ಬೆಳಗಾವಿ: ಡಿವೋರ್ಸ್ ಆಗಿದ್ದ ಪತ್ನಿಯನ್ನು ಕೊಲ್ಲಲು (Attempt to murder) ಸಂಚು ರೂಪಿಸಿದವನು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಸಚಿನ್ ಬಾಬಾಸಾಹೇಬ್ ರಾಯಮಾನೆ ಬಂಧಿತ ಆರೋಪಿಯಾಗಿದ್ದಾನೆ.
ಪತ್ನಿಗೆ ಬೇರೆಯವರ ಜತೆಗೆ ಅಕ್ರಮ ಸಂಬಂಧ ಇದೆ ಎಂದು ಸಚಿನ್ ಅನುಮಾನಿಸುತ್ತಿದ್ದ. ಈತನ ಸಂಶಯ ಪಿಶಾಚಿಗೆ ಬೇಸತ್ತ ಪತ್ನಿ ಹರ್ಷಿತಾ ಕಳೆದ 15 ದಿನಗಳ ಹಿಂದಷ್ಟೇ ಡಿವೋರ್ಸ್ ಪಡೆದಿದ್ದರು. ಇತ್ತ ಪತ್ನಿಯ ಮೇಲೆ ದ್ವೇಷ ಬೆಳೆಸಿಕೊಂಡ ಸಚಿನ್ ಆಕೆಯನ್ನು ಕೊಲ್ಲಲು ಕಂಟ್ರಿ ಪಿಸ್ತೂಲ್ ಖರೀದಿ (Country Pistol) ಮಾಡಿದ್ದ.
ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಕುಪವಾಡ ಗ್ರಾಮದಲ್ಲಿ ಪಿಸ್ತೂಲ್ ಖರೀದಿಸಿ, ಮೀರಜ್ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಅನುಮಾನ ಬಂದ ಹಿನ್ನೆಲೆ ಪೊಲೀಸರು ಸಚಿನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತನ ಬಳಿ ಪಿಸ್ತೂಲ್ ಇರುವುದು ಕಂಡು ಬಂದಿದೆ.
ಪೊಲೀಸರು ತಮ್ಮದೆ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಸಚಿನ್ ತಾನು ರೂಪಿಸಿದ್ದ ಸಂಚಿನ ಬಗ್ಗೆ ಬಾಯಿಬಿಟ್ಟಿದ್ದಾನೆ. ಹೆಂಡತಿಯನ್ನು ಹತ್ಯೆ ಮಾಡುವ ಸಲುವಾಗಿ ಪಿಸ್ತೂಲ್ ಖರೀದಿಸಿದ್ದಾಗಿ ಬಾಯ್ಬಿಟ್ಟಿದ್ದಾನೆ. ಇದನ್ನು ಕೇಳಿ ದಂಗಾದ ಮೀರಜ್‌ನ ಗಾಂಧೀ ಚೌಕ್ ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿಕೊಂಡು ಸಚಿನ್‌ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Suicide Case: ಠಾಣೆಗೆ ಕರೆಸಿ ಚಾರ್ಜ್ ಮಾಡಿದ ಪೊಲೀಸರು; ಮನನೊಂದ ಯುವಕ ನೇಣಿಗೆ ಶರಣು
ರಕ್ಷಣೆ ನೀಡುವಂತೆ ಪತ್ನಿಯಿಂದ ದೂರು
ಸಚಿನ್ ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಿವಾಸಿಯಾಗಿದ್ದಾನೆ. ಇತ್ತ ಚಿಕ್ಕೋಡಿ ಪೊಲೀಸರಿಗೆ ಸಚಿನ್‌ನಿಂದ ವಿಚ್ಛೇದನ ಪಡೆದಿರು ಮಾಜಿ ಪತ್ನಿ ಹರ್ಷಿತಾ ಕೂಡ ದೂರು ನೀಡಿದ್ದಾರೆ. ಸಚಿನ್‌ನಿಂದ ತನಗೆ ರಕ್ಷಣೆ ನೀಡುವಂತೆ ಹಾಗೂ ತನ್ನ ಜೀವಕ್ಕೆ ಏನಾದರೂ ಆದರೆ ಅದಕ್ಕೆ ಆತನೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಪ್ರಕರಣ ಸಂಬಂಧ ಮೀರಜ್‌ನ ಗಾಂಧೀ ಚೌಕ್ ಹಾಗೂ ಚಿಕ್ಕೋಡಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