ಬೆಂಗಳೂರು: ಸಾಲ ತೀರಿಸಲು ಆಟೊ ಚಾಲಕನೊಬ್ಬ (Auto Driver) ಅಡ್ಡದಾರಿ ಹಿಡಿದು, ಪ್ರಯಾಣಿಕರ ಹಣವನ್ನೇ ಕದ್ದು ಪರಾರಿ ಆಗಿದ್ದ. ಆತನನ್ನು ಈಗ ಪೊಲೀಸರು ಹಿಡಿದು ಜೈಲಿಗೆ ತಳ್ಳಿದ್ದಾರೆ.
ಆಟೊ ಚಾಲಕ ರಂಗಸ್ವಾಮಿ ಎಂಬಾತ ಗಾಂಧಿ ಬಜಾರ್‌ನಿಂದ ಪ್ರಯಾಣಿಕರೊಬ್ಬರನ್ನು ರಿಕ್ಷಾಗೆ ಹತ್ತಿಸಿಕೊಂಡಿದ್ದ. ಹೋಮಿಯೋಪಥಿ ಆಸ್ಪತ್ರೆಯೊಂದಕ್ಕೆ ಕಿವಿಯ ಚಿಕಿತ್ಸೆಗಾಗಿ ಬಂದಿದ್ದ ಪ್ರಯಾಣಿಕ, ಕ್ಲಿನಿಕ್‌ಗೆ ಹೋಗಿ ಬರುವುದಾಗಿ ಹೇಳಿ ಆಟೊ ಇಳಿದಿದ್ದರು. ಈ ವೇಳೆ ಪ್ರಯಾಣಿಕ ಹಣದ ಬ್ಯಾಗ್‌ನ್ನು ಆಟೋದಲ್ಲಿ ಇಟ್ಟಿದ್ದು, ಚಾಲಕ ರಂಗಸ್ವಾಮಿಗೆ ನೋಡಿಕೊಳ್ಳುವಂತೆ ಕೇಳಿಕೊಂಡಿದ್ದರು.
ಕ್ಲಿನಿಕ್‌ಗೆ ಪ್ರಯಾಣಿಕ ಹೋಗುತ್ತಿದ್ದಂತೆ ಈ ಕಡೆ ರಂಗಸ್ವಾಮಿ ಬ್ಯಾಗ್ ತೆರೆದು ನೋಡಿದ. 1.5 ಲಕ್ಷ ರೂ. ನಗದು ಇರುವುದು ಆತನ ಕಣ್ಣಿಗೆ ಬಿತ್ತು. ಕೂಡಲೇ ಚಾಲಕ ರಿಕ್ಷಾ ಸ್ಟಾರ್ಟ್ ಮಾಡಿ ಅಲ್ಲಿಂದ ಜಾಗ ಖಾಲಿ ಮಾಡಿದ. ಇತ್ತ ಪ್ರಯಾಣಿಕ ಕ್ಲಿನಿಕ್‌ನಿಂದ ಬಂದು ನೋಡಿದರೆ ಅಲ್ಲಿ ಆಟೊ ಇರಲಿಲ್ಲ. ಬಳಿಕ ಅವರು ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: Youth drowned: ಈಜಲು ಹೋಗಿ ಕೆರೆಯಲ್ಲಿ ಮುಳುಗಿದ ಬಾಲಕ; ಮುಗಿಲುಮುಟ್ಟಿದ ಪಾಲಕರ ಆಕ್ರಂದನ
ಕಾರ್ಯಾಚರಣೆ ನಡೆಸಿ 1.5 ಲಕ್ಷ ರೂ. ನಗದು ಸಮೇತ ಆರೋಪಿ ರಂಗಸ್ವಾಮಿಯನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಈತ ಇದೇ ಮೊದಲ ಬಾರಿ ಈ ರೀತಿಯ ಕೃತ್ಯ ಮಾಡಿದ್ದಾನೋ ಅಥವಾ ಹಿಂದೆ ಇನ್ನೂ ಹಲವರ ಬ್ಯಾಗ್ ಎಗರಿಸಿದ್ದಾನೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಲ ತೀರಿಸಲು ಹೀಗೆ ಮಾಡಿದೆ ಎಂದು ಆರೋಪಿ ಹೇಳಿಕೊಂಡಿದ್ದಾನೆ.