Site icon Vistara News

Attibele Fire Accident : ದೀಪಾವಳಿಗೆ ದುಡ್ಡು ಮಾಡಿಕೊಳ್ಳಲು ಬಂದ ಬಾಲ ಕಾರ್ಮಿಕ ವಿದ್ಯಾರ್ಥಿಗಳು ಸಜೀವ ದಹನ

attiebele Fire Accident

ಬೆಂಗಳೂರು/ಅತ್ತಿಬೆಲೆ: ಅವರೆಲ್ಲೂ ಕಾಲೇಜು ಹುಡುಗುರು.. ಕಿತ್ತು ತಿನ್ನುವ ಬಡತನದಲ್ಲೂ ಅವರೆಲ್ಲೂ ಖುಷಿ ಖುಷಿಯಾಗಿದ್ದರು. ಓದಿನ ಜತೆ ಜತೆಗೆ ಒಂದಿಷ್ಟು ಹಣ ಸಂಪಾದಿಸಿ ಜೀವನೋಪಾಯಕ್ಕೆ ದಾರಿ ಮಾಡಿಕೊಂಡಿದ್ದರು. ದೀಪಾವಳಿ ಹಬ್ಬ ಬಂದರೆ ಅವರಿಗೆಲ್ಲ ನಿಜಕ್ಕೂ ಬೆಳಕಿನ ಹಬ್ಬವೇ ಆಗಿತ್ತು. ಪಟಾಕಿ ಅಂಗಡಿಯಲ್ಲಿ ಕೆಲಸ ಮಾಡಿ ನಾಲ್ಕು ಕಾಸು ಮಾಡಿಕೊಳ್ಳುವ ಕಾತುರ ಇತ್ತು. ಆದರೆ ಅದೇ ದೀಪಾವಳಿಗೆ ದುಡ್ಡು ಮಾಡಿಕೊಳ್ಳಲು ಬಂದ ಮೂವರು ಬಾಲಕಾರ್ಮಿಕರು ಸೇರಿ 14 ಜನರು ಸಜೀವ ದಹನ (Attibele Fire Accident) ಹೊಂದಿದ್ದಾರೆ. ಬೆಳಕಿನ ಹಬ್ಬವು ಮೃತ ಕುಟುಂಬಸ್ಥರಿಗೆ ಕತ್ತಲೆಯಾಗಿದೆ.

ಅತ್ತಿಬೆಲೆ ಗಡಿಭಾಗದ ಪಟಾಕಿ ಗೋದಾಮಿನಲ್ಲಿ ಶನಿವಾರ (ಅಕ್ಟೋಬರ್‌ 7) ಭೀಕರ ನಡೆದ ಅಗ್ನಿ ದುರಂತದಲ್ಲಿ (Attibele Fire Accident) 14 ಜನ ಮೃತಪಟ್ಟಿದ್ದಾರೆ. ಭಾನುವಾರ (ಅಕ್ಟೋಬರ್‌ 8) ಬೆಳಗ್ಗೆ ಗೋದಾಮಿನ ಬಳಿ ಬಂದ ಕುಟುಂಬಸ್ಥರ ಆಕ್ರಂದನವು ಮುಗಿಲುಮುಟ್ಟಿದೆ. ಇದರ ಬೆನ್ನಲ್ಲೇ, ಮೃತಪಟ್ಟ 14 ಜನರಲ್ಲಿ ಎಂಟು ಯುವಕರು ಒಂದೇ ಗ್ರಾಮದವರಾಗಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲೂ ಕಾನೂನು ಬಾಹಿರವಾಗಿ ಮೂವರು ಬಾಲ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಂಡಿರುವುದು ಕಂಡು ಬಂದಿದೆ.

ತಮಿಳುನಾಡಿನ ಧರ್ಮಪುರ ಜಿಲ್ಲೆ ಕೆ. ಅಮ್ಮಾಪೇಟೆ ಗ್ರಾಮದ 10 ಕಾರ್ಮಿಕರು ಕೆಲಸಕ್ಕೆಂದು ಬಂದಿದ್ದರು. ಇವರಲ್ಲಿ ಎಂಟು ಯುವಕರು ಅಗ್ನಿ ದುರಂತದ ವೇಳೆ ಮೃತಪಟ್ಟಿದ್ದಾರೆ. ಆದಿಕೇಶವನ್ (17), ಗಿರಿ (17), ಆಕಾಶ್ (17) ಈ ಮೂವರು ಬಾಲಕಾರ್ಮಿಕ ವಿದ್ಯಾರ್ಥಿಗಳಾಗಿದ್ದಾರೆ. ವೇಡಪ್ಪನ್ (22), ವಿಜಯರಾಘವನ್(19), ವೆಳಂಬರದಿ (20), ವಿನೋದ್ (18), ಮುನಿವೇಲ್ (19) ಮೃತರು.

