ಬೆಂಗಳೂರು: ಅಥ್ಲೀಟ್ ಬಿಂದುರಾಣಿಗೆ (Athlete BinduRani) ಕಳ್ಳಿ ಎಂದು ಚಪ್ಪಲಿ ತೋರಿಸಿ ಕೋಚ್ ಪತ್ನಿ ಅವಾಜ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಆರ್‌ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೋಚ್ ಯತೀಶ್ ಹಾಗೂ ಅವರ ಪತ್ನಿ ಶ್ವೇತಾ ವಿರುದ್ಧ ದೂರು ನೀಡಲಾಗಿದೆ.
ಜು.3ರಂದು ಕಂಠೀರವ ಕ್ರೀಡಾಂಗಣದಲ್ಲಿ (Kanteerava Stadium) ಅಥ್ಲೀಟ್ ಬಿಂದುರಾಣಿ (Athlete BinduRani) ಮೇಲೆ ಕೋಚ್ ಯತೀಶ್ ಎಂಬುವವರ ಪತ್ನಿ ಶ್ವೇತಾ ಅವಾಜ್ ಹಾಕಿದ್ದಾರೆ. ಬಿಂದುರಾಣಿ ಮೇಲೆ ಹಲ್ಲೆ ಮಾಡಿ ಚಪ್ಪಲಿ ತೋರಿಸಿ ಆಕ್ರೋಶ ಹೊರ ಹಾಕಿ, ಕಳ್ಳತನದ ಆರೋಪವನ್ನೂ ಮಾಡಿದ್ದರು. ಈ ವಿಡಿಯೊ ವೈರಲ್ (Video Viral) ಆಗಿತ್ತು.
ಶ್ವೇತಾ ವಿರುದ್ಧ ಬಿಂದುರಾಣಿ ಅವರು ಕಳ್ಳತನ ಆರೋಪ, ಚಪ್ಪಲಿ ತೋರಿಸಿದ್ದು, ಹಾಗೂ ನಿಂದಿಸಿ, ತಳ್ಳಾಟ ನಡೆಸಿದ್ದಾಗಿ ಆರೋಪಿಸಿದ್ದಾರೆ. ಕ್ರೀಡಾಂಗಣದಲ್ಲಿ ಘನತೆಗೆ ಧಕ್ಕೆ ತಂದ ಆರೋಪದಡಿ ದೂರು ನೀಡಿದ್ದು, ಈ ಸಂಬಂಧ ಐಪಿಸಿ ಸೆಕ್ಷನ್ 504, 506 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಏನಿದು ಘಟನೆ?
ಕೋಚ್ ಯತೀಶ್ ಎಂಬುವವರ ಪತ್ನಿ ಶ್ವೇತಾ ಜು.3ರಂದು ಏಕಾಏಕಿ ಕಂಠೀರವ ಕ್ರೀಡಾಂಗಣಕ್ಕೆ ಬಂದವರೇ ಬಿಂದುರಾಣಿಗೆ ಅಡ್ಡಗಟ್ಟಿ ಅವಾಜ್ ಹಾಕಿದ್ದರು. ಕರ್ನಾಟಕದ ಮರ್ಯಾದೆ ನಿಮ್ಮಿಂದಲೇ ಹಾಳಾಗುತ್ತಿದೆ. ನಿನಗೆ ಖೇಲ್ ರತ್ನ ಪ್ರಶಸ್ತಿ ಸಿಕ್ಕಿದೆಯಾ ಎಂದು ಮನಸೋ ಇಚ್ಛೆ ನಿಂದಿಸಿದ್ದರು. ಈ ಮಾತಿನ ಚಕಮಕಿ ವೇಳೆ ಯತೀಶ್ ಅವರ ಪತ್ನಿ ಶ್ವೇತಾ, ಬಿಂದುರಾಣಿಗೆ ಚಪ್ಪಲಿಯನ್ನು ತೋರಿಸಿದ್ದಾರೆ. ನೀನು ಕಳ್ಳಿ ಲಕ್ಷಾಂತರ ಮೌಲ್ಯದ ಕ್ರೀಡಾ ಸಾಮಗ್ರಿಯನ್ನು ಕದ್ದಿದ್ದೀಯ ಎಂದು ಬಿಂದುರಾಣಿ ಮೇಲೆ ಕಳ್ಳತನದ ಆರೋಪವನ್ನು ಮಾಡಿದ್ದರು.
ಅಲ್ಲದೆ ಇದೇ ವೇಳೆ ಕೈಯಲ್ಲಿ ಚಪ್ಪಲಿ ಹಿಡಿದು ಬಿಂದುರಾಣಿಗೆ ತೋರಿಸುತ್ತಾ ಖೇಲ್ ರತ್ನ ಅವಾರ್ಡ್ ಬಗ್ಗೆ ಕಿಡಿಕಾರಿದ್ದಾರೆ. ಇಷ್ಟಾದರೂ ಒಂದು ಮಾತನ್ನು ಆಡದೆ ಬಿಂದುರಾಣಿ ನಿಂತಿದ್ದರು. ಇವರಿಬ್ಬರ ನಡುವಿನ ಗಲಾಟೆಯನ್ನು ಸುತ್ತಮುತ್ತ ಇದ್ದವರು ವಿಡಿಯೊ ಮಾಡಿಕೊಂಡಿದ್ದರು.
