ಬೆಂಗಳೂರು: ಕುಡಿಯಲು ಹಣ ಕೊಡದಿರುವುದಕ್ಕೆ ಕುಡುಕ ಪತಿಯೊಬ್ಬ ಪತ್ನಿಗೆ ಚಾಕುವಿನಿಂದ ಇರಿದಿರುವ (Domestic violence) ಘಟನೆ ನಡೆದಿದೆ. ಜಯಶ್ರೀ (33) ಎಂಬುವವರಿಗೆ ಪತಿ ನಾಗರಾಜ (45) ಚಾಕು ಇರಿದಿದ್ದಾನೆ.
ಜಕ್ಕೂರು ಸಮೀಪದ ಮುನೇಶ್ವರ ಬೀದಿಯಲ್ಲಿ ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 15 ವರ್ಷದ ಹಿಂದೆ ವಿವಾಹವಾಗಿದ್ದ ಈ ದಂಪತಿ ಗುಲ್ಬರ್ಗ ಮೂಲದವರಾಗಿದ್ದು, ಬೆಂಗಳೂರಿನ ಅಮೃತಹಳ್ಳಿಯಲ್ಲಿ ಆರೋಪಿ ನಾಗರಾಜ್ ಕೂಲಿ ಕೆಲಸ ಮಾಡಿಕೊಂಡಿದ್ದರೆ, ಜಯಶ್ರೀ ಖಾಸಗಿ ಶಾಲೆಯಲ್ಲಿ ಕೆಲಸ ಮಾಡಿಕೊಂಡಿದ್ದರು.
ನಾಗರಾಜ್ ವ್ಯಸನಿ ಆಗಿದ್ದು ಪದೇಪದೆ ಹಣ ನೀಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದನಂತೆ. ಹಣ ನೀಡುವ ವಿಚಾರಕ್ಕೆ ಮೊನ್ನೆ ಗಲಾಟೆಯಾಗಿ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಗಾಯಾಳು ಜಯಶ್ರೀಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿ ನಾಗರಾಜ್ ಅನ್ನು ಬಂಧಿಸಿದ್ದಾರೆ.