ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಿಸಿರುವ ನಡುವೆಯೇ ಅವರು ಈಗ ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರದ ಜನರ ಒತ್ತಡ ತಂತ್ರ ಮುಂದುವರಿದಿದೆ. ಸಿದ್ದರಾಮಯ್ಯ ಅವರು ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿ ಬಾದಾಮಿಯಿಂದ ದಿಲ್ಲಿ ಚಲೋವನ್ನೂ ಹಮ್ಮಿಕೊಳ್ಳಲಾಗಿದೆ.
ʻʻನಾನು ಕೋಲಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಮುಂದಿನ ತೀರ್ಮಾನ ಹೈಕಮಾಂಡ್‌ನದ್ದು. ಅದು ಹೇಳಿದಂತೆ ನಡೆಯುತ್ತೇನೆʼʼ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ. ಈಗ ಬಾದಾಮಿ ಜನ ಹೈಕಮಾಂಡ್‌ನ್ನೇ ಮನವೊಲಿಸುವ ಉದ್ದೇಶದಿಂದ ದಿಲ್ಲಿಗೆ ಹೊರಟಿಸಿದ್ದರೆ.
ಕೇಂದ್ರ ಚುನಾವಣಾ ಸಮಿತಿ ಟಿಕೆಟ್ ಫೈನಲ್ ಮಾಡುವ ಮುನ್ನ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸಿದ್ದರಾಮಯ್ಯ ಅವರಿಗೆ ಬಾದಾಮಿಯಿಂದಲೇ ಟಿಕೆಟ್ ಕೊಡಿ ಎಂದು ಮನವೊಲಿಸುವುದು ಇಲ್ಲಿನ ಕೆಲವು ಕೈ ನಾಯಕರ ಪ್ಲ್ಯಾನ್ ಆಗಿದೆ.
ಮೊದಲು ಸಿದ್ದರಾಮಯ್ಯ ಮನವೊಲಿಕೆ
ಬಾದಾಮಿಯ ಸಿದ್ದರಾಮಯ್ಯ ಅಭಿಮಾನಿಗಳು ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮೊದಲ ಹಂತದಲ್ಲಿ ಅವರ ಮನವೊಲಿಸುವ ಪ್ರಯತ್ನ ನಡೆಸಲಿದ್ದಾರೆ. ಈ ಬಗ್ಗೆ ಇಲ್ಲಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸುಮಾರು ೨೦ ಮಂದಿ ಕೈ ನಾಯಕರು ಬೆಂಗಳೂರಿಗೆ ತೆರಳಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಿದ್ದಾರೆ. ಅವರು ಒಪ್ಪಿಕೊಳ್ಳದೆ ಹೋದರೆ ದೆಹಲಿ ಹೋಗಿ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲಿದ್ದಾರೆ. ಹಾಗಂತ ದಿಲ್ಲಿಗೆ ಕೇವಲ ೨೦ ಮಂದಿ ಹೋಗುವುದಿಲ್ಲ. ಬಾದಾಮಿಯಿಂದ ೧ ಸಾವಿರಕ್ಕೂ ಅಧಿಕ ಜನ ರೈಲ್ವೆ ಮೂಲಕ ದೆಹಲಿಗೆ ತೆರಳುವ ಪ್ಲ್ಯಾನ್ ರೆಡಿಯಾಗಿದೆ.
ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಯುವ ಎರಡು ದಿನ ಮುನ್ನ ದೆಹಲಿಗೆ ತೆರಳಲಿರುವ ಟೀಮ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ಹೈಕಮಾಂಡ್ ನಾಯಕರ ಭೇಟಿಯಾಗಿ ಮನವಿ ಮಾಡಲು ಮುಂದಾಗಿದೆ.
ಸಿದ್ದರಾಮಯ್ಯನವರಿಗೆ ಮತ್ತೆ ಬಾದಾಮಿಯಿಂದಲೇ ಟಿಕೆಟ್ ನೀಡುವಂತೆ ಹೈಕಮಾಂಡನ್ನು ಒತ್ತಾಯಿಸುವ ಮೂಲಕ ಒತ್ತಡ ತಂತ್ರ ಮುಂದುವರಿಸಲಿದೆ.
ಈ ನಡುವೆ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕೂಡಾ ಸಿದ್ದರಾಮಯ್ಯ ಅವರು ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು ಎಂಬ ಆಗ್ರಹವನ್ನು ಮುಂದಿಟ್ಟಿರುವುದು ಗಮನ ಸೆಳೆದಿದೆ.
ಇದನ್ನೂ ಓದಿ : Temple and Non-Veg : ಮಾಂಸ ತಿಂದು ದೇಗುಲ ಪ್ರವೇಶ ವಿಚಾರದಲ್ಲಿ ನನ್ನನ್ನು ಟೀಕಿಸಿದವರು ಈಗ ಎಲ್ಲಿದ್ದಾರೆ; ಸಿದ್ದರಾಮಯ್ಯ ಪ್ರಶ್ನೆ