Site icon Vistara News

Assembly Session: ಲೂಟಿಕೋರರ ಪಿತಾಮಹ ನೀನು: ಸದನದಲ್ಲಿ ಅಶ್ವತ್ಥ್ ನಾರಾಯಣ ವಿರುದ್ಧ ಗುಡುಗಿದ ಡಿಕೆಶಿ!

Assembly Session

ಬೆಂಗಳೂರು: ವಿಧಾನಮಂಡಲದ ಅಧಿವೇಶನದಲ್ಲಿ (Assembly Session) ಎರಡನೇ ದಿನವಾದ ಮಂಗಳವಾರವೂ ವಾಲ್ಮೀಕಿ ನಿಗಮದ ಹಗರಣವು (Valmiki Corporation Scam) ಸದ್ದು ಮಾಡಿದೆ. ಚರ್ಚೆಯ ವೇಳೆ ಸಿಎಂ ಸಿದ್ದರಾಮಯ್ಯ (CM Siddaramaiah) ಗೈರುಹಾಜರಿಯನ್ನು ಬಿಜೆಪಿ ಶಾಸಕ ಡಾ.ಸಿ.ಎನ್. ಅಶ್ವತ್ಥ್‌ ನಾರಾಯಣ್‌ (Ashwath narayan) ಆಕ್ಷೇಪಿಸಿದರು. ಈ ವೇಳೆ ʼಲೂಟಿಕೋರರ ಪಿತಾಮಹʼ ನೀನು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿರುವುದು ಕಂಡುಬಂದಿದೆ.

ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ನಂತರ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಚರ್ಚೆ ಮೇಲಿನ ಪ್ರಸ್ತಾಪ ಮುಂದುವರಿಸಲು ಮುಂದಾದರು. ಈ ವೇಳೆ ಮಾಜಿ ಸಚಿವ ಅಶ್ವತ್ಥ್ ನಾರಾಯಣ ಅವರು, ವಾಲ್ಮೀಕಿ ನಿಗಮದ ಹಗರಣದಲ್ಲಿ ಹಗಲು ದರೋಡೆ ಮಾಡಿರುವ ಮುಖ್ಯಮಂತ್ರಿಗಳು ಗೈರಾಗಿದ್ದಾರೆ. ಅವರು ಸದನಕ್ಕೆ ಹಾಜರಾಗಬೇಕು ಎಂದು ಪಟ್ಟು ಹಿಡಿದರು.

ಅಶೋಕ್ ಚರ್ಚೆ ಮಾಡುವಾಗ ಸಿಎಂ ಸಿದ್ದರಾಮಯ್ಯ ಗೈರಾದ ಹಿನ್ನೆಲೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಅಶ್ವತ್ಥ್‌ ನಾರಾಯಣ್, ನೇರವಾಗಿ ಇದು ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ ವಿಚಾರ. ಹಣಕಾಸು ಸಚಿವರಾಗಿರೋ ಸಿಎಂ ಮೇಲೆ ಗಂಭೀರ ಆರೋಪ ಇದೆ. ಕೂಡಲೇ ಅವರನ್ನು ಕರೆಸಿ ಅಂತ ಆಗ್ರಹಿಸಿದರು. ಈ ವೇಳೆ ಸದನದಲ್ಲಿ ಎದ್ದು ನಿದ್ದು ಸಿಎಂ ಪರವಾಗಿ ಬ್ಯಾಟಿಂಗ್ ಮಾಡಿದ ಡಿಸಿಎಂ ಡಿಕೆಶಿ, ಸಿಎಂಗೆ ಗೌರವ ಕೊಡೋದನ್ನು ಕಲಿಯಿರಿ ಅಂತ ಆಕ್ರೋಶ ಹೊರಹಾಕಿದರು. ಈ ವೇಳೇ ಲೂಟಿಕೋರರ ಪಿತಾಮಹ ನೀನು ಅಂತ ಅಶ್ವತ್ಥ್‌ ನಾರಾಯಣ್ ಕಡೆ ಬೊಟ್ಟು ಮಾಡಿ ಕಿಡಿಕಾರಿದರು. ಈ ವೇಳೆ ಡಿಸಿಎಂ ವಿರುದ್ಧ ಮುಗಿಬಿದ್ದ ಬಿಜೆಪಿ ಶಾಸಕರು, ನೀವೇನು ಎಂಬುವುದು ಎಲ್ಲರಿಗೂ ಗೊತ್ತಿದೆ ಅಂತ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ | Lakshmi Hebbalkar: ವಿಶೇಷ ಶಾಲೆಗಳ ಶಿಕ್ಷಕರ ವೇತನ ಪರಿಷ್ಕರಣೆಗೆ ಅಗತ್ಯ ಕ್ರಮ: ಹೆಬ್ಬಾಳಕರ್ ಭರವಸೆ

ಈ ವೇಳೆ ಮಾತನಾಡಿದ ಶಿವಕುಮಾರ್ ಅವರು, ಸಿದ್ದರಾಮಯ್ಯ ಅವರು ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದಾಗ ವಿಷಯದ ಚರ್ಚೆಗೆ ಪ್ರಸ್ತಾಪ ಮಾಡಿದಾಗೆಲ್ಲ ಬಿಜೆಪಿಯ ಮುಖ್ಯಮಂತ್ರಿಗಳು ಸದನದಲ್ಲಿ ಹಾಜರಿರುತ್ತಿದ್ದರೇ? ಅವರು ಗೈರಾಗಿರಲಿಲ್ಲವೇ? ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಶ್ವತ್ಥ್ ನಾರಾಯಣ ಅವರು ಮಾಡಬಾರದನ್ನು ಮಾಡಿರುವುದಕ್ಕೇ ಜನ ನಮ್ಮನ್ನು ಇಲ್ಲಿ ಕೂರಿಸಿ, ನಿಮ್ಮನ್ನು ಅಲ್ಲಿ ಕೂರಿಸಿ ತೀರ್ಪು ಕೊಟ್ಟಿದ್ದಾರೆ” ಎಂದು ಹರಿಹಾಯ್ದರು.