ಇವರೆಲ್ಲ ವಿದ್ಯಾರ್ಥಿಗಳಾಗಿದ್ದು, ಬಡತನದ ಹಿನ್ನೆಲೆಯಲ್ಲಿ ದೀಪಾವಳಿ ವೇಳೆ ಹೀಗೆ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಎಂಟು ವಿದ್ಯಾರ್ಥಿಗಳ ಸಾವಿನ ಹಿನ್ನೆಲೆಯಲ್ಲಿ ಕೆ. ಅಮ್ಮಾಪೇಟೆಯಲ್ಲಿ ಸೂತಕದ ಛಾಯೆ ಆವರಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Attibele Fire Accident : ಎಮರ್ಜೆನ್ಸಿ ಎಕ್ಸಿಟ್‌ ಇದ್ದಿದ್ದರೆ ಬದುಕುತ್ತಿದ್ದರು ಆ 14 ಮಂದಿ!

ಪಟಾಕಿ ಮಾರಾಟಕ್ಕಷ್ಟೇ ಅನುಮತಿ

ಅಗ್ನಿ ದುರಂತ ಸಂಭವಿಸಿದ ಪಟಾಕಿ ಗೋದಾಮಿಗೆ ಅಧಿಕಾರಿಗಳು ಭೇಟಿ ನೀಡಿದ್ದು, ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅಗ್ನಿ ದುರಂತ ಸಂಭವಿಸಿದ ಗೋದಾಮಿಗೆ ವಿದ್ಯುತ್‌ ಕಂಬವೊಂದು ಅಂಟಿಕೊಂಡಿದ್ದು, ಕಂಬದಲ್ಲಿ ಬೆಂಕಿ ಕಾಣಿಸಿಕೊಂಡು, ಗೋದಾಮಿಗೆ ಆವರಿಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಇತ್ತ ಪಟಾಕಿ ಮಾರಾಟಕ್ಕಷ್ಟೇ ಅನುಮತಿ ನೀಡಿದ್ದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ ಮಾಹಿತಿ ನೀಡಿದ್ದಾರೆ. 14 ಮಂದಿಯ ಮೃತದೇಹಗಳ ಗುರುತು ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದು ಕರೆಂಟ್ ಸ್ಪಾರ್ಕ್ ಆಗಿ ಅಗ್ನಿಅವಘಡ ಸಂಭವಿಸಿರಬಹುದು. ನಾವು ಪಟಾಕಿ ಮಾರಾಟಕ್ಕೆ ಅನುಮತಿ ನೀಡಿದ್ದೇವೆ. ಆದರೆ ಶನಿವಾರ ನಡೆದಿರುವ ಅಗ್ನಿಅವಘಡದಲ್ಲಿ ಅಂಗಡಿಯನ್ನೇ ಗೋದಾಮು ಮಾಡಲಾಗಿತ್ತು. 1 ಸಾವಿರ ಕೆ.ಜಿ ಮಾತ್ರ ಪಟಾಕಿ ಇಡಲು ಅವಕಾಶ ನೀಡಲಾಗಿತ್ತು, ಆದರೆ ಈ ಗೋದಾಮಿನಲ್ಲಿ ಸಾವಿರ ಕೆ.ಜಿ‌ ಕ್ಕಿಂತ ಹೆಚ್ಚಿದೆ ಎಂದು ಮಾಹಿತಿ ನೀಡಿದ್ದಾರೆ.

ಅಂಗಡಿ ಮಾಲೀಕನಿಗೆ ಪಟಾಕಿ ಮಾರಾಟಕ್ಕೆ ಲೈಸನ್ಸ್‌ ನೀಡಿದ್ದೇವೆ. ಈ ಪ್ರಕರಣದ ನಂತರ ಅತ್ತಿಬೆಲೆಯಲ್ಲಿರುವ ಎಲ್ಲ ಪಟಾಕಿ ಅಂಗಡಿಗಳಿಗೆ ಭೇಟಿ ನೀಡಿ ಲೈಸನ್ಸ್ ಪರೀಕ್ಷೆ ಮಾಡುವುದಾಗಿ ಮಾಹಿತಿ ನೀಡಿದರು.

ಘಟನಾ ಸ್ಥಳಕ್ಕೆ ತಮಿಳುನಾಡು ಸಚಿವ ಮಾ ಸುಬ್ರಹ್ಮಣ್ಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ದೀಪಾವಳಿ ಹಿನ್ನೆಲೆ ಪಟಾಕಿ ಅಂಗಡಿಯಲ್ಲಿ ಕೆಲಸಕ್ಕಾಗಿ ಬಂದಿದ್ದರು. ಒಟ್ಟು ನಾಲ್ಕು ಗ್ರಾಮದ ಯುವಕರು ಎಂಬುದು ತಿಳಿದು ಬಂದಿದೆ. ತಮಿಳುನಾಡು ಸರ್ಕಾರ ಮೃತರ ಕುಟುಂಬಕ್ಕೆ 3 ಲಕ್ಷ ಪರಿಹಾತ ಘೋಷಣೆ ಮಾಡಿದೆ. ಹೆಚ್ಚಿನ ಪರಿಹಾರಕ್ಕೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಅದರ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿ ಘೋಷಣೆ ಮಾಡುತ್ತೇವೆ. ಕೆಲವೇ ಗಂಟೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ಮುಗಿಸಿ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರ ಮಾಡಲಾಗುವುದು ಎಂದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version