ಮುಂಬೈ: ಮಹಾರಾಷ್ಟ್ರದ ಎಂಇಎಸ್, ಎನ್‌ಸಿಪಿ, ಶಿವಸೇನೆ-ಬಿಜೆಪಿ ಮೈತ್ರಿ ಸರ್ಕಾರವು ಕರ್ನಾಟಕದ ಗಡಿಯಲ್ಲಿ ಉಪಟಳ (Border Dispute) ಮಾಡುವ ಜತೆಗೆ ಸಂಸತ್ತಿನಲ್ಲೂ ಶಿವಸೇನೆ ಸಂಸದ ಅರವಿಂದ ಸಾವಂತ್ ಪಿತೂರಿ ನಡೆಸಿದ್ದಾರೆ. ಲೋಕಸಭೆಯ ಶೂನ್ಯವೇಳೆಯಲ್ಲಿ ಗಡಿ ಬಿಕ್ಕಟ್ಟಿನ ಕುರಿತು ಪ್ರಸ್ತಾಪಿಸಿದ ಸಾವಂತ್, ಕರ್ನಾಟಕದ ವಿರುದ್ಧ ಇಲ್ಲಸಲ್ಲದ ದೂರು ನೀಡಿದ್ದಾರೆ.
“ಕಳೆದ ವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಸಭೆ ನಡೆಸಿದರೂ ಗಡಿಯಲ್ಲಿ ಗಲಾಟೆ ಜೋರಾಗಿದೆ. ಪ್ರತಿಬಾರಿಯಂತೆ ಈ ಸಲವೂ ಬೆಳಗಾವಿ ಅಧಿವೇಶನದ ವೇಳೆ ಎಂಇಎಸ್ ಪ್ರತಿಭಟನೆ ನಡೆಸುತ್ತದೆ. ಆದರೆ, ಪ್ರತಿಭಟನೆಕಾರರ ಮೇಲೆ ಕರ್ನಾಟಕ ಸರ್ಕಾರ ದೌರ್ಜನ್ಯ ಎಸಗಿದೆ” ಎಂದು ಹೇಳಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿ ಬಿಕ್ಕಟ್ಟನ್ನು ಮೂರನೇ ಬಾರಿ ಲೋಕಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.
“ಪ್ರತಿಭಟನಾಕಾರರ ಪೆಂಡಾಲ್‌ಗೆ ಹಾನಿ ಮಾಡುವ ಜತೆಗೆ ಪ್ರತಿಭಟನಾರರನ್ನು ಬಂಧಿಸಲಾಗಿದೆ. ಮಹಾರಾಷ್ಟ್ರ ಶಾಸಕರಿಗೆ ಥಳಿಸುವುದಲ್ಲದೆ ಅವರನ್ನು ಬಂಧಿಸಲಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸಂವಿಧಾನಕ್ಕೆ ಗೌರವ ಕೊಡುತ್ತಿಲ್ಲ. ಮಹಾರಾಷ್ಟ್ರ ನಾಯಕರು ಕರ್ನಾಟಕವನ್ನು ಪ್ರವೇಶಿಸಲು ಬಿಡುತ್ತಿಲ್ಲ. ಹಾಗಾಗಿ, ಈ ವಿಷಯವನ್ನು ಕೇಂದ್ರ ಗೃಹ ಸಚಿವರು ಗಂಭೀರವಾಗಿ ಪರಿಗಣಿಸಬೇಕು” ಎಂದು ಇಲ್ಲಸಲ್ಲದ ಆರೋಪ ಮಾಡಿದ್ದಾರೆ.
ಇದನ್ನೂ ಓದಿ | Border Dispute | ಕರ್ನಾಟಕ ಪಾಕಿಸ್ತಾನದಲ್ಲಿ ಇಲ್ಲ ನಿಜ, ಆದರೆ, ಮರಾಠಿಗರ ಹಕ್ಕುಗಳ ರಕ್ಷಣೆಗೆ ಬದ್ಧ: ಫಡ್ನವಿಸ್ ಅಸಂಬದ್ಧ ಹೇಳಿಕೆ