ಹೊನ್ನಾವರ (ಉತ್ತರ ಕನ್ನಡ): ಮೈಸೂರು ಮೂಲದ ಅರುಣ್ ಯೋಗಿರಾಜ್ ಅವರು ಕೆತ್ತಿದ ಬಾಲರಾಮನ ಮೂರ್ತಿ ಅಯೋಧ್ಯೆ ರಾಮ ಮಂದಿರದ (Ayodhya Ram Mandir) ಗರ್ಭಗುಡಿಯಲ್ಲಿ ವಿರಾಜಮಾನವಾಗುತ್ತಿರುವಂತೆಯೇ, ರಾಮ ಮಂದರದಲ್ಲಿ ಕನ್ನಡಿಗರೊಬ್ಬರು ಕೆತ್ತಿದ ಇನ್ನೊಂದು ಮೂರ್ತಿಯೂ ನೆಲೆಯಾಗುತ್ತಿದೆ.
ಉತ್ತರ ಕನ್ನಡದ ಹೊನ್ನಾವರ ಮೂಲದ ಯುವ ಶಿಲ್ಪಿ ವಿನಾಯಕ ಗೌಡ ಕೆಕ್ಕಾರ ಅವರು ಕೆತ್ತಿರುವ ಗಣಪತಿ ಪ್ರತಿಮೆ ಜನವರಿ 22ರಂದು ಪ್ರಾಣ ಪ್ರತಿಷ್ಠಾನದ ಸಂದರ್ಭದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪನೆಗೊಳ್ಳಲಿದೆ. ಮಂದಿರದ ರಂಗಮಂಟಪವನ್ನು ರಚಿಸುವ ಹೊಣೆಯನ್ನು ಇವರಿದ್ದ ತಂಡಕ್ಕೆ ವಹಿಸಲಾಗಿತ್ತು. ಅದರಲ್ಲಿ ಇವರು ರಚಿಸಿದ ಗಣಪತಿ ಮೂರ್ತಿ ಹಾಗೂ ಕೆತ್ತನೆಗಳು ಸೇರಿರಲಿವೆ.
ಉತ್ತರ ಕನ್ನಡವು ತನ್ನ ವಿಶಿಷ್ಟ ಗಣಪತಿ ಪ್ರತಿಮೆಗಳಿಗೆ ಹೆಸರುವಾಸಿ. ಅವುಗಳಲ್ಲಿ ಹಲವು ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿವೆ. ಈ ಶಿಲ್ಪಕಲೆಯನ್ನು ಕಲಿತಿರುವ ವಿನಾಯಕ ಗೌಡ, ತಮಗೆ ಈ ಅವಕಾಶ ಸಿಕ್ಕಿದ್ದಕ್ಕಾಗಿ ಆನಂದ ವ್ಯಕ್ತಪಡಿಸಿದ್ದಾರೆ.
ಸಾಧಾರಣ ಕುಟುಂಬದಲ್ಲಿ ಜನಿಸಿದ ವಿನಾಯಕ ಗೌಡ ಅವರು ಹೆಚ್ಚು ಶಾಲಾ ಶಿಕ್ಷಣ ಪಡೆದಿಲ್ಲ. ಇವರು ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಶಿಲ್ಪಕಲೆಯ ಬಗ್ಗೆ ಉತ್ಸಾಹ ಹೊಂದಿದ್ದ ಅವರು ಬಿಡುವಿನ ವೇಳೆಯಲ್ಲಿ ಅದನ್ನು ಕಲಿತರು. ನಂತರ 18 ತಿಂಗಳ ಕಾಲ ಶಿಲ್ಪಕಲೆಯನ್ನು ಅಧಿಕೃತವಾಗಿ ಕಲಿತರು. ಪ್ರಸಿದ್ಧ ಶಿಲ್ಪಿಗಳಾದ ಸುರೇಶ್ ಗುಡಿಗಾರ್ ಮತ್ತು ಅಶೋಕ್ ಗುಡಿಗಾರ್ ಅವರಲ್ಲಿ ವಿಶೇಷ ತರಬೇತಿ ಪಡೆದರು. ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ವಿವಿಧ ಕೃತಿಗಳನ್ನು ರಚಿಸಿದರು.
