Site icon Vistara News

Ayodhya Ram Mandir: ಅಯೋಧ್ಯೆಯಲ್ಲಿ ಜನಮನ ರಂಜಿಸಿದ ಹೊಸಪೇಟೆ ತಂಡದ ರಾಮಾಯಣ ಬಯಲಾಟ!

bayalata2

ವಿಜಯನಗರ: ಅಯೋಧ್ಯೆ ರಾಮ ಮಂದಿರದ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿರುವ ʼರಾಮೋತ್ಸವʼದಲ್ಲಿ ಹೊಸಪೇಟೆಯ ಖ್ಯಾತ ಬಯಲಾಟ ತಂಡ ʼರಾಮಾಯಣʼ ಬಯಲಾಟವನ್ನು ಪ್ರದರ್ಶಿಸಿ ಅಲ್ಲಿ ನೆರೆದ ಭಕ್ತಾದಿಗಳ ಜನಮನ ಸೂರೆಗೊಂಡಿತು.

ಮರ್ಯಾದಾಪುರುಷ ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿಯಲ್ಲಿ ಕನ್ನಡ ಕಂಪು ಬೀರಿದೆ. ದೇವರ ನಾಡಲ್ಲಿ ಉತ್ತರ ಕರ್ನಾಟಕದ ʼಗಂಡುಕಲೆʼ ಎನಿಸಿಕೊಂಡ ಬಯಲಾಟ ಪ್ರದರ್ಶನವಾಗಿದೆ. ಹೊಸಪೇಟೆಯ 15 ಕಲಾವಿದರು ಇರುವ ತಂಡ ಇಲ್ಲಿ ಮೂರು ದಿನಗಳಿಂದ ಪ್ರತಿದಿನ ʼಸಂಪೂರ್ಣ ರಾಮಾಯಣʼ ಪ್ರದರ್ಶನ ನೀಡುತ್ತಿದೆ.

ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆ ಪ್ರಯುಕ್ತ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ದೇಶದ ನಾನಾ ಕಡೆಗಳಿಂದ ಬಂದ ಕಲಾ ತಂಡಗಳು ಕಲಾವೈವಿಧ್ಯವನ್ನು ಪ್ರದರ್ಶಿಸುತ್ತಿವೆ. ಇದರಲ್ಲಿ ರಾಮಾಯಣ ಬಯಲಾಟ ಎಲ್ಲರ ಮೆಚ್ಚುಗೆ ಪಡೆಯಿತು.

ಹೊಸಪೇಟೆಯ ಕಿಷ್ಕಿಂಧೆ ಭಾಗದಿಂದ ತೆರಳಿದ್ದ ಕಲಾತಂಡ ಕೊರೆವ ಚಳಿಯಲ್ಲೂ ತಮ್ಮ ಅದ್ಭುತ ಪ್ರತಿಬೆಯನ್ನು ಪ್ರದರ್ಶಿಸಿತು. ಇಂದು ನಾಲ್ಕನೇ ಪ್ರದರ್ಶನ ‌ನೀಡಿ ತಂಡ ರಾಜ್ಯಕ್ಕೆ ವಾಪಸ್ ಆಗಲಿದೆ. ಪ್ರತಿ ಪ್ರದರ್ಶನದಲ್ಲೂ ಕನ್ನಡದಲ್ಲೇ ಹಾಡು ಹಾಗೂ ಸಂಭಾಷಣೆಗಳನ್ನು ಪ್ರದರ್ಶಿಸಲಾಗಿದೆ. ಸಂಪೂರ್ಣ ಹಿಂದಿಮಯವಾದ ವಾತಾವರಣದಲ್ಲೂ ಭಕ್ತಾದಿಗಳು ಕರ್ನಾಟಕದ ಈ ಕಲೆಯನ್ನು ಆಸ್ವಾದಿಸಿದ್ದಾರೆ.

“ಅಯೋಧ್ಯೆಯಲ್ಲಿ ದೇಶದ ವಿವಿಧ ಭಾಗದಿಂದ ಕಲಾವಿದರು ಬಂದಿದ್ದಾರೆ. ಡಯಲಾಗ್‌ಗಳು ಕನ್ನಡದಲ್ಲೇ ಇದ್ದರೂ ಮನರಂಜನೆಗೆ ಕೊರತೆ ಇರಲಿಲ್ಲ. ಬಯಲಾಟ ತಂಡಕ್ಕೆ ಅವಕಾಶ ಸಿಕ್ಕಿದ್ದರಿಂದ ಕನ್ನಡ ಭಾಷೆ ದೇಶದ ಗಮನ ಸೆಳೆಯಿತು. ನಮ್ಮಲ್ಲಿ 12 ಜನರು ಮುಖ್ಯ ಕಲಾವಿದರು, 4 ಜನ ಸಹ ಕಲಾವಿದರು ಇದ್ದೇವೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಒಂದೇ ವೇದಿಕೆ ಕಲ್ಪಿಸಿದ್ದಾರೆ. ಸಿಕ್ಕ ಅವಕಾಶ ಬಳಕೆ ಮಾಡಿಕೊಂಡು ಮೂರು ದಿನ ಉತ್ತಮ ಪ್ರದರ್ಶನ ನೀಡಿದ್ದೇವೆ. ಕಲೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ ಭಾರತ ಸರ್ಕಾರಕ್ಕೆ ಧನ್ಯವಾದ” ಎಂದು ಸಂಪೂರ್ಣ ರಾಮಾಯಣ ತಂಡದ ಕಲಾವಿದ ಸತ್ಯನಾರಾಯಣ, ರಾಘವೇಂದ್ರ ಮನದಾಳ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಗೆ ಆಹ್ವಾನ

Exit mobile version