Site icon Vistara News

ಬಸವಣ್ಣನ ನಾಡಿನಲ್ಲಿ ಜಾತಿ ರಾಜಕಾರಣ ಸಲ್ಲ; ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ

ಬಿ.ವೈ.ವಿಜಯೇಂದ್ರ

ಬಾಗಲಕೋಟೆ: ಅಣ್ಣ ಬಸವಣ್ಣ ಅವರ ನಾಡಿನಲ್ಲಿ ಜಾತಿ ರಾಜಕಾರಣ ಮಾಡುವುದು ಸರಿಯಲ್ಲ. ಸರ್ವರಿಗೂ ಸಮಪಾಲು, ಸಮಬಾಳು, ಸಾಮಾಜಿಕ ನ್ಯಾಯ ಎಂಬುದು ಅವರ ಸಂದೇಶ. ದೇವರಾಜ ಅರಸು ಅವರು ರಾಜ್ಯದಲ್ಲಿ ಆ ರೀತಿಯ ಆಡಳಿತ ಕೊಟ್ಟಿದ್ದಾರೆ. ಅರಸು ನಂತರ ತುಳಿತಕ್ಕೆ ಒಳಗಾದ ಸಮಾಜಗಳು, ರೈತರು, ದಲಿತರು ಹಾಗೂ ಹಿಂದುಳಿದವರ ಪರ ಆಡಳಿತ ನೀಡಿದ್ದು ಬಿ.ಎಸ್‌. ಯಡಿಯೂರಪ್ಪ ಅವರು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಜಾತಿ ರಾಜಕಾರಣದ ಬಗ್ಗೆ ಇಳಕಲ್ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅಧಿಕಾರದಲ್ಲಿ ಇರಲಿ, ಇಲ್ಲದೆ ಇರಲಿ ಅವರು ನೀಡಿರುವ ಉತ್ತಮ ಆಡಳಿತದಿಂದ ಜನನಾಯಕ ಎಂದು ಜನರು ಒಪ್ಪಿದ್ದಾರೆ. ಹೀಗಾಗಿ ಜಾತಿ ಆಧಾರಿತವಾಗಿ ಚುನಾವಣೆ ಗೆಲ್ಲುತ್ತೇವೆ, ಅಧಿಕಾರ ಹಿಡಿಯುತ್ತೇವೆ ಎನ್ನುವುದು ಭ್ರಮೆ. ಬಿಜೆಪಿ ಎಲ್ಲ ಜಾತಿ, ಎಲ್ಲ ವರ್ಗ, ಧರ್ಮಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರಕ್ಕೆ ಬರುತ್ತದೆ ಎಂದರು.

ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ಕಿತ್ತಾಟದ ಬಗ್ಗೆ ಸ್ಪಂದಿಸಿ, ಸಿಎಂ ಸ್ಥಾನಕ್ಕೆ ಬೀದಿ ನಾಟಕ ಎನ್ನುವಂತೆ ಕಾಂಗ್ರೆಸ್ ನಡವಳಿಕೆಯಿದೆ. ಕಾಂಗ್ರೆಸ್ ಕಿತ್ತಾಟಕ್ಕೆ ರಾಜ್ಯದ ಜನ ಹಾಸ್ಯ ಮಾಡಿ ನಗುತ್ತಿದ್ದಾರೆ. ಬಿಜೆಪಿಗೆ ಕೇಂದ್ರದಲ್ಲಿ ದಿಟ್ಟ ನಾಯಕತ್ವ ಇದ್ದು, ರಾಜ್ಯದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಯಡಿಯೂರಪ್ಪ ಅವರಂತೆ ಜನಪರ ಆಡಳಿತ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.

ತಂತ್ರ-ಕುತಂತ್ರ ಸಹಜ

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿ, ಚುನಾವಣೆ ಬಂದಾಗ ಎಲ್ಲ ರಾಜಕೀಯ ಪಕ್ಷದವರು ಅವರದ್ದೇ ಆದ ತಂತ್ರ-ಕುತಂತ್ರ ಮಾಡುವುದು ಸಹಜವಲ್ಲವೇ? ರಾಜ್ಯದ ಜನ ಬಹಳ ಪ್ರಜ್ಞಾವಂತರಿದ್ದಾರೆ‌‌. ಯಾರನ್ನು ಆಯ್ಕೆ ಮಾಡಿದರೆ ರಾಜ್ಯದ ಅಭಿವೃದ್ಧಿ ಆಗುತ್ತದೆ ಎಂಬುದು ಅವರಿಗೆ ಗೊತ್ತು. ದೇಶದ ಜನ ಪ್ರಧಾನಿ ನರೇಂದ್ರ ಮೋದಿ ಅವರ ದೃಢ ನಾಯಕತ್ವದ ಬಗ್ಗೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ಕರ್ನಾಟಕದಲ್ಲೂ ಬಿಜೆಪಿ ಸಂಪೂರ್ಣ ಬಹುಮತದಿಂದ ಅಧಿಕಾರದಲ್ಲಿರಬೇಕು ಎಂಬುದು ಜನರ ಆಸೆ ಎಂದರು.

