Site icon Vistara News

Ayodhya Ram Mandir: ರಾಮ ಮಂದಿರದಲ್ಲಿ ಮಂಡಲ ಪೂಜೆಗೆ ರಾಯಚೂರಿನ ವೈದಿಕರ ತಂಡ ಆಯ್ಕೆ

raichur vaidkas in ram mandir

ರಾಯಚೂರು: ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ (Sri Ram Janmdbhumi) ಜನವರಿ 22ರಂದು ಪ್ರಭು ಶ್ರೀರಾಮಚಂದ್ರನ ದೇವಾಲಯ ಲೋಕಾರ್ಪಣೆ (Ayodhya Ram Mandir) ಹಿನ್ನಲೆಯಲ್ಲಿ, ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಡಲು ರಾಯಚೂರಿನ ವೈದಿಕ ಪಂಡಿತರು ಆಯ್ಕೆಯಾಗಿದ್ದಾರೆ.

ಜನವರಿ 23ರಿಂದ 48 ದಿನ ಅಯೋಧ್ಯೆಯಲ್ಲಿ ಬ್ರಹ್ಮ ಕಳಶೋತ್ಸವ ಕಾರ್ಯಕ್ರಮ ನಡೆಯಲಿದ್ದು, ಇದೇ ವೇಳೆ 48 ದಿನಗಳ ಕಾಲ ರಾಮಮಂದಿರದಲ್ಲಿ ವಿಶೇಷ ಮಂಡಲಪೂಜೆ ಜರುಗಲಿದೆ. ಇದನ್ನು ನೆರವೇರಿಸಿಕೊಡಲು ದೇಶದ ನಾನಾ ಕಡೆಗಳಿಂದ ಸುಮಾರು 1500ಕ್ಕೂ ಹೆಚ್ಚು ವೈದಿಕ ಪಂಡಿತರನ್ನು ಆಯ್ಕೆ ಮಾಡಲಾಗಿದೆ. ಇವರಲ್ಲಿ ರಾಯಚೂರು ಜಿಲ್ಲೆಯ ವೈದಿಕ ವಿದ್ವಾಂಸರೂ ಇದ್ದಾರೆ.

ಲಿಂಗಸ್ಗೂರಿನ ಗುರುಗುಂಟಾ ನಿವಾಸಿ ಆದಯ್ಯಸ್ವಾಮಿ ಹಾಗೂ ಸಿಂಧನೂರಿನ ಹಸಮಕಲ್‌ನ ಶ್ರೀಧರಸ್ವಾಮಿ‌ ಆಯ್ಕೆಯಾಗಿದ್ದಾರೆ. ವೈದಿಕ ಸೇವೆಗಾಗಿ ರಾಮಮಂದಿರ ಟ್ರಸ್ಟ್‌ನಿಂದ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿತ್ತು. ಋಗ್ವೇದ, ವೇದಾಧ್ಯಯನ, ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯ ಪಡೆದವರಿಗಾಗಿ ಕರೆಯಲಾಗಿದ್ದ ಅರ್ಜಿಗೆ ಸ್ಪಂದಿಸಿದವರಲ್ಲಿ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಸಿ ಮೌಖಿಕ ಸಂದರ್ಶನ ಮಾಡಿ ಸಂದರ್ಶನದಲ್ಲಿ ಜಿಲ್ಲೆಯ ವೈದಿಕ ಪಂಡಿತರನ್ನು ಆರಿಸಲಾಗಿದೆ.

ಶ್ರೀರಾಮನ ಸಿಂಹಾಸನಾರೋಹಣಕ್ಕಾಗಿ ಯಾಗದ ವಿಧಿಗಳನ್ನು ನಡೆಸುವ ಹಾಗೂ ಮಂಡಲ ಪೂಜೆಯಲ್ಲಿ ಈ ವೈದಿಕರು ಪಾಲ್ಗೊಳ್ಳಲಿದ್ದಾರೆ. ದಕ್ಷಿಣ ಭಾರತದಲ್ಲಿ ಮಂಡಲ ಪೂಜೆ ಸಾಕಷ್ಟು ಜನಪ್ರಿಯವಾಗಿದೆ. ರಾಮ ಮಂದಿರದ ಪೂಜೆಯಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಒಂದು ಕ್ರಮ ಆಚರಣೆಯಾಗುತ್ತಿದೆ.

ರಾಮಮಂದಿರ ಟ್ರಸ್ಟ್‌ನ ಸದಸ್ಯ, ಉಡುಪಿ ಪೇಜಾವರ ಮಠದ ಪೀಠಾಧೀಶ್ವರ ಸ್ವಾಮಿ ವಿಶ್ವಪ್ರಸನ್ನ ತೀರ್ಥರ ನೇತೃತ್ವದಲ್ಲಿ ಮಂಡಲಪೂಜೆ ನಡೆಯಲಿದೆ. ಈ ಪೂಜೆಯಲ್ಲಿ ಪಾಲ್ಗೊಳ್ಳುತ್ತಿರುವುದು ನಮ್ಮ ಸೌಭಾಗ್ಯ ಎಂದು ವೈದಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಧಾರ್ಮಿಕ ವಿಧಿವಿಧಾನ ಆರಂಭ

ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಒಂದೇ ದಿನ ಬಾಕಿ ಉಳಿದಿದ್ದು, ಮಂದಿರದ ಒಳಭಾಗದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಈಗಾಗಲೇ ಆರಂಭಗೊಂಡಿವೆ. 22ರ ಕಾರ್ಯಕ್ರಮಕ್ಕೆ ದೇಗುಲ ಆವರಣದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಬರುವ ಅತಿಥಿಗಳಿಗೆ ದೇವಾಲಯದ ಆವರಣದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ.

ಮಂದಿರ ಹಾಗೂ ಆವರಣವನ್ನು ಹೂವುಗಳಿಂದ ಸಿಂಗಾರಗೊಳಿಸಲಾಗುತ್ತಿದ್ದು, ರಾಮ ಪಥ ಹಾಗೂ ಭಕ್ತಿಪಥವನ್ನು ಸಹ ಹೂವುಗಳಿಂದ ಸಿಂಗಾರಗೊಳಿಸಲಾಗುತ್ತಿದೆ. ರಾಮ ಮಂದಿರದ ಮುಖ್ಯ ರಸ್ತೆ ಅಲಂಕಾರಗೊಂಡಿದೆ. ಇಂದು ಬಾಲ ರಾಮನ ವಿಗ್ರಹಕ್ಕೆ 81 ಬಗೆಯ ಓಷಧಿಯಕ್ತ ಕಳಶ ಜಲ ಪ್ರೋಕ್ಷಣೆ ಆಗಿದ್ದು, ದೇವಾಲಯದ ಶುದ್ಧಿಕಾರ್ಯ ನಡೆಯಲಿದೆ. 22ರ ಮಧ್ಯಾಹ್ನ 12.20ಕ್ಕೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಬಂದಿರುವ ಅತಿಥಿಗಳಿಗೆ ಬಾಲ ರಾಮನ ದರ್ಶನ ಆಗಲಿದೆ.

Exit mobile version