ಬೆಂಗಳೂರು: ಈಗಾಗಲೆ ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರ ಅಸಮಾಧಾನ ವ್ಯಕ್ತವಾಗಿ ಸಂಘಟನೆಯೇ ಅಲುಗಾಡುತ್ತಿದ್ದು, ಅದಕ್ಕೆ ತಕ್ಕಂತೆ ಮಾಜಿ ಕಾಂಗ್ರೆಸಿಗ ಬಾಬುರಾವ್ ಚಿಂಚನಸೂರು ಅವರಿಗೆ ವಿಧಾನ ಪರಿಷತ್ ಉಪಚುನಾವಣೆ ಟಿಕೆಟ್ ನೀಡಿದ್ದು ಆಕ್ರೋಶವನ್ನು ಹೆಚ್ಚಿಸಿತ್ತು. ಇದೀಗ ಗಾಯಕ್ಕೆ ಉಪ್ಪು ಸುರಿದಂತೆ, ತಾವು ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುತ್ತೇನೆ ಎಂದು ಸ್ವತಃ ಚಿಂಚನಸೂರು ಹೇಳಿರುವುದು ಅನೇಕ ಅನುಮಾನಗಳಿಗೆ ಕಾಣವಾಗಿದೆ.
ವಿಧಾನಸಭೆಯಿಂದ ಆಯ್ಕೆ ಮಾಡಲಾಗುವ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಬಿಜೆಪಿಯಿಂದ ಕಣಕ್ಕಿಳಿಯಲು ಬಿಜೆಪಿಯ ಅನೇಕರು ಪ್ರಯತ್ನ ನಡೆಸುತ್ತಿದ್ದರು. ಈ ಸ್ಥಾನವನ್ನು ಕಾಂಗ್ರೆಸ್‌ನಲ್ಲಿದ್ದ ಸಿ.ಎಂ. ಇಬ್ರಾಹಿಂ ಹೊಂದಿದ್ದರು. ಆದರೆ ಅವರು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಸ್ಥಾನ ನೀಡಲಿಲ್ಲ ಎಂದು ಬೇಸರಗೊಂಡು ರಾಜೀನಾಮೆ ನೀಡಿದ್ದರು. 2018ರಿಂದ 2024ರವರೆಗೆ ಈ ಸ್ಥಾನ ಇರುತ್ತದೆ. ಅಂದರೆ ಈ ಉಪಚುನಾವಣೆಯಲ್ಲಿ ಆಯ್ಕೆಯಾಗುವವರು ಇನ್ನೆರಡು ವರ್ಷ ಅಧಿಕಾರದಲ್ಲಿರಬಹುದು. ಎರಡು ವರ್ಷವಾದರೂ ಸರಿ ಒಂದು ಬಾರಿ ಅವಕಾಶ ನೀಡಿ ಎಂದು ಅನೇಕ ಕಾರ್ಯಕರ್ತರು ಬೆಂಗಳೂರಿನಿಂದ ನವದೆಹಲಿಯವರೆಗೆ ಪ್ರಯತ್ನ ನಡೆಸಿದ್ದರು.
ಆದರೆ ಪಕ್ಷದ ಎಲ್ಲ ಅಭ್ಯರ್ಥಿಗಳನ್ನೂ ಬದಿಗಿಟ್ಟು ಕಾಂಗ್ರೆಸ್‌ನಿಂದ ಆಗಮಿಸಿದ ಬಾಬುರಾವ್ ಚಿಂಚನಸೂರು ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿತ್ತು. ಇದರಿಂದ ಪಕ್ಷದ ಅನೇಕರು ಬೇಸರಗೊಂಡಿದ್ದಾರೆ. ಪಕ್ಷಕ್ಕಾಗಿ ದುಡಿದವರಿಗಿಂತಲೂ ಹೊರಗಿಂದ ಬಂದವರಿಗೇ ಎಲ್ಲ ಸ್ಥಾನಗಳೂ ಸಿಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಹೆಸರಿಗೆ ಇದು ಚುನಾವಣೆ ಎಂದಿದ್ದರೂ ಬಿಜೆಪಿ ಅಭ್ಯರ್ಥಿಯೇ ಗೆಲ್ಲುವುದರಿಂದ ಉಳಿದವರು ಅಭ್ಯರ್ಥಿ ಹಾಕುವುದಿಲ್ಲ ಹಾಗಾಗಿ ಅವಿರೋಧ ಆಯ್ಕೆ ಖಚಿತ.
