Site icon Vistara News

Assembly Session: ಅವಾಚ್ಯ ಶಬ್ದ ಬಳಕೆ; ಆರ್.ಅಶೋಕ್ ವಿರುದ್ಧ ಪ್ರದೀಪ್ ಈಶ್ವರ್ ಹಕ್ಕು ಚ್ಯುತಿ ಮಂಡನೆ

Assembly Session

ಬೆಂಗಳೂರು: ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಸದನದಲ್ಲಿ (Assembly Session) ಸೋಮವಾರ ಹಕ್ಕು ಚ್ಯುತಿ ಮಂಡನೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ವಿಪಕ್ಷ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಪ್ರದೀಪ್‌ ಈಶ್ವರ್‌ ಆಗ್ರಹಿಸಿದ್ದಾರೆ.

16ನೇ ವಿಧಾನ ಸಭೆಯ 4ನೇ ಅಧಿವೇಶನದಲ್ಲಿ ಜುಲೈ 19ರಂದು ನಾನು ಮಾತನಾಡುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮತ್ತು ನಾನು ಮಾತನಾಡದಂತೆ ಅಡ್ಡಿಪಡಿಸಿದ್ದಾರೆ. ಆದ್ದರಿಂದ ಅವರ ಮೇಲೆ ಹಕ್ಕುಚ್ಯುತಿ ಮಂಡಿಸಲು ಅನುಮತಿ ನೀಡಬೇಕು ಎಂದು ಪ್ರದೀಪ್‌ ಈಶ್ವರ್‌ ಮನವಿ ಮಾಡಿದ್ದರು. ಹೀಗಾಗಿ ಹಕ್ಕು ಚ್ಯುತಿ ಮಂಡನೆಗೆ ಸ್ಪೀಕರ್ ಯು.ಟಿ. ಖಾದರ್‌ ಅನುಮತಿ ನೀಡಿದರು.

ಆರ್.ಆಶೋಕ್ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡಿ ಮಾತನಾಡಿದ ಪ್ರದೀಪ್ ಈಶ್ವರ್, ಮೊದಲ ಬಾರಿ ಶಾಸಕರಾದಾಗ ಖುಷಿ ಪಡಲು ಆರ್. ಆಶೋಕ್ ಅವರ ತಂದೆ-ತಾಯಿ ಇದ್ದರು. ಆದರೆ, ನಾನು ಶಾಸಕನಾದಾಗ ಖುಷಿ ಪಡಲು ನನ್ನ ತಂದೆ-ತಾಯಿ ಇರಲಿಲ್ಲ. ನಾನು ತಂದೆ-ತಾಯಿ ಕಳೆದುಕೊಂಡು ಪೇರೆಸಂದ್ರ ಗ್ರಾಮದಲ್ಲಿ ಕೂಲಿ ಮಾಡಿದ್ದೇನೆ, ತೋಟಕ್ಕೆ ನೀರು ಹರಿಸಿದ್ದೇನೆ. ಶಾಸಕನಾದ ಬಳಿಕ ಜನರಿಗೆ ಅನುಕೂಲವಾಗಲು 10 ಉಚಿತ ಆಂಬ್ಯುಲೆನ್ಸ್ ನೀಡಿದ್ದೇನೆ. ಅನೇಕ ಮಕ್ಕಳ ವಿಧ್ಯಾಭ್ಯಾಸಕ್ಕೆ ನೆರವಾಗಿದ್ದೇನೆ. ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಆರ್. ಆಶೋಕ್ ಅಣ್ಣಾನ ಬಗ್ಗೆ ನನಗೆ ಗೌರವ ಇದೆ, ಅವರು ಮಾತುಗಳ ಬಗ್ಗೆ ನನಗೆ ಉತ್ತರ ಕೊಡಲಿ ಎಂದು ಆಗ್ರಹಿಸಿದರು.

ಇದನ್ನೂ ಓದಿ | Union Budget 2024: ಕೇಂದ್ರ ಬಜೆಟ್‌ನಲ್ಲಿ ರೈಲ್ವೇ ವಲಯದ 9 ಪ್ರಮುಖ ನಿರೀಕ್ಷೆಗಳಿವು

ಈ ವೇಳೆ ಮಾತನಾಡಿದ ಆರ್. ಆಶೋಕ್ ಅವರು, ನಾನು ಯಾವುದೇ ತಪ್ಪು ಪದ ಬಳಕೆ ಮಾಡಿಲ್ಲ. ದಾಖಲೆ ತೆಗೆದು ನೋಡಿದರೆ ಗೊತ್ತಾಗುತ್ತದೆ. ಒಂದು ವೇಳೆ ಅವರ ಪ್ರಕಾರ ತಪ್ಪು ಮಾಡಿದ್ದೇನೆಂದು ಎನಿಸಿದರೆ ಪರಿಶೀಲನೆ ಮಾಡಲಿ, ಅವರು ಬೇರೆ ಬೇರೆ ಭಾಷೆ ಬಳಸಿದ್ದಾರೆ. ಅದರ ಬಗ್ಗೆ ನಾವು ಚಕಾರ ಎತ್ತಿಲ್ಲ. ಪರಿಶೀಲನೆ ಮಾಡಿ ದಾಖಲೆಯಲ್ಲಿ ಇದ್ದರೆ ತೆಗೆದು ಹಾಕಿ, ನಮ್ಮ ಆಕ್ಷೇಪ ಇಲ್ಲ ಎಂದು ಹೇಳಿದರು.

