Site icon Vistara News

ASI Death : ಲೋ ಬಿಪಿಯಿಂದಾಗಿ ಎಎಸ್‌ಐ ಮೃತ್ಯು; ಬೈಕ್‌ನಲ್ಲಿ ಸಾಗುತ್ತಿದ್ದಾಗಲೇ ಉರುಳಿಬಿದ್ದಿದ್ದರು

ASI death

#image_title

ಆನೇಕಲ್: ಕಡಿಮೆ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದ ಎಎಸ್‌ಐ (ASI Death) ಒಬ್ಬರು ಮೃತಪಟ್ಟಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜೈ ಶ್ರೀನಿವಾಸ್ (59) ಅವರೇ ಮೃತಪಟ್ಟವರು.

ಅವರು ಲೋ ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದು, ವಾರದ ಹಿಂದೆ ಬೈಕ್‌ನಲ್ಲಿ ಸಾಗುತ್ತಿದ್ದಾಗಲೇ ಕುಸಿದುಬಿದ್ದಿದ್ದರು. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಲೋ ಬಿಪಿ ಸಮಸ್ಯೆ ಉಂಟಾಗಿ ಅವರು ಬೈಕ್‌ನಿಂದ ಬಿದ್ದಿದ್ದರು.

ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಇತ್ತೀಚೆಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾ ಪ್ರಾಣ ಕಳೆದುಕೊಳ್ಳುತ್ತಿರುವುದು ಹೆಚ್ಚಾಗಿದೆ. ಹೆಚ್ಚಿನ ಮಂದಿ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಇತ್ತೀಚೆಗೆ ಅಧ್ಯಯನವೊಂದು ತಿಳಿಸಿತ್ತು.

ದಾಯಾದಿ ಕಲಹ ; ಕಾರು ನಿಲ್ಲಿಸುವ ಗಲಾಟೆ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯ

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಮನೆ ಮುಂದೆ ಕಾರು ನಿಲ್ಲಿಸುವ ವಿಚಾರದಲ್ಲಿ ಹುಟ್ಟಿಕೊಂಡ ಸಣ್ಣ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿದೆ. ದಾಯಾದಿಗಳ ನಡುವಿನ ಹಿಂದಿನ ವೈಷಮ್ಯ ಸಣ್ಣ ಕಿಡಿಯಾಗಿ, ಬೂದಿ ಮುಚ್ಚಿದ ಕೆಂಡವಾಗಿದ್ದದ್ದು ಈಗ ರಕ್ತಪಾತಕ್ಕೆ ಕಾರಣವಾಗಿದೆ (Murder case) ಎಂದು ಹೇಳಲಾಗಿದೆ.

ಹೊಸಕೋಟೆ ತಾಲೂಕಿನ ಮೇಡಿ ಮಲ್ಲಸಂದ್ರ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಇಸ್ಮಾಯಿಲ್ ಖಾನ್ ( 26 ) ಅವರನ್ನು ಕೊಂದು ಹಾಕಲಾಗಿದೆ. ಗ್ರಾಮದ ನಿವಾಸಿಗಳೇ ಆದ ಸೈಯದ್ ಹಿದಾಯತ್ ಶಾ, ಸೈಯದ್ ಅಜಿಮ್ ಶಾ, ಮತ್ತು ಸಯ್ಯದ್ ಅಖಿಲ್ ಶಾ ಅವರೇ ಚೂರಿಯಿಂದ ಇರಿದು ಕೊಲೆ ಮಾಡಿದವರು.

ಕೊಲೆಯಾದವರು ಮತ್ತು ಕೊಲೆ ಮಾಡಿದವರು ದಾಯಾದಿಗಳು. ಹಲವು ಸಮಯದಿಂದ ಇವರ ನಡುವೆ ಆಸ್ತಿ ವಿಚಾರ ಸೇರಿದಂತೆ ನಾನಾ ಕಾರಣಗಳಿಗಾಗಿ ಕಲಹ ನಡೆಯುತ್ತಲೇ ಇತ್ತು. ಈ ನಡುವೆ ಮನೆ ಮುಂದೆ ಕಳೆದ ರಾತ್ರಿ ಕಾರು ನಿಲ್ಲಿಸುವ ವಿಚಾರಕ್ಕೆ ಕಿರಿಕ್ ಶುರುವಾಗಿದೆ.

ಇಸ್ಮಾಯಿಲ್‌ ಖಾನ್‌ ಕಾರು ನಿಲ್ಲಿಸಲು ಹೋದಾಗ ಮಾತಿನ‌ ಚಕಮಕಿ ಆರಂಭವಾಗಿ ಅದು ವಿಕೋಪಕ್ಕೆ ತಿರುಗಿತು. ಅಂತಿಮವಾಗಿ ಡ್ರಾಗರ್ ನಿಂದ ಹಲ್ಲೆ ಮಾಡಲಾಯಿತು. ಎದೆ ಮತ್ತು ಮೂತ್ರಪಿಂಡ ಜಾಗಕ್ಕೆ ಇರಿದಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಸಾವು ಸಂಭವಿಸಿದೆ.

ಇಸ್ಮಾಯಿಲ್‌ ಸತ್ತು ಬೀಳುತ್ತಿದ್ದಂತೆಯೇ ಆತೋಪಿಗಳು ಎಸ್ಕೇಪ್‌ ಆಗಿದ್ದಾರೆ. ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ : Heart Attack: ಶಾಲೆಯಲ್ಲಿ ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಕುಸಿದು ಬಿದ್ದು ಶಿಕ್ಷಕ ಸಾವು

Exit mobile version