Site icon Vistara News

Savarkar Samagra-6: ಸಮಾಜ‌ ಕಟ್ಟುವುದು Thankless Job: ಬಿ.ಎಲ್. ಸಂತೋಷ್

Savarkar Samagra-6 book release in bengaluru

Savarkar Samagra-6 book release in bengaluru

ಬೆಂಗಳೂರು: ಸಮಾಜವನ್ನು ಕಟ್ಟುವ ಕೆಲಸಕ್ಕೆ ಯಾವುದೇ ಧನ್ಯವಾದ, ಅಭಿನಂದನೆ ಸಿಗುವುದಿಲ್ಲ, ಇದು Thankless Job (ಕೃತಜ್ಞತೆಯಿಲ್ಲದ ಕೆಲಸ) ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.‌ ಸಂತೋಷ್ ತಿಳಿಸಿದರು.

ಸಾವರ್ಕರ್ ಸಾಹಿತ್ಯ ಸಂಘದ ವತಿಯಿಂದ ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಆಯೋಜಿಸಿದ್ದ ಸಾವರ್ಕರ್ ಸಮಗ್ರ ಸಂಪುಟ-6 ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲರಿಗೂ ಒಪ್ಪಿಗೆ ಆಗುವ ಮಾರ್ಗವನ್ನು ಸಾವರ್ಕರ್ ಹೇಳಲಿಲ್ಲ. ಸಾವರ್ಕರ್ ರೀತಿ ಜೀವಿಸಬೇಕಾದರೆ ನಮ್ಮ ಬದುಕನ್ನು ಸುಟ್ಟುಕೊಳ್ಳಬೇಕಾಗುತ್ತದೆ. ಅದಕ್ಕಾಗಿಯೇ ಅನೇಕರು ಸಾವರ್ಕರರನ್ನು ಕಡೆಗಣಿಸಿದರು. ತಾವು ಸಾವರ್ಕರ್ ಅವರನ್ನು ಒಪ್ಪಿಕೊಂಡರೆ ಅವರ ರೀತಿಯೇ ಇರಬೇಕಾಗುತ್ತದೆ ಎಂದು ಅವರನ್ನು ತುಳಿಯುವ ಕೆಲಸವನ್ನು ಕಾಂಗ್ರೆಸ್ ಮಾಡಿತು. ಅನೇಕ ಅಯೋಗ್ಯರಿಗೆ ಸತ್ತ ನಂತರವಾದರೂ ಗೌರವ ಸಿಗುತ್ತದೆ. ಆದರೆ ಸಮಕಾಲೀನವಾಗಿ ಸಾವರ್ಕರರಿಗೆ ಆ ಗೌರವವೂ ಸಿಗಲಿಲ್ಲ ಎಂದು ಹೇಳಿದರು.

ಕ್ರಾಂತಿಕಾರಿಗಳನ್ನು, ದೇಶಭಕ್ತರನ್ನು ಒಂದು ಸಿದ್ಧಾಂತಕ್ಕೆ ಬ್ರ್ಯಾಂಡ್ ಮಾಡುವ ಕೆಲಸ ಮಾಡಲಾಗುತ್ತಿದೆ. ಆದರೆ, ಈ‌ ತಂತ್ರವನ್ನು ಶಾಶ್ವತವಾಗಿ ಮಾಡಲು ಸಾಧ್ಯವಿಲ್ಲ. ಭಾರತ ಬಂಜೆಯಲ್ಲ. ಸಾವರ್ಕರ್ ಅವರನ್ನು ಡಿಕ್ಟೇಟರ್, ಹಿಟ್ಲರ್ ಅನುಯಾಯಿ ಎಂದು ಬಿಂಬಿಸಲಾಯಿತು. ಅದೇ ಸಾವರ್ಕರರ ಜನ್ಮದಿನದಂದು, ಪ್ರಜಾಪ್ರಭುತ್ವದ ದೇಗುಲ ಎನ್ನುವ ಸಂಸತ್ ಭವನ ಉದ್ಘಾಟನೆ ಆಗುತ್ತಿರುವುದು ಇತಿಹಾಸವನ್ನು ಸರಿಪಡಿಸುವ ಕೆಲಸ. ಕರ್ತವ್ಯ ಪಥದಲ್ಲಿ ಏನೋ ಒಂದು ಗುರುತನ್ನು ತೆಗೆಸಿ ನೇತಾಜಿ ಸುಭಾಷ್‌ಚಂದ್ರ ಬೋಸ್ ಪ್ರತಿಮೆ ಸ್ಥಾಪಿಸಲಾಗಿದೆ, ಶಿವಾಜಿ‌ ಮಹಾರಾಜರ ನೌಕಾ ಗುರುತನ್ನು ನೌಕಾ ದಳಕ್ಕೆ ಸೇರಿಸಲಾಗಿದೆ ಎಂದು ತಿಳಿಸಿದರು.

