Site icon Vistara News

‘ಮರ್ಯಾದೆ’ ಕಾರಣಕ್ಕೆ ಚಿಕ್ಕಪ್ಪನಿಂದಲೇ ಹತ್ಯೆಗೀಡಾದ ಆಟೋ ಚಾಲಕ; ಬಸಿದ ರಕ್ತ ಹಂತಕನ ದಾರಿ ತೋರಿಸಿತು!

auto driver naveen

#image_title

ಬೆಂಗಳೂರಿನ ಹೊಯ್ಸಳ ಸರ್ಕಲ್​ ಬಳಿ ಜೂ.1ರಂದು ರಾತ್ರಿ ಕೊಲೆಯೊಂದು (Murder Case) ನಡೆದಿದೆ. ಆಟೋ ಚಾಲಕ ನವೀನ್ ಎಂಬಾತನನ್ನು ಆತನ ಚಿಕ್ಕಪ್ಪನೇ ಹತ್ಯೆ ಮಾಡಿದ್ದಾನೆ. ನವೀನ್​ ಮತ್ತು ಚಿಕ್ಕಪ್ಪ ಕುಮಾರ್​ ಅನ್ಯೋನ್ಯವಾಗಿಯೇ ಇದ್ದರು. ಆದರೆ ಚಿಕ್ಕಪ್ಪ ಕುಮಾರ್​ನ ಮನಸಲಲ್ಲಿ, ನವೀನ್ ವರಸೆಯಲ್ಲಿ ತನಗೆ ಮಗನೇ ಆಗಬೇಕು, ಆತ ನನಗಿಂತ ಚಿಕ್ಕವನಾದರೂ ಸರಿಯಾಗಿ ಮರ್ಯಾದಿ/ಗೌರವ ಕೊಡುವುದಿಲ್ಲ ಎಂಬ ಅಸಮಾಧಾನ ಇತ್ತು. ಸಲುಗೆ ಜಾಸ್ತಿಯಿದ್ದ ಕಾರಣ ನವೀನ್​ ತನ್ನ ಚಿಕ್ಕಪ್ಪನಿಗೆ ಮರ್ಯಾದೆ ಕೊಡದೆ ವರ್ತನೆ ಮಾಡುತ್ತಿದ್ದ. ಇದೇ ಸಿಟ್ಟಿಗೆ ಕುಮಾರ್​ ತನ್ನ ಅಣ್ಣನ ಮಗನನ್ನು ಹತ್ಯೆ (Bangalore Crime News) ಮಾಡಿದ್ದಾನೆ.

ನವೀನ್​​ಗೆ ಹದಿನೈದು ದಿನಗಳ ಹಿಂದೆ ಅಪಘಾತವಾಗಿತ್ತು. ಹೀಗಾಗಿ ಸ್ವಲ್ಪ ದಿನಗಳ ಮಟ್ಟಿಗೆ ಆಟೋ ಓಡಿಸುವುದನ್ನು ಬಿಟ್ಟು ಮನೆಯಲ್ಲೇ ಇದ್ದ. ನಿನ್ನೆ ಸಂಜೆ ಆತನ ಚಿಕ್ಕಪ್ಪ ಕುಮಾರ್​ ಎಣ್ಣೆ ಹೊಡೆಯೋಕೆ ಅಂತ ನವೀನ್​​ನನ್ನು ಕೆಂಗೇರಿ ಉಪನಗರದ ಹೊಯ್ಸಳ ಸರ್ಕಲ್​​ ಬಳಿ ಇರುವ ಹ್ಯಾಪಿ ಡೇ ಬಾರ್​​ಗೆ ಕರೆದಿದ್ದ. ನವೀನ್​ ಖುಷಿಯಿಂದ ಹೋಗಿದ್ದ. ಮದ್ಯ ಹೊಟ್ಟೆಗೆ ಹೋಗ್ತಿದ್ದಂತೆ ಚಿಕ್ಕಪ್ಪ ಕುಮಾರ್​ ಗಲಾಟೆ ಶುರು ಮಾಡಿದ್ದ. ನೀನು ನನಗೆ ಮರ್ಯಾದೆ ಕೊಡ್ತಿಲ್ಲ ಎಂದು ಜಗಳ ತೆಗೆದ. ಅದಾಗಲೇ ವಿಪರೀತವಾಗಿ ಮದ್ಯ ಸೇವಿಸಿದ್ದರಿಂದ ಮಿತಿಮೀರಿ ಗಲಾಟೆ ಶುರುವಾಗಿತ್ತು. ಅಲ್ಲಿ ಕುಮಾರನ ಸ್ನೇಹಿತರಾದ ರಮೇಶ್, ಗುರುಪ್ರಸಾದ್ ಎಂಬುವರೂ ಇದ್ದರು. ಬಾರ್​​ನಿಂದ ಹೊರಗೆ ಬಂದು, ಈ ಮೂವರೂ ಸೇರಿ ನವೀನ್​​ ಹತ್ಯೆ ಮಾಡಿದ್ದಾರೆ. ಆತನ ಮೈಯಿಗೆ ಸಿಕ್ಕಸಿಕ್ಕಲ್ಲಿ ಚಾಕುವಿನಿಂದ ಇರಿದಿದ್ದಾರೆ.

ಇದನ್ನೂ ಓದಿ: Delhi Murder: ಸಾಹಿಲ್‌ನಿಂದ ಹತಳಾದ ಸಾಕ್ಷಿ ನನ್ನ ಗರ್ಲ್‌ಫ್ರೆಂಡ್‌ ಎಂದ ಮತ್ತೊಬ್ಬ ಯುವಕ; ಕೊಲೆಗೆ ಮತ್ತೊಂದು ಟ್ವಿಸ್ಟ್

ರಕ್ತದ ಕಲೆಯೇ ದಾರಿ ತೋರಿಸಿತು!
ಜಗಳದ ವೇಳೆ ಕುಮಾರ್​ ಚಾಕುವಿನಿಂದ ಗಾಯವಾಗಿತ್ತು. ರಕ್ತಸ್ರಾವ ಆಗ್ತಿದ್ರೂ ತಪ್ಪಿಸಿಕೊಳ್ಳಲು ಒಂದು ಕಿಲೋ ಮೀಟರ್ ದೂರ ಹೋಗಿ ಸುಸ್ತಾಗಿ ಕುಳಿತಿದ್ದ. ಇತ್ತ ಹತ್ಯೆ ನಡೆದ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದರು. ಕುಮಾರ್​​ನನ್ನು ಕೆಲವೆ ಹೊತ್ತಲ್ಲಿ ಪತ್ತೆ ಮಾಡಿದರು. ಅವನ ಕಾಲಿನಿಂದ ಬಸಿದ ರಕ್ತವೇ ದಾರಿ ತೋರಿತ್ತು. ಆತ ಸಾಗಿದ್ದ ಮಾರ್ಗ ರಕ್ತಮಯವಾಗಿದ್ದರಿಂದ, ಅದೇ ಗುರುತಿನ ಆಧಾರದ ಮೇಲೆ ಹೋಗಿ ಕುಮಾರ್​ನನ್ನು ಹಿಡಿದಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಕುಮಾರ್ ಕೂಡ ಅಸ್ವಸ್ಥನಾಗಿ ಬಿದ್ದಿದ್ದ. ಅವನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಇನ್ನುಳಿದ ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಾರ್ ಹೊರಗಿನ ಸಿಸಿಟಿವಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Exit mobile version