ವಿಧಾನ ಸಭೆ: ಜೆಡಿಎಸ್‌ನಿಂದ ಅರಸೀಕೆರೆ ಶಾಸಕರಾಗಿ ಆಯ್ಕೆಯಾಗಿರುವ ಹಾಗೂ ಸದ್ಯದಲ್ಲೆ ಕಾಂಗ್ರೆಸ್ ಪಕ್ಷಕ್ಕೆ ಹಾರಲು ಸಿದ್ಧವಾಗಿರುವ ಕೆ.ಎಂ. ಶಿವಲಿಂಗೇಗೌಡರ ಕುರಿತು ವಿಧಾನ ಸಭೆಯಲ್ಲಿ (Assembly Session) ಸ್ವಾರಸ್ಯಕರ ಚರ್ಚೆ ನಡೆಯಿತು. ರಾಜ್ಯಪಾಲರ ಭಾಷಣದ ಕುರಿತು ಚರ್ಚೆ ನಡೆಸುತ್ತಿರುವಾಗ ಬಿಜೆಪಿ ಶಾಸಕ ಸಿ.ಟಿ. ರವಿ ಈ ಕುರಿತು ಮಾತನಾಡಿದರು.
ಶಿವಲಿಂಗೇಗೌಡರ ಕುರಿತು ಮಾತನಾಡಿದ ಸಿ.ಟಿ. ರವಿ, ನೀವು ಡಬಲ್ ಮೂಡಿನಲ್ಲಿ ಇದ್ದೀರಿ. ನಿಮ್ಮನ್ನು ಕಂಡ್ರೆ ನನಗೆ ಅಪಾರ ಪ್ರೀತಿ ವಿಶ್ವಾಸ. ಭವಿಷ್ಯದಲ್ಲಿ ಹೀಗೆ ಆಗುತ್ತದೆ, ಎಣ್ಣೆ ಬಂದಾಗ ಕಣ್ಣು ಮುಚ್ಕೋಬೇಡಿ ಎಂದಿದ್ದೆ. ಆದರೆ ಈಗ ನೋಡಿದರೆ ಅತ್ತ ಕಡೆಗೋ ಇತ್ತ ಕಡೆಗೋ ಎಂಬ ಧ್ವಂದ್ವದ ಸ್ಥಿತಿಯಲ್ಲಿ ಇದ್ದೀರಿ. ನನ್ನ ಮಾತು ಕೇಳಿದ್ರೆ ಈ ಸಮಸ್ಯೆ ಇರಲಿಲ್ಲ. ಶಿವಲಿಂಗೇಗೌಡರು ಈಗ ಚಕ್ರವ್ಯೂಹದಲ್ಲಿ ಇದ್ದಾರೆ. ಅಭಿಮನ್ಯು ಆಗ್ತಾರೋ ಅರ್ಜುನ ಆಗ್ತಾರೋ ಕಾಲವೇ ಉತ್ತರಿಸಬೇಕು. ಅವರ ನೆರವಿಗೆ ನಾನು ಬರುವುದಕ್ಕೆ ಆಗುವುದಿಲ್ಲ ಎಂದರು.
ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಶಿವಲಿಂಗೇಗೌಡ, ಜನ ಬಲ ಇರುವವರೆಗೆ ನಾನು ಅರ್ಜುನನೇ ಆಗೋದು. ಅಭಿಮನ್ಯು ತರಹ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ನಾನು ಅರ್ಜುನ ಪಾತ್ರಧಾರಿ ಎಂದರು.
ಇದನ್ನೂ ಓದಿ: JDS Politics: ನನ್ನ ಬಗ್ಗೆ ಮಾತನಾಡಿದರೆ ಅವರ ಬಂಡವಾಳ ಬಯಲು: ದಳಪತಿಗಳಿಗೆ ಶಿವಲಿಂಗೇಗೌಡ ಎಚ್ಚರಿಕೆ
ಮಾತು ಮುಂದುವರಿಸಿದ ಸಿ.ಟಿ. ರವಿ, ಅಭಿಮನ್ಯುವನ್ನು ಸಾಯಿಸಿದ್ದು ಯಾರು ಎಂದು ನನಗೆ ಗೊತ್ತಿಲ್ವಾ? ಯಾರು ಕುತಂತ್ರ ಮಾಡ್ತಿದ್ದಾರೆ, ನಿಮ್ಮನ್ನು ಸುತ್ತುವರಿದ ದುರ್ಯೋಧನ, ಕರ್ಣ, ಶಕುನಿ ಯಾರು ಎಂದು ಹೇಳಿ? ಎಂದರು. ನಿನ್ನೆ ವೇದಿಕೆಯಲ್ಲಿ ಯಾರೆಲ್ಲಾ ಇದ್ದರು ಎಂದು ನೋಡಿದರೆ ಕರ್ಣ ಯಾರು? ಎಂದು ಹೇಳಬಹುದು ಎಂದು ಸಚಿವ ಆರ್. ಅಶೋಕ್ ಕಾಲೆಳೆದರು. ನಾನು ಭೀಮನ ಪಾತ್ರ ಮಾಡಿರೋದು ಎಂದ ಶಿವಲಿಂಗೇಗೌಡ, ದುರ್ಯೋಧನ ಪಾತ್ರ ಮಾಡಿಲ್ಲ ಎಂದರು ಶಿವಲಿಂಗೇಗೌಡ.
ಅರ್ಜುನ ಕೌರವರ ಕಡೆ ಇರಲ್ಲ, ಪಾಂಡವರ ಕಡೆ ಇರೋದು ಎಂದು ಹೇಳಿದ ಸಿ.ಟಿ. ರವಿ, ಆಡಳಿತದ ಪಕ್ಷದ ಕಡೆಗೆ ಕೈ ತೋರಿಸಿದರು. ಪಾಂಡವರು ಯಾರು ಕೌರವರು ಯಾರು ಎಂದು ಚುನಾವಣೆಯಲ್ಲಿ ನಿರ್ಧಾರ ಆಗುತ್ತದೆ ಎಂದು ಶಿವಲಿಂಗೇಗೌಡ ಹೇಳುವ ಮೂಲಕ ಮಹಾಭಾರತ ಪ್ರಸಂಗ ಮುಕ್ತಾಯವಾಯಿತು.