Site icon Vistara News

Karnataka Politics: ವಿಪಕ್ಷ ಮುಖಂಡರ ಮೇಲೆ ಎಲ್ಲೆ ಮೀರಿದ ದೌರ್ಜನ್ಯ; ಕಾಂಗ್ರೆಸ್‌ ಸರ್ಕಾರದ ವಿರುದ್ಧ ಎಚ್‌ಡಿಕೆ ಆಕ್ರೋಶ

Ex CM HD Kumaraswamy

ಬೆಂಗಳೂರು: ಚಿಂತಾಮಣಿ ವಿಧಾನಸಭೆ ಕ್ಷೇತ್ರದ ಜೆಡಿಎಸ್‌ ಮುಖಂಡ, ನಗರಸಭೆ ಸದಸ್ಯ ಅಗ್ರಹಾರ ಮುರಳಿ ಅವರ ಮೇಲೆ ದುಷ್ಕರ್ಮಿಗಳು ಮಚ್ಚು, ಲಾಂಗ್‌ಗಳಿಂದ ಪೈಶಾಚಿಕ ದಾಳಿ ನಡೆಸಿರುವ ಘಟನೆ ಖಂಡನೀಯ. ಈ ಕೃತ್ಯ ಎಸಗಿದ ದುರುಳರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು ಹಾಗೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ (Karnataka Politics) ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿಪಕ್ಷಗಳ ಮುಖಂಡರು, ಕಾರ್ಯಕರ್ತರ ಮೇಲೆ ದೌರ್ಜನ್ಯ ಎಲ್ಲೆ ಮೀರಿದೆ. ಗೃಹ ಇಲಾಖೆ, ಪೊಲೀಸ್ ವ್ಯವಸ್ಥೆ ಆಡಳಿತ ಪಕ್ಷದ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಅಧಿಕಾರಿಗಳು ಆಡಳಿತ ಪಕ್ಷ ನಾಯಕರ ಕೈಗೊಂಬೆಗಳು ಆಗಿರುವ ಪರಿಣಾಮವೇ ಇಂಥ ಘಟನೆಗಳಿಗೆ ದಾರಿ ಆಗುತ್ತಿದೆ. ರಾಜ್ಯದಲ್ಲಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಪೂರ್ಣವಾಗಿ ಕುಸಿದು ಬಿದ್ದಿದೆ. ಮೊದಲು ಇಂತಹ ಪ್ರಕರಣಗಳು ನಡೆಯುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಹಾಸನದಲ್ಲಿ ಜೆಡಿಎಸ್‌ ಮುಖಂಡರಾದ ಕೃಷ್ಣೇಗೌಡರನ್ನು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಹೊಳೆನರಸೀಪುರದಲ್ಲಿ ನಮ್ಮ ಪಕ್ಷದ ಮುಖಂಡರಾದ ಅಶ್ವತ್ಥ್ ಅವರ ಮೇಲೆ ದಾಳಿ ನಡೆಡಿತ್ತು. ಈಗ ಚಿಂತಾಮಣಿಯಲ್ಲಿ ಅಂಥದ್ದೇ ಘಟನೆ ನಡೆದಿರುವುದು ಪ್ರತಿಪಕ್ಷಗಳನ್ನು ಹೆದರಿಸಿ ಬೆದರಿಸುವ ದುಷ್ಟ ಹುನ್ನಾರವಲ್ಲದೆ ಮತ್ತೇನಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ | Fire Accident : ಬೆಂಗಳೂರಲ್ಲಿ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್; 10 ಜನರ ಪ್ರಾಣ ಉಳಿಸಿತು ಊಟದ ಟೈಂ!

ಅದರಲ್ಲೂ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ವ್ಯವಸ್ಥಿತವಾಗಿ ಗುರಿ ಮಾಡಲಾಗುತ್ತಿದೆ. ಇದು ಸರಿ ಅಲ್ಲ, ಸಹಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಸದಾ ಶಾಂತಿ ನೆಲೆಸಿರಬೇಕು ಎನ್ನುವುದು ನಮ್ಮ ಪಕ್ಷದ ಆಶಯ. ಸರ್ಕಾರ ಮತ್ತು ಗೃಹ ಸಚಿವರು ಕೂಡಲೇ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿದರೆ ಪಕ್ಷದ ವತಿಯಿಂದ ಉಗ್ರವಾದ ಹೋರಾಟಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ.

ಆರೋಪಿ ಯಾರೇ ಆದರೂ ಶಿಕ್ಷೆ ಆಗಬೇಕು: ಸಚಿವ ಡಾ. ಎಂ.ಸಿ. ಸುಧಾಕರ್

ಚಿಕ್ಕಬಳ್ಳಾಪುರ‌: ಯಾರೇ ಆಗಲಿ ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಎಷ್ಟೇ ವೈಯಕ್ತಿಕ ದ್ವೇಷವಿದ್ದರೂ ಪೊಲೀಸ್ ಸ್ಟೇಷನ್‌ನಲ್ಲೇ ಬಗೆಹರಿಸಿಕೊಳ್ಳಬೇಕು. ಬೀದಿ ಕಾಳಗ ಮಾಡಿ, ಪ್ರಾಣಕ್ಕೆ ಧಕ್ಕೆ ತರುವುದು ಖಂಡನೀಯ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌ ತಿಳಿಸಿದ್ದಾರೆ.

ಚಿಂತಾಮಣಿ‌ ನಗರಸಭೆ ಸದಸ್ಯನ ಮೇಲೆ ಹಲ್ಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ನಗರಸಭೆ ಸದಸ್ಯನ ಕೊಲೆಗೆ ಯತ್ನಿಸಿದವರು ಯಾರೇ ಆದರೂ ಶಿಕ್ಷೆ ಆಗಬೇಕು. ಕೊಲೆ ಯತ್ನ ಪ್ರಕರಣದಲ್ಲಿ ಯಾರೇ ಬಾಗಿಯಾಗಿದ್ದರೂ ರಾಜೀ ಇಲ್ಲ. ನನ್ನ ಬೆಂಬಲಿಗರೇ ಆಗಲಿ ಕಾನೂನು ರೀತಿ ಕ್ರಮಕ್ಕೆ ಆದೇಶಿದ್ದೇನೆ. ನನ್ನ ಜತೆ ಗುರ್ತಿಸಿಕೊಂಡಿದ್ದರೂ ಮುಲಾಜಿಲ್ಲದೆ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ | IT Raid : ಗುತ್ತಿಗೆದಾರರ ಸಂಘ ಸರ್ಕಾರದ ಕಮಿಷನ್ ಕಲೆಕ್ಷನ್‌ ಸೆಂಟರ್‌ ಎಂದ ಬೊಮ್ಮಾಯಿ

ಕಾನೂನು ರೀತಿ ನಡೆದುಕೊಂಡಿದ್ದರೆ ನಾನು ಸಪೋರ್ಟ್ ಮಾಡುತ್ತಿದ್ದೆ. ಕಾನೂನು ವಿರುದ್ಧ ನಡೆದುಕೊಂಡಾಗ ನನ್ನ ಸಪೋರ್ಟ್ ಇಲ್ಲ ಎಂದು ಸಚಿವರು ತಿಳಿಸಿದ್ದಾರೆ.

Exit mobile version