ಕಂಪ್ಲಿ: ಚುನಾವಣಾ ಪ್ರಚಾರಕ್ಕೆ (Election Campaign) ತೆರಳಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಈ ಮೂಲಕ ಇದಕ್ಕೆ ಕುಮ್ಮಕ್ಕು ನೀಡಿ ಜೆ.ಎನ್.ಗಣೇಶ್ ಕ್ಷೇತ್ರದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ್ ಆರೋಪಿಸಿದರು.
ಪಟ್ಟಣದ ತುಂಗಾ ಭವನದಲ್ಲಿ ಸೋಮವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ: Karnataka Election : ನಾಳೆಯಿಂದ 2 ದಿನ ಮತ್ತೆ ಮೋದಿ ಮೋಡಿ, 62 ಕ್ಷೇತ್ರಗಳಿಗೆ ನಮೋ ಟಾರ್ಗೆಟ್
ತಂತ್ರಜ್ಞಾನವನ್ನು ಬಳಸಿಕೊಂಡು ಬಿಜೆಪಿ ಪಕ್ಷದಿಂದ ಪ್ರಚಾರ ನಡೆಸಲಾಗುತ್ತಿದೆ. ಕ್ಷೇತ್ರದಲ್ಲಿನ ಮತದಾರರಿಗೆ ತಮ್ಮ ಮತದಾನ ನಡೆಸುವ ಬೂತ್, ದಿನಾಂಕ, ಸಮಯದ ಕುರಿತು ಮಾಹಿತಿ ನೀಡುವಂತಹ ಸ್ಲಿಪ್ ವಿತರಿಸುವ ಮೂಲಕ ಪ್ರಚಾರ ನಡೆಸಲಾಗುತ್ತಿದೆ. ಇದೇ ಮಾದರಿಯಲ್ಲಿ ಬಳ್ಳಾರಿಯಲ್ಲಿ ಎಲ್ಲ ಪಕ್ಷದವರು ಪ್ರಚಾರ ನಡೆಸುತ್ತಿದ್ದಾರೆ.
ಸೋಮವಾರ ಕಂಪ್ಲಿ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಪ್ರಚಾರಕ್ಕೆ ತೆರಳಿದ್ದ ನಮ್ಮ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹಲ್ಲೆ ನಡೆಸಿ, ಅವಾಚ್ಯ ಪದಗಳಿಂದ ನಿಂದಿಸಿ ಜನ ಸಾಮಾನ್ಯರಿಗೆ ತಪ್ಪು ಸಂದೇಶ ರವಾನಿಸುವ ಕೆಲಸ ಮಾಡಿದ್ದಾರೆ. ಕ್ಷೇತ್ರದಾದ್ಯಂತ ಜನರು ಬಿಜೆಪಿ ಗೆ ನೀಡುತ್ತಿರುವಂತಹ ಬೆಂಬಲವನ್ನು ಕಂಡು ಸೋಲಿನ ಭೀತಿಯಿಂದಾಗಿ ಜೆ.ಎನ್.ಗಣೇಶ್ ಈ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿನ ಶಾಂತಿಯನ್ನು ಕದಡಿ ಚುನಾವಣೆಯನ್ನು ಮುಂದೂಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಗ್ಯಾರಂಟಿ ಹೆಸರಿನಲ್ಲಿ ಮನೆ ಮನೆಗಳಿಗೆ ಕಾರ್ಡ್ ವಿತರಣೆ
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಆರ್.ಹನುಮಂತ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ನವರು ಗ್ಯಾರಂಟಿ ಎಂಬ ಹೆಸರಿನಲ್ಲಿ ಮನೆ ಮನೆಗಳಿಗೆ ಕಾರ್ಡ್ ವಿತರಿಸಿ ಮತದಾರರ ಮಾಹಿತಿಯನ್ನು ತೆಗೆದುಕೊಂಡಿದ್ದಾರೆ. ಅಲ್ಲದೇ ತಾಲೂಕಿನ ಸುಗ್ಗೇನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು ಮತದಾರರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪಡೆದು ಗಲಾಟೆಗಳು ನಡೆದಂತಹ ಘಟನೆಗಳು ಸಂಭವಿಸಿವೆ. ಇದಕ್ಕೆ ಗಣೇಶ್ ಅವರ ಪ್ರತಿಕ್ರಿಯೆ ಏನು ಎಂದು ಪ್ರಶ್ನಿಸಿದರು.
ಇದನ್ನೂ ಓದಿ: BJP Manifesto: ‘ರಾಜ್ಯ ರಾಜಧಾನಿ ಪ್ರದೇಶ’ ರಚನೆ ಕುರಿತು ಬಿಜೆಪಿ ಭರವಸೆ; ಅಷ್ಟಕ್ಕೂ ಏನಿದು?
ಯಾವುದೇ ಪಕ್ಷದ ಕಾರ್ಯಕರ್ತರೇ ಆಗಲಿ ಮುಖಂಡರೇ ಆಗಲಿ ತಪ್ಪು ಮಾಡುತ್ತಿದ್ದಾರೆಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬೇಕೇ ಹೊರೆತು ನೈತಿಕ ಪೊಲೀಸ್ ಗಿರಿ ತೋರಿಸಬಾರದೆಂದು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪಿ.ಬ್ರಹ್ಮಯ್ಯ, ಜಿ.ಸುಧಾಕರ್, ಬಿ.ಸಿದ್ದಪ್ಪ, ಪುರುಷೋತ್ತಮ, ವಿ.ಎಲ್.ಬಾಬು, ಸುದರ್ಶನ್ ರೆಡ್ಡಿ, ರಾಮಾಂಜಿನೇಯಲು, ಕೊಡಿದಲರಾಜು, ಮಧಿರೇ ಕುಮಾರಸ್ವಾಮಿ ಸೇರಿದಂತೆ ಇತರರಿದ್ದರು.