ಬೆಂಗಳೂರು: ಆಗಸ್ಟ್ 13ರಿಂದ 15ರವರೆಗೆ ರಾಜ್ಯದೆಲ್ಲೆಡೆ ಮತ್ತು ದೇಶದಾದ್ಯಂತ ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ (Azadi ka Amritmahotsav) ಹಾರಾಡಲಿದೆ. ಅಗಸ್ಟ್ 13ರ ಬೆಳಗ್ಗೆ ರಾಷ್ಟ್ರಧ್ವಜ ಹಾರಿಸಲು ಹಾಗೂ 15ರ ಸಂಜೆ ಧ್ವಜವನ್ನು ಇಳಿಸಲು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ರಾಜ್ಯದ ಜನತೆಗೆ ಮನವಿ ಮಾಡಿದರು.
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಭಾನುವಾರ (ಜುಲೈ 31) ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದ ಮುಂದೆ ರಾಷ್ಟ್ರಧ್ವಜ ಮಾರಾಟ ಮಳಿಗೆ ಉದ್ಘಾಟಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿರುವ ಸಂದರ್ಭದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು (ಆಜಾದಿ ಕಾ ಅಮೃತ ಮಹೋತ್ಸವ್) ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೃಹತ್ ಪ್ರಮಾಣದಲ್ಲಿ ಈ ಸಂಭ್ರಮವನ್ನು ಆಚರಿಸಲು ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಬೇಕೆಂದು ಇಲ್ಲಿನ ರಾಜ್ಯ ಸರ್ಕಾರ ನಿರ್ಧರಿಸಿದೆ. ಅದೇ ರೀತಿಯಲ್ಲಿ ಬಿಜೆಪಿ ಪಕ್ಷವು ಲಕ್ಷಾಂತರ ಬಿಜೆಪಿ ಕಾರ್ಯಕರ್ತರನ್ನು ಈ ಕಾರ್ಯಕ್ಕಾಗಿ ಸಿದ್ಧಗೊಳಿಸಿದೆ ಎಂದು ರವಿಕುಮಾರ್ ಹೇಳಿದರು.
ನಮ್ಮೆಲ್ಲ ಕಾರ್ಯಕರ್ತರು ಮತ್ತು ಸಾರ್ವಜನಿಕರು ರಾಷ್ಟ್ರಧ್ವಜ ಖರೀದಿಸಿ ತಮ್ಮ ಮನೆಯ ಮೇಲೆ ಹಾರುವಂತೆ ಮಾಡಬೇಕು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪಕ್ಷದ ಎಲ್ಲ 39 ಸಂಘಟನಾ ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರಧ್ವಜವನ್ನು ಮಾರಾಟ ಮಾಡಲಾಗುವುದು ಎಂದು ರವಿಕುಮಾರ್ ತಿಳಿಸಿದರು.
ಅಗಸ್ಟ್ 9ರಿಂದ 15ರವರೆಗೆ ನಮ್ಮೆಲ್ಲ ಬೂತ್, ಹೋಬಳಿ, ತಾಲೂಕು ಕೇಂದ್ರಗಳಲ್ಲಿ ಸಾವಿರಾರು ಜನರು ಸೇರಿ ದೇಶಭಕ್ತಿಯ ಪಥಸಂಚಲನ “ಪ್ರಭಾತ್ ಫೇರಿ” ಮಾಡಬೇಕು. ಈ ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆ, ವಂದೇ ಮಾತರಂ ಮತ್ತಿತರ ಗೀತೆಗಳನ್ನು ಪಠಿಸಲಾಗುವುದು. ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಮಾಡಲಾಗುವುದು. ಅಲ್ಲದೆ, ಸ್ವಾತಂತ್ರ್ಯ ಹೋರಾಟಗಾರರ ಪುತ್ಥಳಿ ಹಾಗೂ ವೃತ್ತದ ಅಲಂಕಾರ ಮಾಡುವುದಾಗಿ ತಿಳಿಸಿದರು. ಸ್ವಾತಂತ್ರ್ಯ ಹೋರಾಟಗಾರರ ವೀರಗಾಥೆಯನ್ನು ದೇಶಾದ್ಯಂತ ಪಸರಿಸುವ ಉದ್ದೇಶದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು.
ಸಚಿವ ಎಸ್.ಟಿ. ಸೋಮಶೇಖರ್ ಮಾತನಾಡಿ, ಪ್ರಧಾನಮಂತ್ರಿ ಕರೆಕೊಟ್ಟ ಬಳಿಕ ಈ ಕಾರ್ಯಕ್ರಮದ ಜವಾಬ್ದಾರಿಯನ್ನು ರವಿಕುಮಾರ್ ಹೆಗಲಿಗೆ ನೀಡಲಾಗಿದೆ. ಅವರನ್ನು ಸಂಚಾಲಕರನ್ನಾಗಿ ಮಾಡುವ ಮೂಲಕ ಪಕ್ಷದ ಅಧ್ಯಕ್ಷರು ಕಾರ್ಯಕ್ರಮದ ಯಶಸ್ವಿಗೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಇದೇ 9ರಿಂದ 15ರವರೆಗೆ ಆಯೋಜಿಸಲಾಗುವುದು ಎಂದು ತಿಳಿಸಿದರು. ಈ ಬೃಹತ್ ಕಾರ್ಯಕ್ರಮದ ಯಶಸ್ವಿಗಾಗಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದರು. ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೇಕಲ್ಲು ಉಪಸ್ಥಿತರಿದ್ದರು.
ಇದನ್ನೂ ಓದಿ: Virtual Tour: ದೆಹಲಿಯ PM ಸಂಗ್ರಹಾಲಯದಲ್ಲಿದೆ ಕನ್ನಡದ ʼನಮಸ್ತೆʼ