ಅಂದಹಾಗೇ, ಬಿಂದುರಾಣಿ ಅವರಿಗೆ ಕೆಲ ದಿನಗಳ ಹಿಂದೆ ಟೆಡ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿತ್ತು. ಬೆಂಗಳೂರಲ್ಲಿ ಕಳೆದ ಶುಕ್ರವಾರ ನಡೆದಿದ್ದ ಈ ಶೋನಲ್ಲಿ ಬಿಂದುರಾಣಿ ಅವರು ಭಾಗಿಯಾಗಿದ್ದರು. ಶೋನವರು ಪೋಸ್ಟ್‌ವೊಂದನ್ನು ಕ್ರಿಯೇಟ್ ಮಾಡಿದ್ದರು. ಇದನ್ನು ಬಿಂದುರಾಣಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದೇ ಈಗ ಸಮಸ್ಯೆಯನ್ನು ತಂದ್ಡೊಡಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಅಥ್ಲೀಟ್ ಬಿಂದುರಾಣಿ, ಟೆಡ್ ಕಾರ್ಯಕ್ರಮದ ಪೋಸ್ಟರ್ ಅನ್ನು ನಾನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದೆ. ನನಗೆ ಖೇಲ್ ರತ್ನ ಅವಾರ್ಡ್ ಸಿಕ್ಕಿದೆ ಎಂದು ಸುಳ್ಳು ಮಾಹಿತಿ ಹಾಕಿರುವೆ ಎಂದು ಶ್ವೇತಾ ಅವರು ಆರೋಪಿಸುತ್ತಿದ್ದಾರೆ. ಆದರೆ ನಾನು ಪೋಸ್ಟರ್ನಲ್ಲಿ ಖೇಲ್ ರತ್ನ ಪುರಸ್ಕಾರ ಎಂದು ಹಾಕಿದ್ದೇನೆ. ಅಲ್ಲದೆ ಖೇಲ್ ರತ್ನ ಅವಾರ್ಡ್ ಹೆಸರಲ್ಲಿ 1 ಲಕ್ಷ ರೂ. ತೆಗೆದುಕೊಂಡಿದ್ದೀಯಾ ಎಂದು ಆರೋಪ ಮಾಡಿದ್ದಾರೆ. ಆ ರೀತಿ ನಾನೂ ಯಾವುದೇ ದುಡ್ಡು ತಗೆದುಕೊಂಡಿಲ್ಲ ಎಂದು ತಿಳಿಸಿದ್ದರು.
ಇದನ್ನೂ ಓದಿ: Road Accident : ಚಲಿಸುತ್ತಿದ್ದ ಬಸ್‌ನಿಂದ ಆಯತಪ್ಪಿ ಬಿದ್ದ ವಿದ್ಯಾರ್ಥಿನಿ; ಲಾರಿ ಹರಿದು ಶಾಲಾ ಶಿಕ್ಷಕಿ ಮೃತ್ಯು
ಇನ್ನು ಈ ಪ್ರಶಸ್ತಿ ಸಂಬಂಧ ಆ ದಿನ ಶುಕ್ರವಾರ ರಾತ್ರಿಯೇ ಕೋಚ್‌ಗಳಿರುವ ಗ್ರೂಪ್‌ನಲ್ಲಿ ಚರ್ಚೆ ಆಗಿ ಮಾತಿನ ಚಕಮಕಿ ನಡೆದಿತ್ತು. ನಾನು ಸ್ಪಷ್ಟೀಕರಣವನ್ನು ನೀಡಿದ್ದೆ. ಮಾತ್ರವಲ್ಲ ಕೋಚ್ ಯತೀಶ್ ಅವರು ಗ್ರೂಪ್‌ನಲ್ಲಿ ಪೋಸ್ಟ್‌ವೊಂದನ್ನು ಶೇರ್‌ಮಾಡಿ, ಅಥ್ಲೀಟ್ ಹೆಸರಲ್ಲಿ ದುಡ್ಡು ಮಾಡುತ್ತಿರುವೆ ಎಂದು ಆರೋಪಿಸಿದ್ದರು. ಈ ಕಾರಣಕ್ಕೆ ನನ್ನ ಪತಿ ಸೀನಿಯರ್ ಕೋಚ್‌ಗೆ ಕಾಲ್ ಮಾಡಿದಾಗ ಶ್ವೇತಾ ಏಕವಚನದಲ್ಲಿ ಮಾತನಾಡಿದರು ಎಂದು ಘಟನೆಯನ್ನು ಬಿಂದುರಾಣಿ ವಿವರಿಸಿದರು. ಸೋಮವಾರದಂದು (ಜು.3) ಸ್ಟೇಡಿಯಂನಲ್ಲಿ ಮಕ್ಕಳಿಗೆ ತರಬೇತಿ ನಡೆಸುವಾಗ ಬಂದ ಶ್ವೇತಾ, ಏಕಾಏಕಿ ಮೈ ಮೇಲೆ ಬಿದ್ದು ಗಲಾಟೆ ಮಾಡಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