ಇಬ್ಬರು ಸದಸ್ಯರ ಮಾತುಗಳನ್ನು ಆಲಿಸಿದ ಬಳಿಕ ಮಾತನಾಡಿದ ಸ್ಪೀಕರ್‌ ಖಾದರ್‌ ಅವರು, ಪ್ರದೀಪ್‌ ಈಶ್ವರ್‌ ಅವರು ತಮ್ಮ ವಿಚಾರಗಳನ್ನು ಹೇಳಿದ್ದಾರೆ. ಅಶೋಕ್‌ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಈಗ ನಾನು ಕಲಾಪದ ವಿಡಿಯೊ ತರಿಸಿಕೊಂಡು ಪರಿಶೀಲನೆ ಮಾಡಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ವೇಳೆ ಸಿಮೆಂಟ್ ಮಂಜು ಮಾತನಾಡಿ, ಒಬ್ಬ ಶಾಸಕನಿಗೆ ಸಿಎಂ 25 ಕೋಟಿ ಅನುದಾನ ನೀಡಿದ್ದಾರೆ ಅಂತ ಪ್ರದೀಪ್ ಈಶ್ವರ್ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಯಾರಿಗೆ ಕೊಟ್ಟಿದ್ದಾರೆ ಉತ್ತರ ಕೊಡಲಿ ಎಂದು ಆಗ್ರಹಿಸಿದರು. ಇದಕ್ಕೆ ಸ್ಪೀಕರ್‌ ಪ್ರತಿಕ್ರಿಯಿಸಿ, ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ವಿಚಾರ ಚರ್ಚೆ ಮಾಡಲು ಆಗಲ್ಲ ಎಂದು ಹೇಳಿದರು.

ಏನಿದು ಹಕ್ಕು ಚ್ಯುತಿ ಮಂಡನೆ?

ಜನ ಪ್ರತಿನಿಧಿಗಳ ಹಕ್ಕು ರಕ್ಷಣೆಗಾಗಿ ಸಂವಿಧಾನದಲ್ಲಿ ಹಕ್ಕುಚ್ಯುತಿ ಮಂಡನೆಗೆ ಅವಕಾಶ ನೀಡಲಾಗಿದೆ. ತಮ್ಮ ಹಕ್ಕಿಗೆ ಯಾರಾದರೂ ಚ್ಯುತಿ ತಂದಿದ್ದಾರೆ ಎಂದು ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಸಭೆ ಮತ್ತು ಪರಿಷತ್ತಿನ ಸದಸ್ಯರು ಯಾರ ವಿರುದ್ಧ ಬೇಕಾದರೂ ಕ್ರಮಕ್ಕೆ ಆಗ್ರಹಿಸಬಹುದು. ಇಂತಹ ಪ್ರಕರಣದಲ್ಲಿ ಸಂಸತ್ತು ಮತ್ತು ಶಾಸನ ಸಭೆಯ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಲು ಸಹ ಅವಕಾಶವಿದೆ.

ಇದನ್ನೂ ಓದಿ | Amit Malaviya: ಸರ್ಕಾರಿ ನೌಕರರೂ RSS ಸೇರಬಹುದು; 58 ವರ್ಷಗಳ ಹಿಂದೆ ಇಂದಿರಾ ಗಾಂಧಿ ಹೇರಿದ್ದ ನಿಷೇಧ ರದ್ದು!

ಹಕ್ಕುಚ್ಯುತಿ ನಿರ್ಣಯವನ್ನು ಯಾವುದೇ ವ್ಯಕ್ತಿ, ಸದನದ ಇತರೆ ಸದಸ್ಯರು ಹೊರಗಿನ ವ್ಯಕ್ತಿಗಳ, ಸರ್ಕಾರಿ ಅಧಿಕಾರಿಗಳ ವಿರುದ್ಧವೂ ಮಂಡಿಸಬಹುದು. ಹಕ್ಕು ಬಾಧ್ಯತಾ ಸಮಿತಿಯ ವರದಿಯಲ್ಲಿ ತಪ್ಪು ಸಾಬೀತಾದರೆ ಜೈಲು ಶಿಕ್ಷೆ ವಿಧಿಸುವ ಅವಕಾಶವೂ ಇದೆ.

Exit mobile version