ಪಕ್ಷವನ್ನು ಗೆಲ್ಲಿಸಿದ್ದರು ಎಂದ ಕಟೀಲ್
ಬಿಜೆಪಿ ಅಭ್ಯರ್ಥಿಯಾಗಿ ಬಾಬುರಾವ್ ಚಿಂಚನಸೂರು ಸೋಮವಾರ ನಾಮಪತ್ರ ಸಲ್ಲಿಸಿದರು. ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಲಾಯಿತು. ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಚಿಂಚನಸೂರು ಅವರು ಕಾಂಗ್ರೆಸ್‌ನಲ್ಲಿದ್ದರು. ಆ ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಅವರ ಪಾತ್ರ ಮಹತ್ವದ್ದಾಗಿದೆ. ನಮ್ಮ ಪಕ್ಷಕ್ಕೆ ಅವರ ಕೊಡುಗೆ ಅಪಾರವಾದದ್ದು. ಅವರು ಜಯಗಳಿಸುವುದು ನೂರಕ್ಕೆ ನೂರು ಖಚಿತ ಎಂದರು.
ಗುರುಮಿಠಕಲ್‌ಗೆ ನಾನೇ ಅಭ್ಯರ್ಥಿ
ನಾಮಪತ್ರ ಸಲ್ಲಿಕೆ ನಂತರ ಪ್ರತಿಕ್ರಿಯಿಸಿದ ಬಾಬುರಾವ್ ಚಿಂಚನಸೂರು, ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿ ಪ್ರಬಲವಾಗಿದೆ. ಇದನ್ನು ಗುರುತಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಟಿಕೆಟ್ ನೀಡಿದ್ದಾರೆ. ಈ ಭಾಗದಲ್ಲಿ ಕೋಳಿ ಸಮಾಜ ಪ್ರಬಲವಾಗಿದೆ. ಮುಂದಿನ ದಿನಗಳಲ್ಲಿ ಪಕ್ಷ ಮತ್ತಷ್ಟು ಶಕ್ತಿಶಾಲಿ ಆಗಲಿದೆ.
ವಿಧಾನಸಭೆ ಚುನಾವಣೆಯಲ್ಲಿ ಯಾರೂ ಬಿಜೆಪಿಯನ್ನು ಮಣಿಸಲು ಸಾಧ್ಯವಿಲ್ಲ. ಗುರುಮಿಟಕಲ್ ಕ್ಷೇತ್ರಕ್ಕೆ ನಾನೇ ಬಿಜೆಪಿ ಅಭ್ಯರ್ಥಿ. 50 ವರ್ಷದಿಂದ ನಾನು ರಾಜಕೀಯ ಮಾಡುತ್ತಿದ್ದೇನೆ. ಆ ಚುನಾವಣೆಯಲ್ಲಿ 45ಸಾವಿರಕ್ಕಿಂತ ಹೆಚ್ಚು ಮತಗಳಿಂದ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ. ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದ ಅಭ್ಯರ್ಥಿ ವಿಧಾನಸಭೆ ಚುನಾವಣೆಯ ಗೆಲುವಿನ ಬಗ್ಗೆ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ.
ಬಿಜೆಪಿಯಲ್ಲಿ 75 ವರ್ಷ ಮೀರಿದವರಿಗೆ ಟಿಕೆಟ್ ನೀಡುವುದಿಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಇನ್ನೂ ಹೊಸ ಮದುವೆ ಗಂಡು ತರಹ ಇದ್ದೇನೆ. ನನಗೆ ವಯಸ್ಸಾಗಿದೆ ಎಂದು ಯಾರು ಹೇಳಿದ್ದು? ಮುಂದೆ 2023ಕ್ಕೆ ಗುರುಮಿಟಕಲ್‌ನಿಂದ ನಿಂತು ಗೆಲ್ಲಲು ಓಡಾಡುತ್ತಿದ್ದೇನೆ. ಮಾಲೀಕಯ್ಯ ಗುತ್ತೇದಾರ್ ಹಾಗೂ ನಾನು ಜೋಡೆತ್ತುಗಳು ಇದ್ದಂತೆ, ಅವರನ್ನು ಯಾರು ಸೈಡ್‌ಲೈನ್ ಮಾಡಿದ್ದಾರೆ? ಎಂದು ತಿಳಿಸಿದ್ದಾರೆ.
ಈ ಸ್ಥಾನದ ಅವಧಿ ಎರಡು ವರ್ಷ ಇದ್ದು, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಾಗ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಹಾಗಾದರೆ ಒಂದು ವರ್ಷದ ಅವಧಿಗಾಗಿ ಬಿಜೆಪಿ ನಾಯಕರು ಬಾಬುರಾವ್ ಚಿಂಚನಸೂರು ಅವರಿಗೆ ಟಿಕೆಟ್ ನೀಡಿದರೆ? ಎಂಬ ಚರ್ಚೆ ಪಕ್ಷ ವಲಯದಲ್ಲಿ ಆರಂಭವಾಗಿದೆ.
ಇದನ್ನೂ ಓದಿ | ಮಾಜಿ ಕಾಂಗ್ರೆಸಿಗ ಬಾಬುರಾವ್ ಚಿಂಚನಸೂರ್‌ಗೆ ಬಿಜೆಪಿ ಮೇಲ್ಮನೆ ಟಿಕೆಟ್