ಶಿವಮೊಗ್ಗ: ವಿಧಾನಸಭಾ ಚುನಾವಣೆ (Karnataka Election 2023) ಸಮೀಪವಾಗುತ್ತಿದ್ದಂತೆ ಶಿವಮೊಗ್ಗ ನಗರದ ಹೃದಯ ಭಾಗದಲ್ಲಿ ನೂತನ ಕಚೇರಿಯೊಂದನ್ನು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ (Ayanur Manjunath) ಗುರುವಾರ (ಏ. 6) ಆರಂಭಿಸಿದ್ದಾರೆ. ಈ ಮೂಲಕ ಅವರ ಕಾಂಗ್ರೆಸ್ ಸೇರ್ಪಡೆ ವದಂತಿಗೆ ಮತ್ತಷ್ಟು ಪುಷ್ಟಿ ಸಿಕ್ಕಂತೆ ಆಗಿದೆ.
ಗುರುವಾರ ಪೂಜಾ ಕಾರ್ಯ ನೆರವೇರಿಸಿ ಕಚೇರಿಯನ್ನು ಆರಂಭಿಸಿದ ಅವರು ಬಳಿಕ ಮಾತನಾಡಿ, ನೀತಿ ಸಂಹಿತೆ ಕಾರಣ ಸರ್ಕಾರಿ ಕಚೇರಿ ಬಂದ್ ಆಗಿದೆ. ಕಾರ್ಯಚಟುವಟಿಕೆ ಮುಂದುವರಿಸಲು ಖಾಸಗಿ ಕಚೇರಿಯನ್ನು ಆರಂಭಿಸಿದ್ದೇನೆ. ಶಾಸಕರ ಕಾರ್ಯಾಲಯ ಎಂದೇ ಬೋರ್ಡ್ ಹಾಕಿದ್ದೇನೆ. ರಾಜೀನಾಮೆ ನೀಡುವವರೆಗೆ ಶಾಸಕರ ಕಾರ್ಯಾಲಯ ಆಗಿರುತ್ತದೆ ಎಂದು ತಿಳಿಸಿದರು.
ನನ್ನ ನಿರ್ಧಾರಕ್ಕೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ. ಎಲ್ಲ ವರ್ಗದವರು ನನ್ನ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಶಾಂತಿಯೆಡೆಗೆ ನನ್ನ ನಿಲುವಿಗೆ ಬೆಂಬಲ ಸಿಕ್ಕಿದೆ. ಕೆಲ ದಿನ ಕಾದು ನಾನು ರಾಜೀನಾಮೆ ನೀಡುತ್ತೇನೆ. ಪಕ್ಷಗಳ ಅಭ್ಯರ್ಥಿ ಚಿತ್ರಣ ನೋಡಿ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: RBI Repo rate : ಕೊನೆಗೂ ಸಾಲದ ಬಡ್ಡಿ ದರ ಏರಿಕೆಗೆ ಆರ್‌ಬಿಐ ಬ್ರೇಕ್, ಸದ್ಯಕ್ಕೆ ಗೃಹಸಾಲ ಬಡ್ಡಿ ಏರಲ್ಲ
ಬೇರೆಯವರಿಗೆ ಟಿಕೆಟ್ ನೀಡಿದರೆ ನೋಡೋಣ
ಪಕ್ಷದಿಂದ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದೀರಿ. ಪಕ್ಷದಿಂದ ತೀರ್ಮಾನ ಅಂತಿಮವಾಗುವವರೆಗೆ ಕಾಯಿರಿ ಎಂದು ಹಿತೈಷಿಗಳು ಸಲಹೆ ನೀಡಿದ್ದಾರೆ. ಹೀಗಾಗಿ ಕಾಯುತ್ತಿದ್ದೇನೆ. ಬಿಜೆಪಿಯಿಂದಲೇ ಸ್ಪರ್ಧಿಸಬೇಕು ಎಂಬ ಇಚ್ಛೆ ನನಗೆ ಈಗಲೂ ಇದೆ. ಸ್ಪರ್ಧಿಸುವುದು ನಿಶ್ಚಿತ, ಯಾವುದೇ ಬದಲಾವಣೆಯಿಲ್ಲ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದರೆ ಆಗ ನೋಡೋಣ ಎಂದು ಹೇಳಿದರು.
