ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಿನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ ಹಿನ್ನೆಲೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದ ಬಳಿ ರೈತರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಬಿ.ಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.
ʼಸಿದ್ದರಾಮಯ್ಯ ಅವರು ತಾವು ಮುಖ್ಯಮಂತ್ರಿ ಆಗಬೇಕು ಎಂಬ ಹಂಬಲದಲ್ಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಸಿಎಂ ಸ್ಥಾನದಲ್ಲಿ ಕೂರಬೇಕೆಂಬ ಆಸೆಯಲ್ಲಿದ್ದಾರೆ. ಹಾಗಾಗಿ ಅವರು ಪದೇಪದೇ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನದಿಂದ ರಾಜಿನಾಮೆ ನೀಡಬೇಕು ಎಂದು ಹೇಳುತ್ತಿರುತ್ತಾರೆʼ ಎಂದು ವ್ಯಂಗ್ಯ ಮಾಡಿದರು.
ಸಚಿವ ಅಶ್ವತ್ಥನಾರಾಯಣ ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಾದ ಕಾರಣಕ್ಕೆ ಮುಖ್ಯಮಂತ್ರಿ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದ ಕಾಂಗ್ರೆಸ್ ಮುಖಂಡರ ವಿರುದ್ಧ ಸಚಿವ ಬಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಬಿ.ಸಿ ಪಾಟೀಲ್ ಕಾಂಗ್ರೆಸ್ ಮುಖಂಡರನ್ನು ʼಸಚಿವ ಅಶ್ವತ್ಥನಾರಾಯಣ ಸಂಬಂಧಿಕರು ಯಾರೋ ತಪ್ಪು ಮಾಡಿದರು ಎಂದು ಅಶ್ವತ್ಥ ನಾರಾಯಣ ಅವರನ್ನು ದೂರುವುದು ಸರಿಯಲ್ಲ. ಕಳೆದ ಬಾರಿ ಕೆ.ಜೆ ಜಾರ್ಜ್ ವಿರುದ್ಧ ಪ್ರಕರಣ ದಾಖಲಾದಾಗ ಸಿದ್ದರಾಮಯ್ಯ ರಾಜಿನಾಮೆ ಕೊಟ್ಟಿದ್ದರಾ? ಎಂದು ಪ್ರಶ್ನಿಸಿದ್ದಾರೆ. ಇದು ರಾಜ್ಯದ ಆಡಳಿತ ವ್ವಸ್ಥೆಯನ್ನು ಅಸ್ಥಿರಗೊಳಿಸಲು ಪಟ್ಟಭದ್ರ ಹಿತಾಶಕ್ತಿಗಳು ನಡೆಸುತ್ತಿರುವ ಹುನ್ನಾರ ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಅಮಿತ್ ಷಾ ಭೆಟಿಯ ಬಗ್ಗೆ ಮಾತನಾಡಿದ ಪಾಟೀಲ್, ʼಅಮೀತ್ ಷಾ ಅವರು ಬಂದಾಗ ಸಿಎಂ ಬದಲಾವಣೆ ಆಗುವುದಿಲ್ಲ ಎಂದು ಹೇಳಿ ಹೋಗಿದ್ದಾರೆ. ಸಿಎಂ ಬದಲಾವಣೆ ಇಲ್ಲವೆಂದು ಈಗಾಗಲೆ ಅರುಣಸಿಂಗ್, ಬಿಜೆಪಿ ರಾಜ್ಯಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಹೇಳಿರುವುದನ್ನುʼ ತಿಳಿಸಿದ್ದಾರೆ.
ಯತ್ನಾಲ್ ಅವರು ಮುಖ್ಯಮಂತ್ರಿ ಬದಲಾವನೆ ಸಾಧ್ಯತೆಯಿದೆ ಎಂದು ಹೆಳಿಕೆ ನೀಡಿದ್ದರ ವಿರುದ್ಧ ಬಿ.ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ. ʼಯತ್ನಾಳ್ ಅವರು ಹೈಕಮಾಂಡಾ? ಯತ್ನಾಳ್ ಅವರು ಅಮಿತ್ ಷಾ ಅವರ ಲೆವೆಲ್ ಅಲ್ಲಿದ್ದಾರಾ? ಅವರು ಹೇಳಿದಕ್ಕೆ ಬದಲಾವಣೆ ಆಗುವುದಿಲ್ಲ. ಅಮಿತ್ ಷಾ ಅವರು ಹೇಳಿದರೆ ಅದಕ್ಕೊಂದು ಬೆಲೆಯಿದೆʼ ಎಂದಿದ್ದಾರೆ.
ಸಚಿವ ಸಂಪುಟದಲ್ಲಿ ಕಾಲಿ ಇರುವ ಸ್ಥಾನಗಳ ಬಗ್ಗೆಯೂ ಬಿ.ಸಿ ಪಾಟೀಲ್ ಅಭಿಪ್ರಾಯ ನೀಡಿದ್ದಾರೆ. ʼ ಸಂಪುಟದಲ್ಲಿ ಇನ್ನೂ ನಾಲ್ಕೈದು ಸಚಿವ ಸ್ಥಾನಗಳು ಖಾಲಿ ಇವೆ. ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಯಾವಾಗ ವಿಸ್ತರಣೆ ಮಾಡುತ್ತಾರೋ ಅದು ಅವರ ಪರಮಾಧಿಕಾರʼ ಎಂದು ಸಿಎಂ ಬೊಮ್ಮಾಯಿ ಅವರ ಬಗ್ಗೆ ಭರವಸೆ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ: ಹಾವೇರಿ ‘ಹೊಂಡ’ ಸಿಟಿ; ರಸ್ತೆಯಲ್ಲಿ ಗಾಡಿ ಪಲ್ಟಿ!