ಅವರಿಗೆ ಈ ಅವಕಾಶ ಸಿಕ್ಕಿದ್ದು ಹೇಗೆ? “ಹುಬ್ಬಳ್ಳಿ ಮೂಲದ ರವೀಂದ್ರ ಆಚಾರ್ ಅವರ ಸಹಾಯದಿಂದ ಅಯೋಧ್ಯೆಯಲ್ಲಿ ಗಣಪತಿ ಪ್ರತಿಮೆಯನ್ನು ಕೆತ್ತಲು ನನಗೆ ಅವಕಾಶ ಸಿಕ್ಕಿತು. ಈ ಗೌರವವನ್ನು ನಾನು ನಿರೀಕ್ಷಿಸಿರಲಿಲ್ಲ” ಎನ್ನುತ್ತಾರೆ ವಿನಾಯಕ. “ನಮಗೆ ರಂಗಮಂಟಪದ ರಚನೆಯನ್ನು ಒಪ್ಪಿಸಲಾಯಿತು. ಅಲ್ಲಿ ನಾವು 68 ಗಣಪತಿಗಳನ್ನು ವಿವಿಧ ವಿನ್ಯಾಸಗಳು ಮತ್ತು ರೂಪಗಳಲ್ಲಿ ಕೆತ್ತಬೇಕಾಗಿತ್ತು. ಕರ್ನಾಟಕದ ಐವರು ಕಲಾವಿದರು- ನಾನು, ಚಿತ್ರದುರ್ಗದ ಕೀರ್ತಿ ಮತ್ತು ಶಿವಮೊಗ್ಗದ ರಾಜೇಶ್ ನಾಲ್ಕು ಗಣಪತಿಗಳನ್ನು ಕೆತ್ತಿದ್ದೇವೆ. ರಮೇಶ್ ಗದಗ, ನಾಗಮೂರ್ತಿ ಗದಗ, ರವೀಂದ್ರ ಆಚಾರ್ ಅವರ ಬಳಿ ಕೆಲಸ ಮಾಡಿದ್ದೇವೆ. ಅವರು ಚಿತ್ರ ಬಿಡಿಸುತ್ತಿದ್ದರು. ನಾವು ಅವುಗಳನ್ನು ಕೆತ್ತಿದ್ದೇವೆ. ನಾನು ಎರಡು ವಿಗ್ರಹಗಳನ್ನು ಕೆತ್ತಿದ್ದೇನೆ. ರಮೇಶ್ ಮತ್ತು ನಾಗಮೂರ್ತಿ ದೇವಸ್ಥಾನದ ವಿನ್ಯಾಸಗಳನ್ನು ಕೆತ್ತಿದ್ದಾರೆ” ಎಂದು ತಿಳಿಸಿದ್ದಾರೆ.
“ಈ ದೇವಾಲಯವು ಎಲ್ಲಾ ಭಾರತೀಯ ಕಲಾ ಪ್ರಕಾರಗಳ ಪರಾಕಾಷ್ಠೆಯಾಗಿದೆ. ದೇವಾಲಯವು ಮೊದಲ ಮಹಡಿಯಲ್ಲಿ ಸುಮಾರು 160 ಕಂಬಗಳನ್ನು ಹೊಂದಿದೆ. ಇದು ಸಿಂಹ ದ್ವಾರ, ರಂಗಮಂಟಪ ಮತ್ತು ಇತರ ದ್ವಾರಗಳನ್ನು ಒಳಗೊಂಡಿದೆ” ಎಂದಿದ್ದಾರೆ.
ಇದನ್ನೂ ಓದಿ: Ram Mandir: ಮುದ್ದು ಮುಖದ ರಾಮ ಲಲ್ಲಾನ ಕೈಯಲ್ಲಿ ಚಿನ್ನದ ಬಿಲ್ಲು, ಬಾಣ!