Site icon Vistara News

Karnataka Election 2023: ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್‌ಗೆ ಕಾಂಗ್ರೆಸ್‌ ಟಿಕೆಟ್‌ ಫಿಕ್ಸ್?;‌ ಸಿಡಿದೆದ್ದ ಜಿಲ್ಲಾ ಕಾಂಗ್ರೆಸ್‌

Ayanur Manjunath to get Congress ticket from Shivamogga opposed from District Congress Karnataka Election 2023 updates

ಶಿವಮೊಗ್ಗ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಮೇ 10ರಂದು ನಡೆಯಲಿರುವ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ನಡುವೆ ಆಯಾ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ. ಇನ್ನು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಗೊಂದಲ ಮುಂದುವರಿದಿದೆ. ಈ ನಡುವೆ ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದು, ಅವರಿಗೆ ಟಿಕೆಟ್‌ ನೀಡಲಾಗುವುದು ಎಂಬ ವದಂತಿ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಸಿಡಿದೆದ್ದಿದೆ.

ಈ ಸಂಬಂಧ ಶಿವಮೊಗ್ಗ ಕಾಂಗ್ರೆಸ್‌ನ 32 ವಾರ್ಡ್ ಅಧ್ಯಕ್ಷರು ಸಭೆ ನಡೆಸಿದ್ದು, ಆಯನೂರು ಮಂಜುನಾಥ್‌ಗೆ ಟಿಕೆಟ್‌ ಕೊಡುವ ವಿಚಾರವಾಗಿ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್‌ನಲ್ಲಿ ರೂಢಿಸಿಕೊಂಡು ಬಂದಿರುವ ನಿಯಮಾವಳಿಯಂತೆ ಟಿಕೆಟ್‌ ಹಂಚಿಕೆಯಾಗಬೇಕು. ಅದರಂತೆ ಅರ್ಜಿ ಸಲ್ಲಿಸಿದವರಿಗೆ ಟಿಕೆಟ್‌ ಕೊಡಬೇಕು. ಅದು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದರೆ ಸಾಮೂಹಿಕ ರಾಜಿನಾಮೆ ನೀಡಲಾಗುವುದು ಎಂಬ ಎಚ್ಚರಿಕೆ ಸಂದೇಶವನ್ನು ಈ ಸಭೆಯ ಮೂಲಕ ರವಾನಿಸಲಾಗಿದೆ.

ಸಭೆಯಲ್ಲಿ ಸಾಮೂಹಿಕ ನಿರ್ಣಯ ತೆಗೆದುಕೊಂಡ 32 ವಾರ್ಡ್‌ಗಳ ಅಧ್ಯಕ್ಷರು

ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಈಗಾಗಲೇ 11 ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಯಾಗಿದೆ. ಇವರಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡಿದರೆ ನಮ್ಮ ಅಭ್ಯಂತರ ಏನೂ ಇಲ್ಲ. ಎಲ್ಲರೂ ಸೇರಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ. ಅದು ಬಿಟ್ಟು ಹೊರಗಡೆಯಿಂದ ಬಂದವರಿಗೆ ಟಿಕೆಟ್‌ ನೀಡಿದರೆ ಶಿವಮೊಗ್ಗ ನಗರದ ಎಲ್ಲ 32 ವಾರ್ಡ್ ಅಧ್ಯಕ್ಷರು ರಾಜೀನಾಮೆ ನೀಡುತ್ತೇವೆ. ಚುನಾವಣೆಯಲ್ಲಿ ಕೆಲಸ ಮಾಡದೆ, ತಟಸ್ಥರಾಗಿ ಉಳಿದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: SC ST Reservation : ಎಸ್ಸಿ ಪಟ್ಟಿಯಿಂದ ಯಾರನ್ನೂ ತೆಗೆಯುವ ಪ್ರಶ್ನೆ ಇಲ್ಲ, ಕಾಂಗ್ರೆಸ್‌ನಿಂದ ಅಪಪ್ರಚಾರ ಎಂದ ಬೊಮ್ಮಾಯಿ

ಶಿವಮೊಗ್ಗದಲ್ಲಿ ವಾರ್ಡ್‌ ಅಧ್ಯಕ್ಷರ ಸಭೆ

ಈ ಸಂಬಂಧ ಶಿವಮೊಗ್ಗ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಸೇರಿದ್ದ ವಾರ್ಡ್ ಅಧ್ಯಕ್ಷರು, ಈ ತೀರ್ಮಾನಕ್ಕೆ ಬಂದಿದ್ದಾರೆ. ಒಮ್ಮತದಿಂದ ಪ್ರಮಾಣ ಮಾಡಿ ಈ ತೀರ್ಮಾನವನ್ನು ಪ್ರಕಟಿಸಲಾಗಿದೆ. ಮಹದೇವ, ಶಿವಮೂರ್ತಿ, ಶಶಿ, ಅನ್ನು, ರೂಪಾ, ಮೇರಿ ಸೇರಿದಂತೆ ಇನ್ನಿತರ ವಾರ್ಡ್‌ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸಿದ್ದರು.

