ಮಂಗಳೂರು: ನಗರದ ನಾಗುರಿಯಲ್ಲಿ ಆಟೋವೊಂದರಲ್ಲಿ ಸ್ಫೋಟ (Mangalore Blast) ಸಂಭವಿಸಿದ್ದು, ಸ್ಫೋಟದ ಕಾರಣ ಮಾತ್ರ ನಿಗೂಢವಾಗಿ ಉಳಿದಿದೆ. ಶನಿವಾರ ಸಂಜೆ 5.30ರ ಸುಮಾರಿಗೆ ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ ಸಂಭವಿಸಿದ್ದು, ಇಬ್ಬರಿಗೆ ಗಾಯಗಳಾಗಿವೆ.
ನಾಗುರಿಯಿಂದ ಮಂಗಳೂರು ನಗರದ ಕಡೆ ಸಂಚರಿಸುತ್ತಿದ್ದ ಆಟೋ ರಿಕ್ಷಾಕ್ಕೆ ಕಂಕನಾಡಿ ರೈಲ್ವೆ ನಿಲ್ದಾಣದ ಕ್ರಾಸ್ ಬಳಿ ಪ್ರಯಾಣಿಕನೊಬ್ಬ ಹತ್ತಿದ್ದ. ಆದರೆ, ಆಟೋ ರಿಕ್ಷಾ ಕೇವಲ ಒಂದು ಕಿಲೋ ಮೀಟರ್ ಕ್ರಮಿಸುವಷ್ಟರಲ್ಲಿ ಈ ಘಟನೆ ನಡೆದಿದೆ. ಸ್ಫೋಟದ ಜತೆಗೆ ಹೊಗೆಯೂ ಕಾಣಿಕೊಂಡಿದ್ದು, ಆಟೋಗೆ ಬೆಂಕಿ ಹತ್ತಿಕೊಂಡಿತ್ತು. ತಕ್ಷಣ ಸ್ಥಳೀಯರು ಬೆಂಕಿ ನಂದಿಸಿ ಆಟೋವನ್ನು ರಸ್ತೆ ಬದಿಗೆ ನಿಲ್ಲಿಸಿದರು,
ಆದರೆ ಆಟೋ ಚಾಲಕ ಹಾಗೂ ಪ್ರಯಾಣಿಕ ಇಬ್ಬರಿಗೂ ಸುಟ್ಟ ಗಾಯವಾದ ಕಾರಣ ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ರವಾನಿಸಿದರು. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿ, ಈ ಬಗ್ಗೆ ಹೆಚ್ಚಿನ ತನಿಖೆಗೆ ಬಾಂಬ್ ನಿಷ್ಕ್ರಿಯ ದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ.
ಆಟೋದಲ್ಲಿ ಛಿದ್ರಗೊಂಡ ಕುಕ್ಕರ್ ಪತ್ತೆಯಾಗಿದೆ. ಹೀಗಾಗಿ ಘಟನೆಯ ತನಿಖೆ ಮುಂದುವರಿದಿದ್ದು ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ಹೇಳಿಕೆಗಾಗಿ ಪೊಲೀಸರು ಕಾಯುತ್ತಿದ್ದಾರೆ. ಗಂಭೀರ ಗಾಯಗೊಂಡಿರುವ ಪ್ರಯಾಣಿಕ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ನಾಳೆ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ. ಪ್ರಯಾಣಿಕ ಯಾರು? ಎಲ್ಲಿಂದ ಬಂದಿದ್ದ ಹಾಗೂ ಆತನ ಬ್ಯಾಗ್‌ನಲ್ಲಿ ಏನಿತ್ತು ಎಂಬುವುದು ಪೊಲೀಸರ ಹೆಚ್ಚಿನ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.
ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪ್ರತಿಕ್ರಿಯಿಸಿ, ಕಂಕನಾಡಿ ಪೊಲೀಸ್ ಠಾಣೆಯ ಬಳಿ ಈ ಘಟನೆ ನಡೆದಿದೆ. ನಾಗುರಿಯಿಂದ ಪಂಪ್ ವೆಲ್ ಕಡೆ ಆಟೋ ಸಾಗುತ್ತಿದ್ದಾಗ ಆಟೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೈಯಲ್ಲಿದ್ದ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು, ಬಳಿಕ ಬ್ಯಾಗ್ ಹಿಡಿದುಕೊಂಡ ಪ್ರಯಾಣಿಕನಿಗೂ ಬೆಂಕಿ ತಗುಲಿದೆ. ಇದರಿಂದ ಆಟೋ ಒಳಭಾಗ ಭಾಗಶಃ ಸುಟ್ಟು ಹೋಗಿದೆ. ಇಬ್ಬರು ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ಜನರು ಗಾಬರಿ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ | Fraud Case | ನಕಲಿ ಆಭರಣಕ್ಕೆ ಅಸಲಿ ಚಿನ್ನದ ಲೇಪನ, ಸಾಲ ಪಡೆದು ಪಲಾಯನ; ಆರೋಪಿಗಳ ಬಂಧನ