ವಿಧಾನಸಭೆ: ಮಾಜಿ ಸಿಎಂ ಸಿದ್ದರಾಮಯ್ಯ ಮಾಂಸಾಹಾರವನ್ನು ತ್ಯಜಿಸಿ ಸಂಪೂರ್ಣ ಸಸ್ಯಾಹಾರಿಯಾಗಿದ್ದಾರೆ. ಈ ವಿಷಯವನ್ನು ವಿಧಾನಸಭೆಯಲ್ಲಿ(Assembly Session) ಸ್ವತಃ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಡೀಸೆಲ್ ಸಬ್ಸಿಡಿ ವಿಚಾರ ಪ್ರಸ್ತಾಪಿಸಿದರು. ಆರ್. ಅಶೋಕ್ ಅವರನ್ನು ಮಾತಿಗೆಳೆದು, ನೀನು ಹಳ್ಳಿಯಲ್ಲಿ ಮಲಗೋಕೆ ಹೋಗ್ತಿಯಲ್ವಾ, ಅಲ್ಲಿ ಡೀಸೆಲ್ ಸಬ್ಸಿಡಿ ಬಗ್ಗೆ ಹೇಳಿದ್ರಾ? ಎಂದರು. ಮಲಗೋಕೆ ಹೋಗಲ್ಲ, ಸೌಲಭ್ಯ ಕೊಡಲು ಹೋಗೋದು ಎಂದು ಅಶೋಕ್ ಉತ್ತರಿಸಿದರು.
ಹೌದು. ಮಲಗೋದು ಅಂದ್ರೆ ಸೌಲಭ್ಯ ವಿತರಣೆ ಮಾಡೋದು ಅಂತಾ. ನಾನು ಮಲಗೋದು ಅಂತಾ ಹೇಳಿದೆ ಅಷ್ಟೇ, ಸೌಲಭ್ಯ ವಿತರಣೆ ಹೇಳಲಿಲ್ಲ ಅಷ್ಟೇ, ಸಾರಿ. ಮಲಗೋದು ಎಂದರೆ ಗ್ರಾಮ ವಾಸ್ತವ್ಯ ಅಂದ್ರೆ ಮಲಗೋದು ಅಂತ. ನೀನು ರಾತ್ರಿ ಎಲ್ಲಾ ಎದ್ದು ಕೂತಿರುತ್ತಿಯಾ? ಮಲಗಲ್ವಾ ಎಂದು ಮರುಪ್ರಶ್ನೆ ಮಾಡಿದರು.
ಛಬ್ಬಿಗೆ ಹೋದಾಗ ರಾತ್ರಿ ಎಲ್ಲಾ ಎದ್ದು ಕೂತಿದ್ದೆ ಎಂದು ಅಶೋಕ್ ಹೇಳಿದರು. ನೀನು ಹೋದಾಗ ಸಚಿವರು ಬಂದಿದ್ದಾರೆ ಅಂತ ನಾಟಿ ಕೋಳಿ ಸಾಂಬಾರು ನೀಡಿರುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು. ಇಲ್ಲ ಸಾರ್ ನಾವು ಪ್ಯೂರ್ ವೆಜ್. ನಾಟಿ ಕೋಳಿ ಎಲ್ಲ ಇಲ್ಲ ಎಂದು ಅಶೋಕ್ ಉತ್ತರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಿಮಗೆ ಗೊತ್ತ? ಡಿಸೆಂಬರ್ 1 ರಿಂದ ನಾನು ಕೂಡಾ ವೆಜಿಟೇರಿಯನ್ ಆಗಿದ್ದೇನೆ ಎಂದರು. ಹೌದಾ ಯಾಕೆ? ನೀವು ಏನಾದರೂ ಮಾಡಿ ಚುನಾವಣೆ ಗೆಲ್ಲಬೇಕು ಅಂತ ರೇವಣ್ಣ ರೀತಿ ಹೋಮ ಹವನ ಮಾಡಿಸುತ್ತಿದ್ದೀರಾ ಹೇಗೆ? ನಿಮ್ಮ ಕೆಂಪು ಬೊಟ್ಟು ನೋಡಿದರೆ ಹಾಗೆನ್ನಿಸುತ್ತಿದೆ ಎಂದು ಅಶೋಕ್ ಕಾಲೆಳೆದರು. ಇಲ್ಲಪ್ಪ, ಸಣ್ಣ ಆಪರೇಷನ್ ಅದಕ್ಕೆ ಮಾಂಸಾಹಾರ ಬಿಟ್ಟಿದ್ದೇನೆ ಎಂದರು.
ನಿಂಬೆಹಣ್ಣೀನಲ್ಲಿ ಸಿಟ್ರಿಕ್ ಆಸಿಡ್ ಇದೆ, ಅದಕ್ಕೆ ಕೈಯಲ್ಲಿ ಹಿಡಿದುಕೊಳ್ಳುತ್ತಾರೆ. ಅದಕ್ಕೆ ಇಲ್ಲಿ ರೇವಣ್ಣ ಹೆಸರು ಯಾಕೆ ಎಂದು ಜೆಡಿಎಸ್ ಶಾಸಕರಿಂದ ಆಕ್ಷೇಪ ವ್ಯಕ್ತವಾಯಿತು.