ರಾಯಚೂರು: ಸರ್ಕಾರಿ ಶಾಲೆಯ 2ನೇ ತರಗತಿ ವಿದ್ಯಾರ್ಥಿಗಳಿಗೆ ಎಬಿಸಿಡಿ ಬಾರದ ಹಿನ್ನೆಲೆಯಲ್ಲಿ ಶಿಕ್ಷಕಿಯನ್ನು ಸಹಾಯಕ ಆಯುಕ್ತರು ತರಾಟೆಗೆ ತೆಗೆದುಕೊಂಡಿರುವುದು ಜಿಲ್ಲೆಯ ಲಿಂಗನಖಾನದೊಡ್ಡಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಲಿಂಗನಖಾನದೊಡ್ಡಿ ಸರ್ಕಾರಿ ಶಾಲೆಗೆ ಮಂಗಳವಾರ ದಿಢೀರನೆ ಸಹಾಯಕ ಆಯುಕ್ತ ರಜನಿಕಾಂತ್ ಚವ್ಹಾಣ್ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 2ನೇ ತರಗತಿ ಮಕ್ಕಳಿಗೆ ಇಂಗ್ಲಿಷ್ ವರ್ಣಮಾಲೆ ಹೇಳುವಂತೆ ಕೇಳಿದಾಗ ಮಕ್ಕಳು ತಡಬಡಾಯಿಸಿದ್ದರಿಂದ ಸಹಾಯಕ ಆಯುಕ್ತರು ಶಿಕ್ಷಕಿ ವಿರುದ್ಧ ಕೋಪಗೊಂಡಿದ್ದಾರೆ.
ಮಕ್ಕಳಿಗೆ ಕನಿಷ್ಠಪಕ್ಷ ಎಬಿಸಿಡಿ ಕಲಿಸಲು ಸಾಧ್ಯವಿಲ್ಲವೆ? ಇಲ್ಲಿ ಹೆಡ್ ಮಾಸ್ಟರ್ ಯಾರು? ಇವರಿಗಿನ್ನೂ ಎಬಿಸಿಡಿ ಬರಲ್ಲ. ಇಲ್ಲಿನ ಶಿಕ್ಷಕರು ಮಕ್ಕಳಿಗೆ ಏನು ಪಾಠ ಮಾಡುತ್ತಾರೆ ಎಂದು ಕಿಡಿಕಾರುತ್ತಾ, ಮಕ್ಕಳಿಗೆ ಒಂದು ವಾರದೊಳಗೆ ಎಬಿಸಿಡಿ ಕಲಿಸಬಹುದು. ನಾನು ಟೀಚರ್ ಆಗಿ ಬರಲೇ? ಎರಡು ದಿನದಲ್ಲಿ ಎಬಿಸಿಡಿ ಕಲಿಸುತ್ತೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮಕ್ಕಳಿಗೆ ನೀವು ಸ್ವಲ್ಪ ಕಾಳಜಿಯಿಂದ ಕಲಿಸಬೇಕು. ನೆಮ್ಮದಿಯ ವಾತಾವರಣವಿದೆ, ಒಳ್ಳೆಯ ಬಿಲ್ಡಿಂಗ್ ಸೇರಿ ಎಲ್ಲ ಅಗತ್ಯ ಸೌಲಭ್ಯವಿದ್ದರೂ ಏಕೆ ಸರಿಯಾಗಿ ಶಿಕ್ಷಣ ನೀಡಲು ಏನು ತೊಂದರೆ ನಿಮಗೆ? ಯಾವಾಗಲೂ ಸಮಸ್ಯೆ ಹುಡುಕಬಾರದು ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.
ಮಕ್ಕಳಿಗೆ ಎಬಿಸಿಡಿ ಬಾರದಿದ್ದರೂ ಆರಾಮವಾಗಿ ಇದ್ದೀರಿ, ಹೀಗಾದರೆ ಮಕ್ಕಳ ಭವಿಷ್ಯ ಏನಾಗಬೇಕು. ಈ ಮಕ್ಕಳಿಗೆ ಒಂದು ವಾರದಲ್ಲಿ ಎಬಿಸಿಡಿ ಬರಬೇಕು. ಅವರು ಪಟಪಟನೇ ಎಬಿಸಿಡಿ ಓದುವುದನ್ನು ವಿಡಿಯೊ ಮಾಡಿ ಕಳುಹಿಸಬೇಕು, ತಪ್ಪಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | KPTCL Exam Scam | ಬೆಳಗಾವಿಯಲ್ಲಿ ಪರೀಕ್ಷಾ ಅಕ್ರಮದಲ್ಲಿ ಪಾಲ್ಗೊಂಡ ಮೂವರು ಆರೋಪಿಗಳ ಬಂಧನ