ಸಾವರ್ಕರ್ ತಮ್ಮ ಕಾರ್ಯಕ್ಕೆ ಯಾರಾದರೂ ಮೆಚ್ಚಿಕೊಳ್ಳಬೇಕು ಎಂದು ಯಾವಾಗಲೂ ಬಯಸಿರಲಿಲ್ಲ. ಅವರು ಸಮಾಜದ ಅನೇಕ ಕುರೀತಿಗಳನ್ನು ಟೀಕಿಸಿ, ಸುಧಾರಿಸಲು ಮುಂದಾದರು. ಇಂದು ಅನೇಕರು ಬಂಡಾಯ ಎಂದು ಬೋರ್ಡ್ ಹಾಕಿಕೊಳ್ಳುವವರಿಗಿಂತಲೂ ಹೆಚ್ಚಿನ ಬಂಡಾಯ ಸಾವರ್ಕರ್ ಮಾಡಿದ್ದರು. ಸಮಾಜದ ಅನೇಕ ಕುರೀತಿಗಳನ್ನು ಟೀಕಿಸಿ, ಸುಧಾರಿಸಲು ಸಾವರ್ಕರ್ ಮುಂದಾದರು. ಇಂದು ಅನೇಕರು ಬಂಡಾಯ ಎಂದು ಬೋರ್ಡ್ ಹಾಕಿಕೊಳ್ಳುವವರಿಗಿಂತಲೂ ಹೆಚ್ಚಿನ ಬಂಡಾಯ ಸಾವರ್ಕರ್ ಮಾಡಿದ್ದರು ಎಂದು ಹೇಳಿದರು.

ಸಾವರ್ಕರ್ ಜನ್ಮದಿನದಂದೇ ನೂತನ ಸಂಸತ್ ಭವನ ಉದ್ಘಾಟನೆ ಸಂತಸದ ವಿಚಾರ: ಸಾತ್ಯಕಿ ಸಾವರ್ಕರ್

ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರು ಮಾತನಾಡಿ, ಕರ್ನಾಟಕದಲ್ಲಿ ರಾಜಕೀಯ ವ್ಯವಸ್ಥೆ ಬದಲಾವಣೆ ಆಗುತ್ತಿದೆ. ಕೆಲವು ದೇಶವಿರೋಧಿಗಳು ಮುಂಚೂಣಿಗೆ ಬರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಸರ್ಕಾರದ ಕುರಿತು ಟೀಕಿಸಿದರು.

ಸಾವರ್ಕರ್ ಜನ್ಮದಿನದಂದೇ ನೂತನ ಸಂಸತ್ ಭವನವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡುತ್ತಿರುವುದು ಅತ್ಯಂತ ಸಂತಸದ ವಿಚಾರ ಹಾಗೂ ಸಾವರ್ಕರ್ ವಿರೋಧಿಗಳಿಗೆ ಕಪಾಳಮೋಕ್ಷ. ರಾಹುಲ್ ಗಾಂಧಿ ಅನೇಕ ಸುಳ್ಳುಗಳನ್ನು ಸಾವರ್ಕರ್ ಕುರಿತು ಹೇಳಿದ್ದಾರೆ. ಅದಕ್ಕಾಗಿ ರಾಹುಲ್‌ ಗಾಂಧಿ‌ ವಿರುದ್ಧ ಮಾನಹಾನಿಕರ ಪ್ರಕರಣ ದಾಖಲಿಸಿದ್ದೇನೆ ಎಂದು ಹೇಳಿದರು.

ಗೋಪಾಲಕೃಷ್ಣ ಗೋಖಲೆ ಅವರೊಂದಿಗಿನ ಭಿನ್ನಮತದಿಂದಾಗಿ ಅವರ ಮೇಲೆ ದಾಳಿ ನಡೆಸಲು ಹೋಗುತ್ತಿದ್ದವರನ್ನು ತಡೆದವರು ಸಾವರ್ಕರ್. ಮೊಹಮ್ಮದ್ ಅಲಿ ಜಿನ್ನಾ ಮೇಲೆ ದಾಳಿ ಮಾಡುವುದನ್ನು ವಿರೋಧಿಸಿ ಅವರು ಪತ್ರ ಬರೆದಿದ್ದರು. ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ್ದಕ್ಕೆ ನಾಥೂರಾಮ್ ಗೋಡ್ಸೆಯನ್ನು ಖಂಡಿಸಿದ್ದರು ಎಂದು ತಿಳಿಸಿದರು.