ಅಲ್ಲದೆ, ನನ್ನ ಶಾಂತಿ ಮಂತ್ರ ಏಕಾಏಕಿ ಉದ್ಭವಿಸಿದ್ದಲ್ಲ. ಇದು ನನ್ನೊಬ್ಬನದೇ ಪ್ರಕರಣವಲ್ಲ. ಬದಲಾವಣೆ ಗಾಳಿ ಅನೇಕ ಕಡೆ ಬೀಸುತ್ತಿದೆ. ಮುಖಂಡರು ಸ್ಪಂದಿಸಿದರೆ ಪಕ್ಷಕ್ಕೆ ಡ್ಯಾಮೇಜ್ ಆಗಲ್ಲ. ನಾನ್ಯಾವುದೇ ಬ್ಲ್ಯಾಕ್‌ಮೇಲ್ ಮಾಡುತ್ತಿಲ್ಲ. ಬ್ಲ್ಯಾಕ್‌ಮೇಲ್‌ಗೆ ಒಳಗಾಗುವ ನಾಯಕರು ಜಿಲ್ಲೆಯಲ್ಲಿಲ್ಲ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಫ್ಲೆಕ್ಸ್ ಸಂಬಂಧ ಮಾತನಾಡಿದ್ದರು. ಹರಕು ಬಾಯಿ, ಅಂತಹ ಫ್ಲೆಕ್ಸ್ ಬೇಡ ಅಂದಿದ್ದರು. ಆದರೆ, ಟಿಕೆಟ್ ಕುರಿತು ಚರ್ಚೆಯಾಗಿಲ್ಲ. ಅದಾದ ಮೂರು ದಿನಗಳಲ್ಲಿ ಪಾಲಿಕೆ ಅವರೇ ಫ್ಲೆಕ್ಸ್ ಅನ್ನು ತೆಗೆದಿದ್ದಾರೆ ಎಂದು ಆಯನೂರು ಪ್ರತಿಕ್ರಿಯೆ ನೀಡಿದರು.
ಬಿಜೆಪಿ ಕಚೇರಿ ಹತ್ತಿರವೇ ನೂತನ ಕಚೇರಿಯನ್ನು ತೆಗೆದಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜನಸಂಪರ್ಕಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಮಧ್ಯ ಭಾಗದಲ್ಲಿ ತೆರೆಯಲಾಗಿದೆ. ಯಾರಿಗೋ ಪರ್ಯಾಯವಾಗಿ ತೆರೆದಿಲ್ಲ. ಸರ್ಕಾರಿ ಕಚೇರಿ ಮುಚ್ಚಿದ್ದರಿಂದ ಖಾಸಗಿ ಕಚೇರಿಯನ್ನು ತೆರೆದಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: Inside Story: ಚೆಕ್‌ಮೇಟ್ ಕೊಟ್ಟಿದ್ದ ಡಿ.ಕೆ. ಶಿವಕುಮಾರ್‌ಗೆ ಸುದೀಪ್ ಕರೆತಂದು ಶಾಕ್ ಕೊಟ್ಟ ಬಸವರಾಜ ಬೊಮ್ಮಾಯಿ
ಕಾದು ನೋಡುವ ತಂತ್ರ
ಎಲ್ಲ ಪಕ್ಷಗಳ ಹೆಜ್ಜೆ ನೋಡಿ ಅಧ್ಯಯನ ಮಾಡಿ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿರುವ ಆಯನೂರು ಮಂಜುನಾಥ್ ಸದ್ಯಕ್ಕೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಒಂದು ವೇಳೆ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದಿದ್ದರೆ ಹಾಗೂ ಬಿಜೆಪಿಯಿಂದ ಕೆ.ಎಸ್. ಈಶ್ವರಪ್ಪ ಇಲ್ಲವೇ ಅವರ ಪುತ್ರ ಕಾಂತೇಶ್‌ಗೆ ಟಿಕೆಟ್ ನೀಡಿದರೆ ಪಕ್ಷೇತರವಾಗಿಯಾದರೂ ಸ್ಪರ್ಧೆ ಮಾಡುವ ಬಗ್ಗೆ ಆಯನೂರು ಚಿಂತನೆ ನಡೆಸಿದ್ದಾರೆನ್ನಲಾಗಿದೆ.