Site icon Vistara News

ದತ್ತ ಪೀಠ ಪೂಜಾ ವಿಧಾನ: ಸೆ.5ರವರೆಗೆ ಯಥಾಸ್ಥಿತಿ ಮುಂದುವರಿಕೆಗೆ ಹೈಕೋರ್ಟ್‌ ಸೂಚನೆ

ಪೂಜಾ ವಿಧಾನ

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿ ದತ್ತ ಪೀಠದಲ್ಲಿ ಸೆ.5ರವರೆಗೆ ಪೂಜಾ ವಿಧಾನ ಯಥಾಸ್ಥಿತಿ ಮುಂದುವರಿಕೆಗೆ ಹೈಕೋರ್ಟ್‌ ಆದೇಶ ನೀಡಿ, ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್‌ 5ಕ್ಕೆ ಮುಂದೂಡಿದೆ.

ಈ ಹಿಂದಿನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸೈಯದ್ ಗೌಸ್ ಮೊಹಿಯುದ್ದೀನ್ ಶಾ ಖಾದ್ರಿ ಎಂಬುವವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ಸೆ.5ರವರೆಗೆ ಪೂಜಾ ವಿಧಾನವನ್ನು ಯಥಾಸ್ಥಿತಿ ಮುಂದುವರಿಸುವಂತೆ ಸೂಚಿಸಿದೆ.

ಕೋರ್ಟ್‌ನಲ್ಲಿ ವಾದ ಮಂಡಿಸಿರುವ ಅಡ್ವೋಕೇಟ್‌ ಜನರಲ್ ಎಜಿ ಪ್ರಭುಲಿಂಗ್ ನಾವದಗಿ, ದತ್ತ ಪೀಠದಲ್ಲಿ ಹಿಂದು ಹಾಗೂ ಮುಸ್ಲಿಂ ಧರ್ಮಗಳ ಸಂಪ್ರದಾಯಗಳ ಪ್ರಕಾರ ಪೂಜಾವಿಧಿ ನಡೆಸಲು (ಮುಜಾವರ್ ಹಾಗೂ ಅರ್ಚಕರಿಂದ) ಸಂಪುಟದ ಉಪಸಮಿತಿ ಶಿಫಾರಸಿನಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದು, ಸಚಿವ ಸಂಪುಟದ ನಿರ್ಧಾರದ ಪ್ರತಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌ ಸರ್ಕಾರ ನಿರ್ಧಾರದ ಪ್ರತಿಯನ್ನು ಅರ್ಜಿದಾರರಿಗೆ ನೀಡಲು ಸೂಚಿಸಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿದೆ.

ಸರ್ಕಾರ ಸುತ್ತೋಲೆಯಲ್ಲಿ ಏನಿತ್ತು
ಚಿಕ್ಕಮಗಳೂರಿನ ಶ್ರೀ ಗುರು ದತ್ತಾತ್ರೇಯ ಪೀಠದಲ್ಲಿ ಧಾರ್ಮಿಕ ವಿಧಿಗಳನ್ನು ನೆರವೇರಿಸಲು ಮುಜಾವರ್‌ ಜತೆ ಆಗಮಶಾಸ್ತ್ರ ಗೊತ್ತಿರುವ ಹಿಂದು ಅರ್ಚಕರನ್ನು ನೇಮಿಸಲು ಸರ್ಕಾರ ತೀರ್ಮಾನಿಸಿತ್ತು. ಈ ಸಂಬಂಧ ಕಳೆದ ಆಗಸ್ಟ್ 19 ರಂದು ಸುತ್ತೋಲೆ ಹೊರಡಿಸಿದ್ದು, ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಪ್ರತಿನಿಧಿಗಳು ಇರುವ ವ್ಯವಸ್ಥಾಪನಾ ಸಮಿತಿ ರಚಿಸಬೇಕು. ಅರ್ಚಕ ಮತ್ತು ಮುಜಾವರ್‌ ಅವರನ್ನು ಈ ವ್ಯವಸ್ಥಾಪನಾ ಸಮಿತಿಯಿಂದಲೇ ನೇಮಿಸಬೇಕು ಸೂಚಿಸಿತ್ತು.

ಇದನ್ನೂ ಓದಿ | Rave Party | ರಾಜಸ್ಥಾನದಲ್ಲಿ ರೇವ್‌ ಪಾರ್ಟಿ ಮಾಡ್ತಿದ್ದ ಕೋಲಾರದ ಇನ್ಸ್‌ಪೆಕ್ಟರ್‌; ಕರ್ನಾಟಕದ 7 ಮಂದಿ ಸೆರೆ!

Exit mobile version