ಬಾಗಲಕೋಟೆ: ಇಲ್ಲಿನ ಕುಮಾರೇಶ್ವರ ಆಸ್ಪತ್ರೆ ವೈದ್ಯರು ವೃದ್ಧನ ಹೊಟ್ಟೆಯಲ್ಲಿದ್ದ 187 ನಾಣ್ಯಗಳನ್ನು ಶಸ್ತ್ರಚಿಕಿತ್ಸೆ ಮೂಲಕ (Bagalakote News) ಹೊರತೆಗೆದಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂರು ಮೂಲದ ದ್ಯಾಮಪ್ಪ ಹರಿಜನ (೫೮) ಎಂಬುವವರು ನಾಣ್ಯಗಳನ್ನು ನುಂಗಿದವರಾಗಿದ್ದಾರೆ.
ದ್ಯಾಮಪ್ಪನಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಾಗ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಕ್ಯಾನ್ ಮಾಡಿದಾಗ ಹೊಟ್ಟೆಯೊಳಗೆ ಕಾಯಿನ್‌ಗಳಿರುವುದು ಪತ್ತೆಯಾಗಿದೆ. ಕೂಡಲೇ ಎಂಡೋಸ್ಕೋಪಿ ಮೂಲಕ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಕಾಯಿನ್ ಹೊರತೆಗೆದಿದ್ದಾರೆ.
5 ರೂಪಾಯಿಯ 56 ನಾಣ್ಯ, 2 ರೂಪಾಯಿಯ 51 ನಾಣ್ಯ ಹಾಗೂ 1 ರೂಪಾಯಿಯ 80 ನಾಣ್ಯಗಳು ಸೇರಿ ಒಟ್ಟು 187 ನಾಣ್ಯಗಳನ್ನು ನುಂಗಿದ್ದಾರೆ. ಇದನ್ನು ಹೊರ ತೆಗೆದ ಮೇಲೆ ಲೆಕ್ಕ ಮಾಡಿದಾಗ 470 ರೂಪಾಯಿ ನುಂಗಿದ್ದಾರೆಂಬ ಮಾಹಿತಿ ತಿಳಿದುಬಂದಿದೆ ಎಂದು ಡಾ.ಈಶ್ವರ ಕಲಬುರಗಿ, ಡಾ.ಪ್ರಕಾಶ ಕಟ್ಟಿಮನಿ ತಿಳಿಸಿದ್ದಾರೆ. ಅರಿವಳಿಕೆ ತಜ್ಞರಾದ ಡಾ.ಅರ್ಚನಾ, ಡಾ.ರೂಪಾ ಹುಲಕುಂದೆ ಅವರ ಸಹಕಾರದಿಂದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಯಾವ ಕಾರಣಕ್ಕೆ ಇಷ್ಟು ಕಾಯಿನ್‌ಗಳನ್ನು ನುಂಗಿದ್ದಾರೆಂಬುದು ತಿಳಿದು ಬಂದಿಲ್ಲ. ಶಸ್ತ್ರಚಿಕಿತ್ಸೆ ಬಳಿಕ ದ್ಯಾಮಪ್ಪ ಹರಿಜನ ಸುಧಾರಿಸಿಕೊಳ್ಳುತ್ತಿದ್ದಾರೆ. ಇತ್ತ ಆತ್ಮಹತ್ಯೆಗೆ ಯತ್ನಿಸಿ ಹೀಗೆ ಮಾಡಿರಬಹುದೆಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Janasankalpa Yatre | ಕಾಂಗ್ರೆಸ್ ವಿರುದ್ಧ ಅವಾಚ್ಯ ಶಬ್ದ ಬಳಸಿದ ಸಿ.ಟಿ. ರವಿ: ಕೊಪ್ಪದಲ್ಲಿ ಉಗ್ರ ಭಾಷಣ