ಬೆಂಗಳೂರು: ಸ್ವತಂತ್ರ ನಂತರ ಯಾವುದಾದರೂ ಪ್ರಧಾನಮಂತ್ರಿಗಳಿಗೆ ಅಜಾತಶತ್ರು ಎನ್ನುವ ನಾಮಾಂಕಿತವಿದ್ದರೆ, ಅದು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ಅವರ ಕಂಚಿನ ಪ್ರತಿಮೆ ಹಾಗೂ ಉದ್ಯಾನವನದ ಉದ್ಘಾಟನೆಯನ್ನು ನೆರವೇರಿಸಿದ ಬಳಿಕ ಮಾತನಾಡಿದರು.
ಅಟಲ್ ಬಿಹಾರಿ ವಾಜಪೇಯಿ ಅವರು ಎಲ್ಲರನ್ನೂ ಪ್ರೀತಿಸುವಂತಹ, ಎಲ್ಲರನ್ನೂ ಆದರಿಸುವಂತಹ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದೇಶವನ್ನು ಮುನ್ನಡೆಸಿದ ಸಮರ್ಥ ಪ್ರಧಾನಿಗಳು. ಅಟಲ್ ಬಿಹಾರಿ ವಾಜಪೇಯಿ ಅವರ ಶಕೆ ಬೇರೆಲ್ಲರಿಗಿಂತ ವಿಭಿನ್ನವಾಗಿತ್ತು. ಸುಮಾರು 26 ಪಕ್ಷಗಳನ್ನೊಳಗೊಂಡ ಸಮ್ಮಿಶ್ರ ಸರ್ಕಾರವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದಾರೆ. ಅದಕ್ಕಿಂತ ಪೂರ್ವದಲ್ಲಿ ಅವರಿಗೆ ಸಂಖ್ಯಾಬಲ ಇಲ್ಲದ ಸಂದರ್ಭದಲ್ಲಿ ರಾಜೀನಾಮೆ ನೀಡಿ ಜನರಿಗೆ ಬಳಿಗೆ ಹೋಗಿರುವ ಏಕಮೇವ ನಾಯಕ ಅಟಲ್ ಬಿಹಾರಿ ವಾಜಪೇಯಿ.
ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳು ಆಗಿದ್ದು, ನವ ಭಾರತ ನಿರ್ಮಾಣಕ್ಕೆ ನಾಂದಿಯಾಗಿದೆ. ಪೋಖ್ರಾಣ್ ಅಣ್ವಸ್ತ್ರ ಪರೀಕ್ಷೆ ಮಾಡಿ ಆತ್ಮ ಬಲ ಹೆಚ್ಚಿಸಿದ್ದನ್ನು ನಾವು ಸ್ಮರಿಸಿಬೇಕು. ಶಿಕ್ಷಣದಲ್ಲಿ ಆಮೂಲಾಗ್ರವಾದ ಬದಲಾವಣೆಯನ್ನು ಅವರು ತಂದಿದ್ದಾರೆ. ಸರ್ವ ಶಿಕ್ಷಣ ಅಭಿಯಾನದ ಮೂಲಕ ಶಿಕ್ಷಣದ ಕ್ರಾಂತಿಯನ್ನು ಮಾಡಿದ್ದಾರೆ. ಅವರ ದಾರಿಯಲ್ಲಿ ನಮ್ಮ ರಾಜ್ಯ ಸರ್ಕಾರ ನಡೆಯುತ್ತಿದೆ. ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ವಿವೇಕ ಕಾರ್ಯಕ್ರಮದ ಮೂಲಕ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡುತ್ತಿದ್ದು, ಆದರ್ಶವಾದ ಶಾಲೆಗಳ ಕಟ್ಟುವುದಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರೇರಣೆ ಆಗಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಲೋಕಸಭಾ ಸದಸ್ಯರಾದ ಪಿ.ಸಿ ಮೋಹನ್, ತೇಜಸ್ವಿ ಸೂರ್ಯ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಲಯ ಆಯುಕ್ತ ಜಯರಾಮ್ ರಾಯಪುರ ಉಪಸ್ಥಿತರಿದ್ದರು.
ಇದನ್ನೂ ಓದಿ | ಬಿಜೆಪಿ ಅಧಿಕಾರಕ್ಕೇರಿದ್ದರ ಕ್ರೆಡಿಟ್ ವಾಜಪೇಯಿ, ಆಡ್ವಾಣಿ ಅವರಿಗೇ ಸಲ್ಲಬೇಕು ಎಂದ ನಿತಿನ್ ಗಡ್ಕರಿ