Site icon Vistara News

VISL Badravathi: ವಿಐಎಸ್‌ಎಲ್‌ ಮರು ಆರಂಭಿಸಿ; ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಬಿ.ವೈ. ರಾಘವೇಂದ್ರ ಮನವಿ

B Y Raghavendra with SAIL chairman Amarendu Prakash

#image_title

ಶಿವಮೊಗ್ಗ: ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್‌) ಪುನಶ್ಚೇತನಕ್ಕೆ ಅಗತ್ಯ ಬಂಡವಾಳ ತೊಡಗಿಸುವ ಮೂಲಕ ಸ್ಥಗಿತಗೊಂಡಿರುವ ಎಲ್ಲಾ ಉತ್ಪಾದನಾ ಘಟಕಗಳನ್ನು ಪುನರಾರಂಭಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಭಾರತೀಯ ಉಕ್ಕು ಪ್ರಾಧಿಕಾರದ (ಎಸ್‌ಎಐಎಲ್‌) ಅಧ್ಯಕ್ಷ ಅಮರೇಂದು ಪ್ರಕಾಶ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಜತೆಗೆ ಅಗತ್ಯ ಕ್ರಮ ಕೈಗೊಳ್ಳಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೂ ಮನವಿ ಮಾಡಿದ್ದಾರೆ.

ನವ ದೆಹಲಿಯಲ್ಲಿ ಮನವಿ ಪತ್ರ ಸಲ್ಲಿಸಿರುವ ಅವರು, 1918ರಲ್ಲಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಅವಧಿಯಲ್ಲಿ ದಿವಾನರಾದ ಸರ್‌ ಎಂ.ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ವಿಐಎಸ್‌ಎಲ್‌ ಕಾರ್ಖಾನೆ ಆರಂಭವಾಯಿತು. ರಾಜ್ಯ ಸರ್ಕಾರದ ಅಧೀನದಲ್ಲಿದ್ದ ಕಾರ್ಖಾನೆ 1989ರಲ್ಲಿ ಕೇಂದ್ರ ಸರ್ಕಾರದ ಭಾರತೀಯ ಉಕ್ಕು ಪ್ರಾಧಿಕಾರದ ಸ್ವಾಮ್ಯಕ್ಕೆ ಒಳಪಟ್ಟಿತ್ತು. ಆದರೆ ನಷ್ಟದಲ್ಲಿದ್ದ ಕಾರ್ಖಾನೆಯನ್ನು ಮುಚ್ಚಿರುವುದರಿಂದ ಇದರ ಮೇಲೆ ಅವಲಂಬಿತವಾಗಿದ್ದ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ವಿಐಎಸ್‌ಎಲ್‌ ಮರು ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಬಿ.ವೈ.ರಾಘವೇಂದ್ರ ಮನವಿ ಪತ್ರದಲ್ಲಿ ಕೋರಿದ್ದಾರೆ.

ಕಾರ್ಖಾನೆ ಮೇಲಿನ ಹೂಡಿಕೆ ಹಿಂತೆಗೆತಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿ, 2019ರಲ್ಲಿ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಹೂಡಿಕೆದಾರರಿಗೆ ಆಹ್ವಾನ ನೀಡಿತ್ತು. ಖರೀದಿಗೆ ಯಾರೂ ಆಸಕ್ತಿ ತೋರದ ಹಿನ್ನೆಲೆಯಲ್ಲೆ ಕಾರ್ಖಾನೆ ಮುಚ್ಚಲು ಭಾರತೀಯ ಉಕ್ಕು ಪ್ರಾಧಿಕಾರ ನಿರ್ಧರಿಸಿತ್ತು. 2023ರ ಫೆಬ್ರವರಿಯಲ್ಲಿ ಕಾರ್ಖಾನೆ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ 280 ಕಾಯಂ ಸಿಬ್ಬಂದಿ, 1340 ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದು, ಇದರಿಂದ ಕಾರ್ಖಾನೆ ಮೇಲೆ ಅವಲಂಬನೆಯಾಗಿದ್ದ 10 ಸಾವಿರ ಕುಟುಂಬಗಳಿಗೆ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ.

b y raghavendra appeals for restart visl

ಕಾರ್ಖಾನೆಗೆ ಕಬ್ಬಿಣದ ಅದಿರು ಪೂರೈಸಲು ಕೇಂದ್ರ ಸರ್ಕಾರ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ 150 ಎಕರೆ ಮಂಜೂರು ಮಾಡಲಾಗಿತ್ತು. ಉಕ್ಕು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು, ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಕನಸು ಸಾಕಾರಗೊಳ್ಳಲು ಹಾಗೂ ಶಿವಮೊಗ್ಗ ಜಿಲ್ಲೆ ಸೇರಿ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕಾರ್ಖಾನೆಯನ್ನು ಮರು ಆರಂಭಿಸಬೇಕಿದೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ :ವಿಸ್ತಾರ ಸಂಪಾದಕೀಯ: ಭದ್ರಾವತಿಯ ಉಕ್ಕು ಕಾರ್ಖಾನೆ ರಾಜ್ಯದ ಹೆಮ್ಮೆ, ಇದಕ್ಕೆ ಮರು ಜೀವ ನೀಡಿ

ಈ ಸಂದರ್ಭದಲ್ಲಿ ಭದ್ರಾವತಿ ಬಿಜೆಪಿ ಮುಖಂಡರಾದ ಮಂಗೋಟೆ ರುದ್ರೇಶ್, ವಿಐಎಸ್ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜಗದೀಶ್ ಮತ್ತು ಇತರೆ ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್, ನೌಕರರ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಮತ್ತಿತರರು ಇದ್ದರು.

Exit mobile version