Site icon Vistara News

Kidnapping Attempt: ಬೆಂಗಳೂರಿನಲ್ಲಿ ಯುವತಿಯ ಕಿಡ್ನ್ಯಾಪ್‌ಗೆ ಯತ್ನ; ಸಂಬಂಧಿಕನಿಂದಲೇ ಕೃತ್ಯ

Attempt to kidnap at Bangalore

#image_title

ಬೆಂಗಳೂರು: ನಗರದಲ್ಲಿ ಯುವತಿಯ ಕಿಡ್ನ್ಯಾಪ್‌ಗೆ ಕಿಡಿಗೇಡಿಗಳು ಯತ್ನಿಸಿರುವ ಘಟನೆ (Kidnapping Attempt) ಬುಧವಾರ ನಡೆದಿದ್ದು, ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್) ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಯುವತಿಯನ್ನು ರಕ್ಷಣೆ ಮಾಡಿ, ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಘಟನೆ ನಡೆದಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಕಿಡ್ನ್ಯಾಪ್‌ ಯತ್ನ ನಡೆದಿದೆ. ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಯುವತಿಯನ್ನು ವಿಧಾನಸೌಧ ಮೆಟ್ರೋ ನಿಲ್ದಾಣದ ಬಳಿ ಇಬ್ಬರು ಯುವಕರು ಕಿಡ್ನ್ಯಾಪ್‌ ಮಾಡಲು ಯತ್ನಿಸಿದ್ದಾರೆ. ಏಕಾಏಕಿ ಎಳೆದು ಕಾರಿನಲ್ಲಿ ಕೂರಿಸಿದಾಗ ಯುವತಿ ರಕ್ಷಿಸುವಂತೆ ಕೂಗಿಕೊಂಡಿದ್ದಾಳೆ. ಈ ವೇಳೆ ಅಲ್ಲೇ ಇದ್ದ ಕೆಎಸ್‌ಐಎಸ್‌ಎಫ್ ತಂಡ ಧಾವಿಸಿ, ಯುವತಿಯನ್ನು ರಕ್ಷಿಸಿದೆ. ನಂತರ ಇಬ್ಬರು ಆರೋಪಿಗಳನ್ನು ವಿಧಾನಸೌಧ ಪೊಲೀಸರಿಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ | Lokayukta Raid: 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ; ಪಿಎಸ್‌ಐ ಸೇರಿ ಮೂವರು ಲೋಕಾಯುಕ್ತ ಬಲೆಗೆ

ಕೆಎಸ್ಐಎಸ್‌ಎಫ್ ಪಿಎಸ್‌ಐ ನಾರಾಯಣ್, ಪ್ರಶಾಂತ್ ನಾಗರಾಜ್ ಹಾಗೂ ಇತರ ಸಿಬ್ಬಂದಿಯಿಂದ ಯುವತಿಯ ರಕ್ಷಣೆ ಮಾಡಲಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಯುವತಿಯ ಕಿಡ್ನ್ಯಾಪ್‌ಗೆ ಯತ್ನಿಸಿದ ಆರೋಪಿಗಳು

ಸಂಬಂಧಿಕನಿಂದಲೇ ಕಿಡ್ನ್ಯಾಪ್‌ಗೆ ಯತ್ನ

ಕಳೆದ ಕೆಲ ತಿಂಗಳ ಹಿಂದೆ ಯುವತಿಯ ತಂದೆ ತೀರಿಕೊಂಡಿದ್ದರು. ತಂದೆಯ ಎಫ್‌ಡಿಎ ಕೆಲಸ ಮಗಳಿಗೆ ಬಂದಿತ್ತು. ಈ ವಿಚಾರಕ್ಕೆ ಯುವತಿಯ ಮೇಲೆ ಸಂಬಂಧಿ (ಯುವತಿ ತಂದೆಯ 2ನೇ ಪತ್ನಿಯ ಸಹೋದರ) ಕಣ್ಣಿಟ್ಟಿದ್ದ ಎನ್ನಲಾಗಿದೆ. ಈ ಹಿಂದೆ ಎಫ್‌ಡಿಎ ಕೆಲಸ ತನ್ನ ಅಕ್ಕನಿಗೆ ಬರಬೇಕಿತ್ತು ಎಂದು ಆರೋಪಿ ಕ್ಯಾತೆ ತೆಗೆದಿದ್ದ. ಅಲ್ಲದೇ ಯುವತಿಯನ್ನು ಮದುವೆಯಾಗಲು ಪ್ಲಾನ್ ಮಾಡಿದ್ದ. ಆದರೆ, ಯುವತಿಗೆ ಆರೋಪಿ ಇಷ್ಟ ಇರಲಿಲ್ಲ. ಹೀಗಾಗಿ ಬಲವಂತವಾಗಿ ಯುವತಿಯನ್ನು ಕಿಡ್ನ್ಯಾಪ್‌ ಮಾಡಲು ಮುಂದಾಗಿದ್ದ. ಆದರೆ, ಅದೃಷ್ಟವಶಾತ್‌ ಯುವತಿಯನ್ನು ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

Exit mobile version