ಬಾಗಲಕೋಟೆ: ಮುಖಕ್ಕೆ ಮಾಸ್ಕ್ ಹಾಕಿ ಬಂದ ಅಪರಿಚಿತರು ರೈತ ಮುಖಂಡ ಯಲ್ಲಪ್ಪ ಹೆಗಡೆ ಮೇಲೆ ಮಾರಣಾಂತಿಕ ಹಲ್ಲೆ (Attack on farmer) ನಡೆಸಿದ್ದಾರೆ. ಬಾಗಲಕೋಟೆಯ ಮುಧೋಳ ತಾಲೂಕಿನ ಇಂಗಳಗಿ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ.
ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ರೈತ ಮುಖಂಡ ಯಲ್ಲಪ್ಪ ಹೆಗಡೆ ಬೀಳಗಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಹೀಗಾಗಿ ಬೀಳಗಿ ಪಟ್ಟಣಕ್ಕೆ ಹೋಗಬೇಕಾದ ಸಮಯದಲ್ಲಿ ಬಂದ ಕಿಡಿಗೇಡಿಗಳು ಏಕಾಏಕಿ ದಾಳಿ ನಡೆಸಿ, ಮನಬಂದಂತೆ ಥಳಿಸಿದ್ದಾರೆ. ಯಲ್ಲಪ್ಪ ಹೆಗಡೆ ತಲೆಗೆ ಬಲವಾದ ಪೆಟ್ಟು ಬಿದ್ದು ಒದ್ದಾಡುತ್ತಿದ್ದವರನ್ನು ಸ್ಥಳೀಯರು ಮುಧೋಳದ ಖಾಸಗಿ ಆಸ್ಪತ್ರೆ ದಾಖಲು ಮಾಡಿದ್ದಾರೆ.
ರಾಡ್‌ನಿಂದ ಹಲ್ಲೆ
ಹಲ್ಲೆ ನಡೆಯುವಾಗ ಜತೆಯಲ್ಲಿದ್ದ ಯಲ್ಲಪ್ಪನ ಸ್ನೇಹಿತ ಹನುಮಂತ ಶಿಂಧೆ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಭಿಕ್ಷಾಟನೆ ಅಭಿಯಾನ ಮಾಡಲು ಬೀಳಗಿಗೆ ಹೊರಟಿದ್ದವು. ಇಂಗಳಗಿ ಕ್ರಾಸ್ ಬಳಿ ಕಾರಲ್ಲಿ ಹೋಗುವಾಗ ಬುಲೆರೋ ಕಾರಲ್ಲಿ ಬಂದ ದುಷ್ಕರ್ಮಿಗಳು, ಕೈಯಲ್ಲಿ ರಾಡ್ ಹಿಡಿದು ಮೊದಲು ಕಾರಿನ ಗ್ಲಾಸ್ ಪುಡಿ ಪುಡಿ ಮಾಡಿದರು. ಬಳಿಕ ಯಲ್ಲಪ್ಪ ಹೆಗಡೆ ಮೇಲೆ ಹಲ್ಲೆ ಮಾಡಿದರು.
ಕಾರಿನಲ್ಲಿದ್ದ ನಾವುಗಳು ಅಲ್ಲಿಂದ ತಪ್ಪಿಸಿಕೊಂಡೆವು. ನನ್ನನ್ನೂ ಹಿಂಬಾಲಿಸಿ ಅಪರಿಚಿತರು ಬೆನ್ನಟ್ಟಿದರು. ಈ ವೇಳೆ ನಾನು 200 ಮೀಟರ್‌ವರೆಗೂ ಓಡಿ ಬಂದೆ. ಈ ವೇಳೆ ಅಲ್ಲೊಂದು ಬಸ್ ಬಂದಾಗ, ಅಪರಿಚಿತರು ಸ್ಥಳದಿಂದ ಕಾಲ್ಕಿತ್ತರು. ಐದಾರು ಮಂದಿ ಮಂಕಿ ಕ್ಯಾಪ್ ಹಾಕಿಕೊಂಡು ಬಂದಿದ್ದರು ಎಂದು ವಿವರಿಸಿದರು.