ಸಾವರ್ಕರ್ ಅವರನ್ನು ಮಹಾಪುರುಷರ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು ಎಂದು ಈಗಾಗಲೇ ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇವೆ. ಇದರಿಂದ ಸಾವರ್ಕರ್ ವಿಚಾರಕ್ಕೆ ಬಹುದೊಡ್ಡ ಜಯ ಸಿಗುತ್ತದೆ. ಈಗ ಸ್ಥಿತಿ ಮತ್ತೆ 15-16ನೇ ಶತಮಾನದ ಸ್ಥಿತಿ ಎದುರಾಗಿದೆ ಎಂದು ಹೇಳಿದರು.

ಲೇಖಕ, ಸಾವರ್ಕರ್ ಸಮಗ್ರದ ಪ್ರಧಾನ ಸಂಪಾದಕ ಡಾ. ಜಿ.ಬಿ. ಹರೀಶ ಮಾತನಾಡಿ, ಸಾವರ್ಕರ್ ಸಾಹಿತ್ಯವನ್ನು ನಿರ್ಲಕ್ಷಿಸಲು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಕಾರಣರಾದರು. ತಮ್ಮನ್ನು ತಾವು ವಿಜೃಂಭಿಸಿಕೊಳ್ಳಲು ಸಾವರ್ಕರ್‌ರನ್ನು ದಮನ ಮಾಡಿದರು. ರಾಜಕೀಯವಾಗಿಯೂ ನೆಹರದು ಅವರಿಗೆ ಸೆಡ್ಡು‌ ಹೊಡೆಯಬಲ್ಲವರಾಗಿದ್ದವರು ಸಾವರ್ಕರ್ ಮಾತ್ರ. ಭಾರತವು ಸೆಲ್ಯುಲರ್ ಇಂಡಿಯಾ ಎಂದು ಹೇಳುತ್ತಾರಾದರೂ ದೇಶದ ಪ್ರಮುಖ ಘಟನಾವಳಿಗಳ ಸಂದರ್ಭದಲ್ಲಿ ಕರ್ನಾಟಕದಲ್ಲಿ ಒಂದೂ ಕಾದಂಬರಿ ಬರಲಿಲ್ಲ. ರಾಮಜನ್ಮಭೂಮಿ ಹೋರಾಟದ ಸಂದರ್ಭದಲ್ಲಿ ಇಟ್ಟಿಗೆಗಿಂತ ಜೀವ ಪವಿತ್ರ ಎಂದು ಲಂಕೇಶ್ ಬರೆದರು. ಇಲ್ಲಿ ಮುಸ್ಲಿಂ ಜೀವವಷ್ಟೆ ಅಲ್ಲ, ಹಿಂದು ಜೀವವೂ ಮುಖ್ಯ ಎಂದು ತಿಳಿಸಿದರು.

ಲೇಖಕಿ ಹಾಗೂ 6ನೇ ಸಂಪುಟದ ಅನುವಾದಕಿ ಡಾ.‌ಎಸ್. ಆರ್.‌ ಲೀಲಾ ಮಾತನಾಡಿ, ಕೆಲವರು ಇತಿಹಾಸ ರಚನೆ ಮಾಡುತ್ತಾರೆ, ಕೆಲವರು ಇತಿಹಾಸ ನಿರ್ಮಿಸುತ್ತಾರೆ. ಆದರೆ ಇತಿಹಾಸವನ್ನು ನಿರ್ಮಿಸಿ, ರಚಿಸುವ ಕಾರ್ಯವನ್ನೂ ಮಾಡಿದವರು ವೀರ ಸಾವರ್ಕರ್. ಅಲೆಕ್ಸಾಂಡರ್‌ನಿಂದ ಬ್ರಿಟಿಷರವರೆಗಿನ ಸಂಪೂರ್ಣ ಇತಿಹಾಸವನ್ನು ಸಾವರ್ಕರ್ ಹಿಂದು ದೃಷ್ಟಿಯಲ್ಲಿ ಬರೆದರು. ಆದರೆ, ದೇಶವನ್ನು ಒಡೆಯಬೇಕು ಎಂಬ ಮನಸ್ಥಿತಿ ಇಂದೂ ಮುಂದುವರಿದಿದೆ ಎಂದಋು.

ಪಾಕಿಸ್ತಾನ ಪ್ರತ್ಯೇಕವಾದಾಗ, ಪಾಪ್ಯುಲೇಶನ್ ಎಕ್ಸ್‌ಚೇಂಜ್ ಆಗಿಬಿಡಲಿ ಎಂದು ಪ್ರಖರವಾಗಿ ಡಾ.ಬಿ.ಆರ್‌.ಅಂಬೇಡ್ಕರ್ ಅವರು ಹೇಳಿದ್ದರು. ಆದರೆ, ಅದರತ್ತ ಯಾರೂ ಗಮನ‌ಕೊಡದ‌ ಕಾರಣಕ್ಕೆ ಇನ್ನೂ ನಾವು ಈ ವಿಷವರ್ತುಲದಲ್ಲಿ ಸಿಕ್ಕಿಕೊಂಡಿದ್ದೇವೆ. ಹೊರಗಿನ ಶತ್ರುಗಳಿಗಿಂತಲೂ ಒಳಗಿರುವವರೇ ಅತಿ ಅಪಾಯಕಾರಿ ಎನ್ನುವುದನ್ನು ತಿಳಿಯಬೇಕು ಎಂದು ಹೇಳಿದರು.

