ಬಾಗಲಕೋಟೆ: ಮೀಸಲಾತಿ ಹೆಚ್ಚಳ, ಬೇಡಜಂಗಮ ಪ್ರಮಾಣ ಪತ್ರ ಸೇರಿದಂತೆ ವಿವಿಧ ಬೇಡಿಕೆಗಳಿಗೆ ನಡೆಯುತ್ತಿರುವ ಹೋರಾಟಗಳ ಮಧ್ಯೆಯೇ ಮೂಡಿಗೆರೆ ಶಾಸಕ, ವಿಧಾನಮಂಡಲ ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ. ಕುಮಾರಸ್ವಾಮಿ ಬಗ್ಗೆ ಬಾಗಲಕೋಟೆ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಆಡಿಯೊ (Audio Viral) ಬಹಿರಂಗವಾಗಿದೆ. ಇದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಹೋರಾಟ ಬಗ್ಗೆ ಮಾತಾಡುವ ಬರದಲ್ಲಿ ಚರಂತಿಮಠ ಅವರು ನಾಲಿಗೆ ಹರಿಬಿಟ್ಟಿದ್ದು, ಫೋನ್ ಸಂಭಾಷಣೆಯಲ್ಲಿ ಮಾತನಾಡುವ ವೇಳೆ ದಲಿತರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಿಸಿದ್ದಾರೆಂಬ ಆಕ್ರೋಶ ಎಲ್ಲೆಡೆ ವ್ಯಕ್ತವಾಗಿದೆ. ಕರ್ನಾಟಕ ಬೇಡಜಂಗಮ ಸಮಾಜದ ಸಂಘಟನಾ ಕಾರ್ಯದರ್ಶಿಯಾಗಿರುವ ರವಿ ಹಿರೇಮಠ ಅವರು ವೀರಣ್ಣ ಚರಂತಿಮಠ ಅವರಿಗೆ ಕರೆ ಮಾಡಿದಾಗ ಈ ಸಂಭಾಷಣೆ ನಡೆದಿದೆ ಎನ್ನಲಾಗಿದೆ.
ಆಡಿಯೊದಲ್ಲೇನಿದೆ?
ರವಿ ಹಿರೇಮಠ ಅವರು ಕರೆ ಮಾಡಿ ಎಂ.ಪಿ. ಕುಮಾರಸ್ವಾಮಿ ಅವರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆಗ ಒಮ್ಮೆಲೆಗೆ ಸಿಟ್ಟಾದ ವೀರಣ್ಣ, “ಆ ಲೋ…ಸೂ..ಮಗ ನನ್ನನ್ನು ಭೇಟಿಯೇ ಆಗಿಲ್ಲ. ಸುಮ್ಮನೆ ನಾನು ಏನೋ ಹೇಳಿದ್ದೇನೆ ಎಂದು ಹೇಳಿದ್ದಾನಂತೆ. ನನಗೆ ಈ ವಿಷಯವೇ ಗೊತ್ತಿಲ್ಲ. ಸ್ವಾಮೀಜಿಗಳೊಬ್ಬರು ಕರೆ ಮಾಡಿ ನನಗೆ ವಿಷಯ ತಿಳಿಸಿದ್ದರು. ನಾನು ಫೇಸ್‌ಬುಕ್, ವಾಟ್ಸ್‌ಆ್ಯಪ್ ಇಟ್ಟುಕೊಂಡಿಲ್ಲ. ಅವನು ನನ್ನನ್ನು ಭೇಟಿಯೇ ಆಗಿಲ್ಲ. ಸುಮ್ಮ ಸುಮ್ಮನೆ ನಾನು ಏನೋ ಹೇಳಿದೀನಿ ಅಂತ ಹೇಳಿದಾರಂತೆ. ನಾನು ಹಾಗೆ ಹೇಳಿಯೇ ಇಲ್ಲ. ಅಲ್ಲದೆ, ಕೋರ್ಟ್‌ನಲ್ಲಿ ಪ್ರಕರಣ ಇರುವುದರಿಂದ ಅಲ್ಲಿ ಏನು ನಿರ್ಧಾರ ಆಗುತ್ತದೆಯೋ ಆಗಲಿ ಎಂದು ಮುಖ್ಯಮಂತ್ರಿಯವರೂ ಹೇಳಿದ್ದಾರೆ. ಜಂಗಮರಿಗೆ ಬೇಡ ಜಂಗಮ ಪ್ರಮಾಣ ಪತ್ರ ನೀಡಬೇಕು ಎಂಬುದು ನಮಗೂ ಇದೆ. ನಾವು ರಾಜಕಾರಣಿಗಳು ಬಹಿರಂಗವಾಗಿ ಮಾತಾಡಿದ್ರೆ ಈ ಎಸ್‌ಸಿಗಳು ಮೈಮೇಲೆ ಬೀಳ್ತಾವೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಚರಂತಿಮಠ ಮಾತನಾಡಿದ್ದಾರೆನ್ನಲಾದ ಆಡಿಯೊ ವೈರಲ್ ಆಗಿದೆ.
ಆದರೆ, ವೀರಣ್ಣ ಚರಂತಿ ಮಠ ಅವರಿಗೆ ಎಂ.ಪಿ. ಕುಮಾರಸ್ವಾಮಿ ಅವರು ಏನು ಆರೋಪ ಮಾಡಿದ್ದಾರೆ? ಎಲ್ಲಿ ಆರೋಪ ಮಾಡಿದ್ದಾರೆ? ಯಾರ ಬಳಿ ಮಾತನಾಡಿದ್ದಾರೆ ಎಂಬ ಅಂಶಗಳು ಇನ್ನೂ ಬಹಿರಂಗಗೊಂಡಿಲ್ಲ.
ಇದನ್ನೂ ಓದಿ | ಕಾಂಗ್ರೆಸ್ ಬಾಗಿಲು ನಾನ್ಯಾಕೆ ತಟ್ಟಲಿ? : ಮೋಟಮ್ಮ ವಿರುದ್ಧ ಶಾಸಕ ಎಂ.ಪಿ. ಕುಮಾರಸ್ವಾಮಿ ಕಿಡಿ