ವಿಧಾನಸಭೆಯತ್ತ ಆಯನೂರು ಕಣ್ಣು

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಮೇಲೆ ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಕಣ್ಣಿಟ್ಟಿದ್ದಾರೆ. ಅವರು ಈಗಾಗಲೇ ಬಿಜೆಪಿಯಿಂದ ಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಆದರೆ, ಬಿಜೆಪಿಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ, ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ಅವರಿಗೆ ವಯಸ್ಸಿನ ಆಧಾರದ ಮೇಳೆ ಈ ಬಾರಿ ಟಿಕೆಟ್‌ ನೀಡಲಾಗುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿರುವುದರಿಂದ ಆ ಸ್ಥಾನಕ್ಕೆ ತಮಗೆ ಟಿಕೆಟ್‌ ನೀಡಬೇಕು ಎಂದು ಪಟ್ಟುಹಿಡಿದಿದ್ದಾರೆ. ಆದರೆ, ಇದಕ್ಕೆ ಈಶ್ವರಪ್ಪ ಸುತರಾಂ ಒಪ್ಪದೆ, ತಮಗೆ ಇಲ್ಲವೇ ತಮ್ಮ ಪುತ್ರ ಕಾಂತೇಶ್‌ಗೆ ಟಿಕೆಟ್‌ ನೀಡಬೇಕು ಎಂದು ಬಯಸಿದ್ದಾರೆ.

ಇದರಿಂದ ವ್ಯಗ್ರರಾಗಿರುವ ಆಯನೂರು ಮಂಜುನಾಥ್‌, ಬಿಜೆಪಿ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು. ಅಲ್ಲದೆ, ಈಶ್ವರಪ್ಪ ಮೇಲೆಯೂ ನೇರವಾಗಿ ಹರಿಹಾಯ್ದು, ಅಪ್ಪನ ನಂತರ ಮಗನಿಗೆ ಟಿಕೆಟ್‌ ಕೊಡಲು ತಮ್ಮ ವಿರೋಧ ಇದೆ ಎಂದು ಹೇಳಿದ್ದಾರೆ. ಈಶ್ವರಪ್ಪ ಮಗನಿಗಿಂತ ತಮಗೆ ಹೆಚ್ಚಿನ ಅರ್ಹತೆ ಇದೆ ಎಂದೂ ಹೇಳಿದ್ದಾರೆ. ತಮಗಲ್ಲದೆ ಬೇರೆ ಯಾರಿಗೇ ಟಿಕೆಟ್‌ ನೀಡಿದರೂ ವಿರೋಧವಿದೆ ಎಂದು ಗುಡುಗಿದ್ದರು.

ಇದನ್ನೂ ಓದಿ: Ballary young Mayor : ಬಳ್ಳಾರಿ ಪಾಲಿಕೆಗೆ 21 ವರ್ಷದ ಯುವತಿ ಮೇಯರ್‌, ರಾಜ್ಯದಲ್ಲೇ ಅತಿಕಿರಿಯ ವಯಸ್ಸಿನ ಮಹಾಪೌರರು!

ಅತ್ತ ಕಾಂಗ್ರೆಸ್‌ ಪಕ್ಷದ ನಾಯಕರ ಜತೆಗೂ ಆಯನೂರು ಸಂಪರ್ಕದಲ್ಲಿದ್ದು, ಟಿಕೆಟ್‌ಗಾಗಿ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದು ಈಗ ಸ್ಥಳೀಯ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಟಿಕೆಟ್‌ ನೀಡುವುದೇ ಆದರೆ, ಪಕ್ಷದಲ್ಲಿದ್ದವರಿಗೆ ಕೊಡಬೇಕು, ಹೊರಗಡೆಯಿಂದ ಬಂದವರಿಗೆ ಯಾವುದೇ ಕಾರಣಕ್ಕೂ ಟಿಕೆಟ್‌ ನೀಡಬಾರದು. ಒಂದು ವೇಳೆ ಇದನ್ನೂ ಮೀರಿ ನಿರ್ಧಾರ ತೆಗೆದುಕೊಂಡರೆ ಅಭ್ಯರ್ಥಿಗೆ ತಮ್ಮ ಬೆಂಬಲ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದ್ದಾರೆ.

Exit mobile version