ದೇಶದ ವಿರುದ್ಧ ಅಸ್ತ್ರ ಎತ್ತುವವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒಬ್ಬರು ಹೇಳಿದ್ದಾರೆ. ಆದರೆ, ಈ ದೇಶವನ್ನು ದ್ವೇಷಿಸುವವರನ್ನು ಶಿಕ್ಷಿಸಲು ಆಗದೇ ಇರುವುದು ಬೇಸರ. ಈ‌ ದೇಶದಲ್ಲಿ ನಮ್ಮತನವನ್ನು ಉಳಿಸಿಕೊಳ್ಳಲು ಸಾವರ್ಕರ್ ವಿಚಾರಗಳು ಅನಿವಾರ್ಯ ಎಂದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ : 81ರ ವಯಸ್ಸಿನಲ್ಲಿಯೂ ಕಲರಿ ಪಾಠ ಮಾಡುತ್ತಿದ್ದಾರೆ ಮೀನಾಕ್ಷಿ ಅಮ್ಮ!

ಮಿಥಿಕ್ ಸೊಸೈಟಿಯ ಗೌರವ ಕಾರ್ದರ್ಶಿ ವಿ.‌ನಾಗರಾಜ್ ಮಾತನಾಡಿ, ಈ ರೀತಿಯ ವ್ಯಕ್ತಿತ್ವ ನಮ್ಮ ನಡುವೆ ಬದುಕಿದ್ದರೇ ಎಂದು ಎನ್ನಿಸುವಷ್ಟು ಮಹಾನ್ ವ್ಯಕ್ತಿ ಸಾವರ್ಕರ್. ಆದರೆ, ಅವರ ವಿಚಾರಗಳನ್ನು ಹೊರಗೆ ಬರದಂತೆ ತಡೆಯಲಾಯಿತು. ಈಗ ಸಾವರ್ಕರ್ ವಿಚಾರಗಳು ಹೊರಬರುತ್ತಿವೆ ಎನ್ನುವುದು ಸಂತೋಷ. ಸಾವರ್ಕರ್ ಎಲ್ಲ‌ ವಿಚಾರಗಳನ್ನೂ ಆಳವಾಗಿ ಅಧ್ಯಯನ ಮಾಡಿ ಪ್ರಸ್ತುತಪಡಿಸಿದ್ದಾರೆ. ಈ ದೇಶದ ಜನಮಾನಸವನ್ನು ಎಚ್ಚರಿಸಬೇಕಾದರೆ, ಹಿಂದು ಸಮಾಜ ಹೇಡಿಯಲ್ಲ, ಸೋತ ಸಮಾಜವಲ್ಲ ಎನ್ನುವ ಜಾಗೃತಿ ಉಂಟುಮಾಡಬೇಕು ಎಂದು ಸಾವರ್ಕರ್ ತಿಳಿದಿದ್ದರು ಎಂಬುವುದಾಗಿ ಹೇಳಿದರು.

ಸತ್ವಹೀನವಾಗಿರುವ ಹಿಂದು ಸಮಾಜದ ಶೌರ್ಯವನ್ನು ಜಗತ್ತಿಗೆ ತಿಳಿಸುವುದೊಂದೇ ಪರಿಹಾರ ಎಂದು ಹೇಳಿದ ವಿವೇಕಾನಂದರು ಅದನ್ನೇ ವಿದೇಶದಲ್ಲಿ ಮಾಡಿದರು. ಅದೇ ಕಾರ್ಯವನ್ನು ಸಾವರ್ಕರ್ ಸಹ ಮಾಡಿದರು ಎಂದು ವಿ.‌ನಾಗರಾಜ್ ಹೇಳಿದರು.

ಸಾವರ್ಕರ್ ಸಾಹಿತ್ಯ ಸಂಘದ ಹರ್ಷ ಸಮೃದ್ಧ, ಲೇಖಕ ರೋಹಿತ್ ಚಕ್ರತೀರ್ಥ, ಪತ್ರಕರ್ತ ರಮೇಶ ದೊಡ್ಡಪುರ ಉಪಸ್ಥಿತರಿದ್ದರು.

Exit mobile version