ಯಡಿಯೂರಪ್ಪ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ನೀವು ಯಾರಾದರೂ ಶಿಕಾರಿಪುರದಲ್ಲಿ ಸ್ಪರ್ಧಿಸುತ್ತೀರಾ ಎಂದು ಕ್ಷೇತ್ರದ ಮುಖಂಡರನ್ನು ಯಡಿಯೂರಪ್ಪ ಕೇಳಿದ್ದರು. ಕ್ಷೇತ್ರದ ಜನತೆ ತಾವೆ ನಿಲ್ಲಬೇಕು ಇಲ್ಲವೇ ನಿಮ್ಮ ಮಗನನ್ನು ನಿಲ್ಲಿಸಿ ಎಂದು ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಹೇಳಿದ್ದರು. ಹೀಗಾಗಿ ತಂದೆಯವರು ನನ್ನ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಆದರೆ ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿದ್ದು, ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆಯಾಗಬೇಕಾದರೂ ಅಂತಿಮವಾಗಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡಬೇಕು. ಯಡಿಯೂರಪ್ಪ ಅವರು ಕೂಡ ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ, ಹಾಗಾಗಿ ಮುಂದಿನ ದಿನಮಾನದಲ್ಲಿ ಪಕ್ಷ ತೀರ್ಮಾನ ಮಾಡುತ್ತದೆ ಎಂದರು.

ಕಬಡ್ಡಿ, ಚದುರಂಗದಾಟ ಗೊತ್ತಿರಬೇಕು

ಮರಿ ಯಡಿಯೂರಪ್ಪ ಎಂಬ ತಮ್ಮ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ವಿಜಯೇಂದ್ರ, ರಾಜಕಾರಣ ಎಂದರೆ ತಂತಿ ಮೇಲೆ ನಡೆದ ಹಾಗೆ, ಮುಂದಿನ ದಿನಗಳಲ್ಲಿ ರಾಜಕಾರಣದಲ್ಲಿ ಯಶಸ್ವಿಯಾಗಬೇಕಾದರೆ ಕಬಡ್ಡಿನೂ ಗೊತ್ತಿರಬೇಕು, ಚದುರಂಗದಾಟವನ್ನೂ ಆಡಬೇಕು. ಈ ನಿಟ್ಟಿನಲ್ಲಿ ಈ ಮಾತನ್ನು ಹೇಳಿದ್ದೇನೆ ಎಂದರು. ಹಳೇ ಮೈಸೂರ ಭಾಗದಲ್ಲಿ ಸ್ಪರ್ಧಿಸುವ ಬಗ್ಗೆ ಕಾರ್ಯಕರ್ತರು ಒತ್ತಾಯ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಯಾವುದೇ ಒಂದು ಭಾಗದಲ್ಲಿ ಸ್ಪರ್ಧೆ ಮಾಡುವುದರಿಂದ ಲಾಭ, ನಷ್ಟದ ಪ್ರಶ್ನೆ ಇಲ್ಲ. ಬಿಜೆಪಿ ಪಕ್ಷ ಸಂಘಟನೆ ಬಲವಾಗಿದೆ. ಪಕ್ಷದಲ್ಲಿ ವ್ಯಕ್ತಿ ಪೂಜೆ ನಡೆಯುವುದಿಲ್ಲ. ಒಗ್ಗಟ್ಟಾಗಿ ಹಿರಿಯರ ಆಶೀರ್ವಾದ, ಮಾರ್ಗದರ್ಶನದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು, ರಾಜ್ಯದಲ್ಲಿ ಉತ್ತಮ ಕೆಲಸ ಆಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ | ಪುತ್ರ ವಿಜಯೇಂದ್ರಗೆ ಬಿಎಸ್‌ವೈ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಡಲು 7 ಕಾರಣ

Exit mobile version