ಇವತ್ತು ಬೀಳಗಿಯಲ್ಲಿ ನಿರಾಣಿ ವಿರುದ್ಧ ನಮ್ಮ ಪ್ರತಿಭಟನೆ ಇತ್ತು. ಇದನ್ನೆಲ್ಲಾ ನೋಡಿದರೆ ಈ ಘಟನೆ ಹಿಂದೆ ಮುರುಗೇಶ್ ನಿರಾಣಿ ಅವರ ಕೈವಾಡ ಇರುವುದು ಸ್ಪಷ್ಟವಾಗಿದೆ ಎಂದು ನೇರವಾಗಿ ನಿರಾಣಿ ಕಡೆಯವರೆ ಹಲ್ಲೆ ಮಾಡಿದ್ದಾಗಿ ಆರೋಪಿಸಿದರು.
ಇದನ್ನೂ ಓದಿ: Electric Shock : ವಾಷಿಂಗ್ ಮೆಷಿನ್‌ಗೆ ಬಟ್ಟೆ ಹಾಕುವಾಗ ಕರೆಂಟ್ ಶಾಕ್; ಯುವಕ ಸಾವು!
ಭಿಕ್ಷಾಟಣೆ ಅಭಿಯಾನ
ಚುನಾವಣೆ ವೇಳೆ ಮುರುಗೇಶ್ ನಿರಾಣಿ ವಿರುದ್ಧ ರೈತ ಮುಖಂಡ ಯಲ್ಲಪ್ಪ ಹೆಗಡೆ ಆರೋಪ ಮಾಡಿದ್ದರು. ಇದಕ್ಕಾಗಿ ನಿರಾಣಿ ಮಾನನಷ್ಟ ಮೊಕದ್ದಮೆ ಹೂಡಿ ಸುಮಾರು 5 ಕೋಟಿ ರೂ. ಮಾನಹಾನಿ ಪರಿಹಾರ ಕೇಳಿದ್ದರು. ತಮ್ಮ ವಕೀಲರ ಮೂಲಕ ಯಲ್ಲಪ್ಪ ಹೆಗಡೆಗೆ ನೋಟಿಸ್ ಕಳುಹಿಸಿದ್ದರು. ಹೀಗಾಗಿ ಮುರುಗೇಶ್ ನಿರಾಣಿಗೆ ಭಿಕ್ಷಾಟಣೆ ಮೂಲಕ ಹಣ ಸಂಗ್ರಹಿಸಿ ನೀಡಲು ಯಲ್ಲಪ್ಪ ಹೆಗಡೆ ಉದ್ದೇಶಿಸಿದ್ದರು. ಆಗಸ್ಟ್ 28ರ ಬೆಳಗ್ಗೆ 11 ಗಂಟೆ ಸುಮಾರಿಗೆ ಬೀಳಗಿಯ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಭಿಕ್ಷಾಟಣೆ ಅಭಿಯಾನ ಕೈಗೊಂಡಿದ್ದರು. ಬೀಳಗಿಗೆ ಬರುವಾಗ ಮಾರ್ಗ ಮಧ್ಯೆ ಕಿಡಿಗೇಡಿಗಳು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿ ಆಗಿದ್ದಾರೆ.
ಮುಧೋಳದಿಂದ ಬಾಗಲಕೋಟೆಗೆ ಶಿಫ್ಟ್
ರೈತ ಮುಖಂಡ ಯಲ್ಲಪ್ಪ ಹೆಗಡೆ ಮೇಲೆ ಅಪರಿಚಿತರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಗೆ ರವಾನೆ ಮಾಡಲಾಗಿದೆ. ಮುಧೋಳದಿಂದ ಆಂಬ್ಯುಲೆನ್ಸ್ ಮೂಲಕ ಬಾಗಲಕೋಟೆ ಕಡೆಗೆ ಸ್ಥಳಾಂತರ ಮಾಡಲಾಗುತ್ತಿದೆ.
ಹಲ್ಲೆ ಖಂಡಿಸಿ ಪ್ರತಿಭಟನೆ
ಇತ್ತ ರೈತ ಮುಖಂಡ ಯಲ್ಲಪ್ಪ ಹೆಗಡೆ ಮೇಲಿನ ಹಲ್ಲೆ ಖಂಡಿಸಿ ಇತರೆ ರೈತರು ಪ್ರತಿಭಟನೆ ನಡೆಸಿದ್ದಾರೆ. ಮುಧೋಳದ ರನ್ನ ಸರ್ಕಲ್‌ನಲ್ಲಿ ರೈತರು ಹಲ್ಲೆಯನ್ನು ಖಂಡಿಸಿದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