಾಗೇರಿ

“ಯಾರೋ ಅಧಿಕಾರಿ ಮಾಡಿದ ತಪ್ಪಿಗೆ ಸಚಿವರ ಮೇಲೆ ಆರೋಪ ಹೊರಿಸಲು ಆಗುವುದಿಲ್ಲ. ಮಂತ್ರಿಗಳು, ಶಾಸಕರು ಅಕ್ರಮಗಳಲ್ಲಿ ಭಾಗಿಯಾಗಿದ್ದರೆ ಯಾವುದೇ ಕಾರಣಕ್ಕೂ ನಾವು ಅದಕ್ಕೆ ಬೆಂಬಲವಾಗಿ ನಿಲ್ಲುವುದಿಲ್ಲ. ಈ ಪ್ರಕರಣದಲ್ಲಿ ನಮ್ಮ ಸರ್ಕಾರ ನಿರ್ದಾಕ್ಷಿಣ್ಯವಾಗಿ ನಡೆದುಕೊಂಡು, ತನಿಖಾ ತಂಡ ರಚನೆ ಮಾಡಿದೆ. ತನಿಖಾ ತಂಡವು ಹಣವನ್ನು ಮರಳಿ ಪಡೆದಿದೆ. ಮಾಜಿ ಮಂತ್ರಿಗಳಿಗೆ ಹಾಗೂ ಶಾಸಕರಿಗೆ ನೋಟಿಸ್ ನೀಡಿದೆ. ಎಸ್ ಐಟಿ ಯಾವ ಕ್ರಮ ಬೇಕಾದರೂ ತೆಗೆದುಕೊಳ್ಳಲಿ. ಸಿಬಿಐ ಸೇರಿದಂತೆ ಯಾರು ಬೇಕಾದರೂ ಬಂದು ತನಿಖೆ ಮಾಡಲಿ. ಆದರೆ ನೀವು ಅದಕ್ಕಿಂತ ಮುಂಚಿತವಾಗಿ ಮಂತ್ರಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಸಿದರೆ ಹೇಗೆ? ನೀವು ಯಾವ ದೃಷ್ಟಿಕೋನದಲ್ಲಿ ಸರಕಾರ ಆರೋಪಿಗಳ ರಕ್ಷಣೆ ಮಾಡುತ್ತಾ ಇದೆ ಎಂದು ಹೇಳಲು ಹೊರಟಿದ್ದೀರಿ ಎಂದು ನನಗೆ ತಿಳಿದಿದೆ. ನೀವು ಅವರ ಹೆಸರು ಹೇಳಿ. ನಾನು ಸಹ ನನಗೆ ಗೊತ್ತಿರುವ ಹೆಸರುಗಳನ್ನು ಹೇಳುತ್ತೇನೆ” ಎಂದು ಸಿ.ಟಿ.ರವಿ ಅವರಿಗೆ ಕುಟುಕಿದರು.

ಕಲಾಪದ ನಡುವೆ ವಿರೋಧ ಪಕ್ಷದವರ ದೋಷಗಳನ್ನು ಕುಳಿತಲ್ಲೇ ತಿದ್ದಿದ ಸಿಎಂ

ಬೆಂಗಳೂರು: 16ನೇ ವಿಧಾನಸಭೆಯ ನಾಲ್ಕನೇ ಅಧಿವೇಶನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಪ್ರಕರಣ ಕುರಿತಂತೆ ಕಲಾಪದಲ್ಲಿ ಆಡಿದ ಪ್ರತೀ ಮಾತುಗಳನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಳಿಸಿಕೊಂಡರು.

ಸೋಮವಾರ ಮಧ್ಯಾಹ್ನ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರಿಂದ ಮಂಗಳವಾರ ರಾತ್ರಿ ಜೆಡಿಎಸ್ ನ ಶಾರದಾ ಪೂರ್ಯಾನಾಯ್ಕ್ ಮತ್ತು ಬಿಜೆಪಿಯ ಅರವಿಂದ್ ಬೆಲ್ಲದ್ ಅವರು ಮಾತನಾಡುವವರೆಗೂ ಪ್ರತಿಯೊಬ್ಬರ ಮಾತನ್ನೂ ಕೇಳಿಸಿಕೊಂಡರು.

ಎರಡೂ ದಿನದಲ್ಲಿ ಆರ್.ಅಶೋಕ್ ಅವರ ಸುದೀರ್ಘ ನಾಲ್ಕು ಗಂಟೆಗಳ ಮಾತಿನ ಸಮೇತ ಸ್ವಪಕ್ಷದವರ ಮತ್ತು ವಿರೋಧ ಪಕ್ಷದವರ ಮಾತುಗಳನ್ನು ಕೇಳಿಸಿಕೊಂಡರು. ಕುಳಿತ ಜಾಗದಿಂದ ಕದಲದಂತೆ ಶಾಂತಚಿತ್ತವಾಗಿ ಪ್ರತಿಯೊಬ್ಬರ ಮಾತನ್ನೂ ‘ಪಿನ್ ಟು ಪಿನ್’ ಕೇಳಿಸಿಕೊಂಡ ಸಿದ್ದರಾಮಯ್ಯ ಅವರು, ಕಲಾಪದ ನಡುವೆ ವಿರೋಧ ಪಕ್ಷದವರ factual errors ಗಳನ್ನು ಕುಳಿತಲ್ಲೇ ತಿದ್ದುತ್ತಾ ಮುತ್ಸದ್ದಿತನ‌ ಮೆರೆದರು.

ಇದನ್ನೂ ಓದಿ | Manikanta Rathod: ಅನ್ನ ಭಾಗ್ಯ ಅಕ್ಕಿ ಕಳವು ಕೇಸ್‌ನಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಬಂಧನ

ವಿರೋಧ ಪಕ್ಷದವರ ಎಂಟತ್ತು ಗಂಟೆಗಳ ಆರೋಪ, ದಾಳಿ, ಆಕ್ರೋಶದ ನುಡಿಗಳನ್ನು ಬಹುತೇಕ ಎಲ್ಲವನ್ನೂ ಹೆಚ್ಚಿನ ಅಡ್ಡಿ ಪಡಿಸದೆ ಮುಖ್ಯಮಂತ್ರಿಗಳು ಮತ್ತು ಆಡಳಿತ ಪಕ್ಷದ ಸದಸ್ಯರು ಆಲಿಸಿ ಸದನದ ಘನತೆ ಹೆಚ್ಚಿಸಿದರು. ವಾಲ್ಮೀಕಿ ನಿಗಮ ಪ್ರಕರಣದ ವಿರೋಧ ಪಕ್ಷದವರ ಎಲ್ಲಾ ಆರೋಪ ಮತ್ತು ಮಾತುಗಳಿಗೆ ಮುಖ್ಯಮಂತ್ರಿಗಳು ಗುರುವಾರ ಉತ್ತರ ನೀಡಲಿದ್ದಾರೆ.

Exit mobile version