ರಾಯಚೂರು: ಮಂತ್ರಾಲಯ ಮಠಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರು (B. S. Yediyurappa) ಕುಟುಂಬ ಸಮೇತರಾಗಿ ಗುರುವಾರ (ಆ.11) ಆಗಮಿಸಿದ್ದಾರೆ. ಗುರುಸಾರ್ವಭೌಮ ರಾಘವೇಂದ್ರ ತೀರ್ಥ ಯತಿಗಳ 351ನೇ ಆರಾಧನೆ ಹಿನ್ನೆಲೆಯಲ್ಲಿ ಮಂತ್ರಾಲಯ ಮಠಕ್ಕೆ ಕುಟುಂಬ ಸಮೇತ ಆಗಮಿಸಿರುವುದಾಗಿ ಸಂಸದ ಬಿವೈ ರಾಘವೇಂದ್ರ ಹೇಳಿದರು.
ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಆಶೀರ್ವಾದ ಪಡೆದ ಬಿಎಸ್‌ವೈ ಕುಟುಂಬ, ಶ್ರೀಗಳ ಜತೆ ಕೆಲಹೊತ್ತು ಮಾತುಕತೆ ನಡೆಸಿದರು. ಶ್ರೀಗಳು ಮಾತನಾಡಿ, ʻʻ2009ರಲ್ಲಿ ಭೀಕರ ಪ್ರವಾಹ ಬಂದಿತ್ತು. ಈ ವೇಳೆ ನೀವು ಸಿಎಂ ಆಗಿದ್ದಾಗ ಸಾಕಷ್ಟು ಪರಿಹಾರ ನೀಡಿದ್ದೀರಿ. ಆಗ ಕರ್ನಾಟಕ ಹಾಗೂ ಮಂತ್ರಾಲಯ ಸಂಪರ್ಕ ಸೇತುವೆ ನಿರ್ಮಿಸಿದ್ದಿರಿ. ನಿಮಗೆ, ನಿಮ್ಮ ಕುಟುಂಬಕ್ಕೆ ರಾಯರು ಆಯಸ್ಸು, ಐಶ್ವರ್ಯ ಕಲ್ಪಿಸಲಿʼʼ ಎಂದು ಆಶೀರ್ವಾದ ನೀಡಿದ್ದಾರೆ. ಬಿಎಸ್‌ವೈ, ಸಂಸದ ರಾಘವೇಂದ್ರ ಹಾಗೂ ವಿಜಯೇಂದ್ರಗೆ ಶಾಲು ಹೊದಿಸಿ, ಮಂತ್ರಾಕ್ಷತೆ ನೀಡಿ ಶ್ರೀಗಳು ಆಶೀರ್ವದಿಸಿದ್ದಾರೆ.
ಇದನ್ನೂ ಓದಿ | B. S. Yediyurappa | ಮಂತ್ರಾಲಯ ಮಠಕ್ಕೆ ಕುಟುಂಬಸ್ಥರ ಜತೆ ಆಗಮಿಸಿದ ಮಾಜಿ ಸಿಎಂ ಬಿಎಸ್‌ವೈ
ರಾಯರ ದರ್ಶನ ಬಳಿಕ ಸಂಸದ ಬಿವೈ ರಾಘವೇಂದ್ರ ಮಾತನಾಡಿ ʻʻಗುರುರಾಯರ ಧಾರ್ಮಿಕ ಕ್ಷೇತ್ರ ಮಂತ್ರಾಲಯ ಕ್ಷೇತ್ರ. ಈ ಕ್ಷೇತ್ರದಲ್ಲಿ ರಾಯರ 351ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ಎರಡು ವರ್ಷ ಕೊರೋನಾದಿಂದಾಗಿ ಸಂಭ್ರಮದಿಂದ ಆರಾಧನಾ ಮಹೋತ್ಸವ ಆಚರಿಸಲು ಸಾಧ್ಯವಾಗಿರಲಿಲ್ಲ. ತಂದೆಯವರು ನನಗೆ ಗುರು ರಾಘವೇಂದ್ರ ರಾಯರ ಹೆಸರಿನ ನಾಮಕರಣ ಮಾಡಿದ್ದಾರೆ. ನನ್ನ ತಮ್ಮನಿಗೆ ರಾಯರ ಗುರುಗಳಾದ ವಿಜಯೇಂದ್ರರ ಹೆಸರಿಡಲಾಗಿದೆ. ರಾಜ್ಯದಲ್ಲಿ ಮತ್ತು ದೇಶದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಆಗುತ್ತಾ ಇದೆ. ಯಾವುದೇ ಅತಿವೃಷ್ಟಿ ಅನಾವೃಷ್ಟಿ ನಡೆದರೂ, ದೇವರು ಸಮವಾದ ಫಲ ಕೊಟ್ಟಾಗ ರೈತ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುತ್ತದೆ. ಸಾಕಷ್ಟು ಮಳೆಯಾಗಿದೆ. ಸಾಕಷ್ಟು ಬೆಳೆ ನಾಶವಾಗಿದೆ. ರೈತರು ಸ್ವಾಭಿಮಾನದಿಂದ ಬದುಕು ನಡೆಸುವಂತಹ ವರ ಕರುಣಿಸಿ ಎಂದು ಸ್ವಾಮಿಗಳ ಬಳಿ ಕೇಳಿಕೊಂಡಿದ್ದೇನೆ. ಗುರುರಾಯರು ರೈತರಿಗೆ ಆಶೀರ್ವಾದ ಮಾಡಬೇಕು. ತಂದೆಯವರು ಮತ್ತು ನಮ್ಮ ಕುಟುಂಬಸ್ಥರು ಕ್ಷೇತ್ರದಲ್ಲಿ ಧಾರ್ಮಿಕ ಸೇವೆಯನ್ನು ಮಾಡುವಂತಹ ಆಶೀರ್ವಾದವನ್ನು ಗುರು ರಾಯರು ಮಾಡಬೇಕು. ಇದೇ ವೇಳೆ ಗುರುರಾಯರ ದರ್ಶನ ಕೂಡ ತುಂಬಾ ಚೆನ್ನಾಗಿ ಆಯಿತುʼʼ ಎಂದರು.
ಇದನ್ನೂ ಓದಿ | B.S.Yediyurappa | ಇನ್ನೊಂದು ಬಾರಿ ಸ್ಪರ್ಧೆ ಮಾಡಲಿ, ಚುನಾವಣೆ ನಿವೃತ್ತಿ ಬೇಡ!