ಉಡುಪಿ: ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬುಧವಾರ (ಜು.13) ಉಡುಪಿಯ ವಿವಿಧ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಮಳೆ ಹಾನಿ ಬಗ್ಗೆ ಜಿಲ್ಲಾಡಳಿತದಿಂದ ಮಾಹಿತಿ ಪಡೆಯಲಿದ್ದಾರೆ.
ಮಂಗಳವಾರ ರಾತ್ರಿ (ಜು.12) ಉಡುಪಿಗೆ ಆಗಮಿಸಿದ್ದ ಸಿಎಂ ಬೊಮ್ಮಾಯಿ ಮಣಿಪಾಲದಲ್ಲಿ ವಾಸ್ತವ್ಯ ಹೂಡಿದ್ದರು. ಬುಧವಾರ (ಜು.13) ದ.ಕ., ಉಡುಪಿ, ಉತ್ತರಕನ್ನಡ ಜಿಲ್ಲೆಗಳ ನೆರೆ ಹಾನಿ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ರಜತಾದ್ರಿಯಲ್ಲಿ ಸಭೆ ನಡೆಸಿ ಚರ್ಚೆ ನಡೆಸಲಿದ್ದಾರೆ.
ಇದನ್ನೂ ಓದಿ | Chief Minister Tour | ಸಂಕಷ್ಟ ಕಾಲದಲ್ಲಿ ಜನರೊಂದಿಗಿದೆ ಸರ್ಕಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕಂದಾಯ ಸಚಿವ ಆರ್ ಆಶೋಕ್, ಉಡುಪಿ ಉಸ್ತುವಾರಿ ಸಚಿವ ಎಸ್.ಅಂಗಾರ ಹಾಗೂ ಸಚಿವ ಸುನೀಲ್ ಕುಮಾರ್ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲೆಯ ಐವರು ಶಾಸಕರ ಜತೆ ಸಭೆ ನಡೆಸಲಿದ್ದಾರೆ. ಡಿಸಿ, ಎಸ್‌ಪಿ, ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳೂ ಸಭೆಯಲ್ಲಿ ಹಾಜರಿರಲಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಸೇರಿದಂತೆ ಇತರ ಕಡೆಗೆ ತೆರಳಿರುವ ಸಿಎಂ ನೆರೆ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ. ಕಡಲ್ಕೊರೆತ, ನೆರೆ-ಬೆಳೆ ಹಾನಿ ಪರಿಶೀಲನೆ ನಡೆಸಿ, ಉಡುಪಿ ಜಿಲ್ಲೆಯಲ್ಲಿ ನೆರೆ ಪರಿಹಾರಕ್ಕೆ ಸಂಬಂಧಪಟ್ಟಂತೆ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆಂದು ಹೇಳಲಾಗಿದೆ. ಸಂಜೆ ವೇಳೆಗೆ ಮಂಗಳೂರಿಗೆ ವಾಪಸ್ ತೆರಳಲಿದ್ದಾರೆ.
ಇದನ್ನೂ ಓದಿ | Farmers | ಅನ್ನದಾತರಿಂದ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಯತ್ನ: ರೈತರ ವಶಕ್ಕೆ ಪಡೆದ ಪೊಲೀಸರು