“ನನ್ನ ಹೆಸರು ಹೇಳಿ ಆಪಾದನೆ ಮಾಡಲಾಗಿದೆ, ಸಾಕ್ಷಿ ನೀಡಬೇಕು” ಎಂದು ಅಶ್ವತ್ಥ್ ನಾರಾಯಣ ಹೇಳಿದಾಗ “ಮಾಡಬಾರದ್ದು ಮಾಡಿರುವ ನಿಮ್ಮದನ್ನು ತೆಗೆಯುತ್ತೇವೆ, ಮಾತನಾಡುತ್ತೇವೆ ತಡೆಯಿರಿ” ಎಂದು ಗುಡುಗಿದರು.

“ನನ್ನ ವಿರುದ್ದ ಮಾಡಿದ ಆಪಾದನೆ ಹಿಟ್ ಆ್ಯಂಡ್ ರನ್” ಎಂದು ಅಶ್ವತ್ಥ್ ನಾರಾಯಣ ಗದ್ದಲ ಎಬ್ಬಿಸಿದಾಗ “ರಾಮನಗರದ ಕಸ ಗುಡಿಸುತ್ತೇನೆ ಎಂದು ಹೇಳಿದ ನಿಮಗೆ ವಿಧಾನಸಭೆ ಚುನಾವಣೆಯಲ್ಲಿ ಒಂದೇ ಒಂದು ಸೀಟು ಗೆಲ್ಲಲು ಆಗಲಿಲ್ಲ” ಎಂದು ಡಿಸಿಎಂ ಕುಟುಕಿದರು.

ಮುಂದುವರಿದು “ಇಷ್ಟು ಹೊತ್ತಿನ ತನಕ ಮುಖ್ಯಮಂತ್ರಿಗಳು ಕುಳಿತಿರಲಿಲ್ಲವೇ? ಸದನದಲ್ಲಿ ನಾವೆಲ್ಲಾ ಕುಳಿತಿಲ್ಲವೇ? ಮುಖ್ಯಮಂತ್ರಿಗಳ ಮೇಲೆ ಆರೋಪವಿದೆ ಎಂದು ಹೇಗೆ ಹೇಳುತ್ತಾರೆ ಇವರು?” ಎಂದು ಬಿಜೆಪಿ ಶಾಸಕರ ಮೇಲೆ ಡಿಸಿಎಂ ಮುಗಿಬಿದ್ದರು. ʼ ಈ ರೀತಿ ಯಾರ ಹೆಸರನ್ನು ಬೇಕಾದರೂ ನಾವು ಬಳಸಿಕೊಳ್ಳಬಹುದೇ” ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಹೇಳಿದಾಗ “ಇವರು (ಅಶ್ವತ್ಥ್ ನಾರಾಯಣ) ಮುಖ್ಯಮಂತ್ರಿಗಳ ಹೆಸರನ್ನು ಹೇಗೆ ಬಳಸಿಕೊಂಡರು? ಎಂದು ಕಟುವಾಗಿ ಮರುಪ್ರಶ್ನಿಸಿದರು.

ಶಿವಕುಮಾರ್ ಅವರ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಶಾಸಕರು ಗದ್ದಲ ಮಾಡಿದಾಗ ಕಲಾಪವನ್ನು ಮುಂದೂಡಲಾಯಿತು. “ಎಸ್ಐಟಿ ಎಂದರೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್ ಎಂದು ಶಾಸಕ ಸುರೇಶ್ ಕುಮಾರ್ ಹೇಳಿದ್ದಾರೆ, ಇದನ್ನು ಸಹ ಕಡತದಿಂದ ತೆಗೆದುಹಾಕಬೇಕು” ಎಂದು ಡಿಸಿಎಂ ಅವರು ಸ್ವೀಕರ್ ಗೆ ಮನವಿ ಮಾಡಿದರು.

ಇದನ್ನೂ ಓದಿ | D. S. Veeraiah: ಅರಸು ಟ್ರಕ್ ಟರ್ಮಿನಲ್ ಹಗರಣ;‌ ಡಿ.ಎಸ್‌.ವೀರಯ್ಯಗೆ ಜು.30ರವರೆಗೆ ನ್ಯಾಯಾಂಗ ಬಂಧನ

ಇದೇ ವೇಳೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ “ ನಾನು ಸ್ಪೀಕರ್ ಅವರ ಬಳಿ ಮನವಿ ಮಾಡುತ್ತಿದ್ದೇನೆ. ನನಗೂ ಈ ಸದನದ ಕಾನೂನು ಗೊತ್ತಿದೆ” ಎಂದಾಗ, “ನೀವು ಸಿಬಿಐ ಬಗ್ಗೆ ಹೇಳಿದ್ದೀರಲ್ಲ” ಎಂದು ವಿಪಕ್ಷ ನಾಯಕ ಅಶೋಕ್ ಹೇಳಿದರು. “ಮೊದಲು ಹೇಳಿದವರು ನೀವು ಮತ್ತು ದೇವೇಗೌಡರು” ಎಂದು ಶಿವಕುಮಾರ್ ಅವರು ತಿರುಗೇಟು ಕೊಟ್ಟರು.

Exit mobile version